ಬಂಟ್ವಾಳ: ಮಹಿಳೆಯರಿಂದಲೇ ರೈತ ಉತ್ಪಾದಕ ಸಂಸ್ಥೆ

| Published : Mar 08 2024, 01:52 AM IST / Updated: Mar 08 2024, 02:53 PM IST

ಸಾರಾಂಶ

ಮಹಿಳೆಯರೇ ಸ್ಥಾಪಿಸಿದ ರಾಜ್ಯದ ಮೊದಲ ರೈತ ಉತ್ಪಾದಕ ಸಂಸ್ಥೆ ಎನ್ನುವ ಹಿರಿಮೆ ಬಂಟ್ವಾಳ ಸಂಜೀವಿನಿ ಮಹಿಳಾ ಕಿಸಾನ್‌ ಉತ್ಪಾದಕರ ಸಂಘಕ್ಕೆ ಸಂದಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿರುವ ‘ಬಂಟ್ವಾಳ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ (ಲಿ)’, ರೈತ ಮಹಿಳೆಯರೇ ಸ್ಥಾಪಿಸಿದ ರಾಜ್ಯದ ಮೊದಲ ರೈತ ಉತ್ಪಾದಕ ಕಂಪನಿ.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಸಂಜೀವಿನಿಯ ನಿರ್ದೇಶನದಂತೆ ಈ ಮೊತ್ತಮೊದಲ ನೋಂದಾಯಿತ ಕಂಪನಿಯನ್ನು ಸ್ಥಾಪಿಸಲಾಗಿದ್ದು, ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ.

ಏನಿದು ಕಂಪನಿ?
ಮಹಿಳಾ ರೈತರಿಗೆ ಸ್ವಾವಲಂಬನೆ ಕಲ್ಪಿಸುವುದು, ಕೃಷಿ ವಲಯದಲ್ಲಿ ಕೃಷಿ ಉತ್ಪನ್ನಗಳ ಮಾರಾಟ/ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ/ ದಲ್ಲಾಳಿಗಳ ಶೋಷಣೆಯನ್ನು ನಿಯಂತ್ರಿಸುವ ಉದ್ದೇಶವನ್ನು ಈ ಕಂಪನಿ ಹೊಂದಿದೆ. 

ರೈತ ಉತ್ಪಾದಕ ಕಂಪನಿಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಿದ್ದು, ಕರ್ನಾಟಕದಲ್ಲಿ 60 ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದೆ. 

ಈ ನಿಟ್ಟಿನಲ್ಲಿ ‘ಬಂಟ್ವಾಳ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ (ಲಿ)’, ರೈತ ಮಹಿಳೆಯರೇ ಸ್ಥಾಪಿಸಿದ ಚೊಚ್ಚಲ ಕಂಪನಿಯಾಗಿ ಗಮನ ಸೆಳೆದಿದೆ.

ಮೊದಲ ಹಂತದಲ್ಲಿ ಬಂಟ್ವಾಳ ತಾಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1000 ಸಣ್ಣ, ಅತಿ ಸಣ್ಣ ಮಹಿಳಾ ರೈತರನ್ನು ಸದಸ್ಯರನ್ನಾಗಿಸುವ ಗುರಿ ಇರಿಸಿಕೊಂಡು ಆರಂಭವಾದ ಕಂಪನಿ, ಈಗಾಗಲೇ 895 ಸದಸ್ಯರನ್ನು ಹೊಂದಿದೆ. 

ನಾವೂರು, ಸರಪಾಡಿ, ಮಣಿನಾಲ್ಕೂರು, ಉಳಿ, ಬಡಗಕಜೆಕಾರು, ಪಿಲಾತಬೆಟ್ಟು, ಕಾವಳ ಪಡೂರು, ಚೆನ್ನೈತ್ತೋಡಿ, ಕುಕ್ಕಿಪ್ಪಾಡಿ, ಇರ್ವತ್ತೂರು, ರಾಯಿ, ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಒಟ್ಟು 895 ಸದಸ್ಯರು ತಲಾ 1,500 ರಂತೆ ಷೇರು ಬಂಡವಾಳವನ್ನು ಹೂಡಿಕೆ ಮಾಡಿದ್ದು, ಒಟ್ಟು13,42,500 ರು. ಸಂಗ್ರಹವಾಗಿದೆ.

ರೈತ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವ 11 ಮಂದಿ ಮಹಿಳೆಯರನ್ನು ಕಂಪನಿಗೆ ನಿರ್ದೇಶಕರನ್ನಾಗಿ ನೇಮಿಸಿ, ಅವರಿಗೆ ಈಗಾಗಲೇ ಅಗತ್ಯ ತರಬೇತಿ-ಮಾಹಿತಿ ನೀಡಲಾಗಿದೆ. 

ಮುಂದಿನ ಹಂತದಲ್ಲಿ ಕಂಪನಿಗೆ ಕ್ರಿಯಾಶೀಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ನೇಮಕ ಆಗಬೇಕಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ. ಪಾಲು ಬಂಡವಾಳ ನೀಡಿ ಸದಸ್ಯರಾದ ಮಹಿಳಾ ರೈತರಿಗೆ ಪಂಚಾಯಿತಿವಾರು ತರಬೇತಿ ನೀಡಲಾಗುತ್ತದೆ. 

ಎಲ್ಲ ಕೃಷಿ ಕಾರ್ಯಗಳಿಗೆ ಕೊಂಡಿಯಾಗಿ, ಕೃಷಿಕರ ಬದುಕಲ್ಲಿ ಖುಷಿ ತರುವ ಕೆಲಸವನ್ನು ಕಂಪನಿ ಮಾಡಲಿದೆ.ಮೊದಲ ಹೆಜ್ಜೆಯಾಗಿ ನಾಟಿ ಕೋಳಿ ಸಾಕಾಣಿಕೆ ಹಾಗೂ ಜೇನುಕೃಷಿಯ ಕುರಿತು ಸದಸ್ಯರಿಗೆ ತರಬೇತಿ ನೀಡಿ, ಆ ಮೂಲಕ ಕಂಪನಿ ಕಾರ್ಯಾರಂಭ ಮಾಡುತ್ತಿದೆ. 

ರೈತ ಮಹಿಳೆಯರು ತಾವು ಬೆಳೆದ ಬೆಳೆಗಳನ್ನು, ಉತ್ಪನ್ನಗಳನ್ನು ಕಂಪನಿಗೆ ನೇರವಾಗಿ ನೀಡುವುದರಿಂದ ಹೆಚ್ಚಿನ ಲಾಭ ಕೂಡ ಪಡೆಯಬಹುದಾಗಿದೆ.