ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಿಕ್ಷಾ ಚಾಲಕರ ಸಂಘ ಮನವಿ

| Published : Sep 05 2024, 12:34 AM IST

ವಿವಿಧ ಬೇಡಿಕೆಗಳ ಈಡೇರಿಕೆಗೆ ಕರ್ನಾಟಕ ರಿಕ್ಷಾ ಚಾಲಕರ ಸಂಘ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಕರ್ನಾಟಕ ರಿಕ್ಷಾ ಚಾಲಕ- ಮಾಲಕರ ಸಂಘದ ವತಿಯಿಂದ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಇ- ಆಟೋರಿಕ್ಷಾಗಳಿಗೆ ಹಾಗೂ ಇತರ ರಿಕ್ಷಾಗಳಿಗೆ ಸಮಾನ ಅವಕಾಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಪುತ್ತೂರು ಕರ್ನಾಟಕ ರಿಕ್ಷಾ ಚಾಲಕ- ಮಾಲಕರ ಸಂಘದ ವತಿಯಿಂದ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ಇ- ರಿಕ್ಷಾಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು, ಯಾವುದೇ ರಿಕ್ಷಾ ನಿಲ್ದಾಣದಲ್ಲಿ ನಿಲುಗಡೆಗೆ, ಬಾಡಿಗೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ತಾಲೂಕು ಪರವಾನಗಿ ಪಡೆದು ಬಾಡಿಗೆ ಮಾಡುತ್ತಿರುವ ರಿಕ್ಷಾ ಚಾಲಕರಿಗೆ ಸಮಸ್ಯೆ ಉಂಟಾಗಿದೆ. ತಕ್ಷಣ ಈ ಪ್ರಕ್ರಿಯೆನ್ನು ರದ್ದುಗೊಳಿಸಿ ಪರವಾನಗಿ ಆಧಾರದಲ್ಲಿ ಬಾಡಿಗೆ ಮಾಡಲು ಅವಕಾಶ ನೀಡಬೇಕು, ಇ- ಆಟೋ ರಿಕ್ಷಾಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಲು ಅನುಮತಿ ನೀಡಿದಲ್ಲಿ ಇತರ ಎಲ್ಲಾ ರಿಕ್ಷಾಗಳಿಗೂ ಅನುಮತಿ ನೀಡುವ ಮೂಲಕ ಚಾಲಕರ ನಡುವೆ ಸಂಘರ್ಷಕ್ಕೆ ಅವಕಾಶವಾಗದಂತೆ ಮಾಡಬೇಕು, ರಿಕ್ಷಾಗಳಿಗೆ ತಾಲೂಕು ಪರವಾನಗಿ ನೀಡುವ ಸಂದರ್ಭದಲ್ಲಿ ಮಾಲಕರ ವಿಳಾಸದ ಆಧಾರದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರಿಕ್ಷಾ ತಂಗುದಾಣ ನಿಗದಿಗೊಳಿಸಬೇಕು. ಪುತ್ತೂರು ನಗರ ಪ್ರದೇಶದಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ರಿಕ್ಷಾ ತಂಗುದಾಣಕ್ಕೆ ಸ್ಥಳಾವಕಾಶ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯಾಧ್ಯಕ್ಷ ಜಯರಾಮ ಕುಲಾಲ್, ಗಿರೀಶ್ ರೈ, ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಮಹಮ್ಮದ್ ಎ, ಸಲಹೆಗಾರ ಗಿರೀಶ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.