17ರಿಂದ ಕರಾವಳಿಯಲ್ಲಿ ಪ್ರಥಮ ಬಾರಿಗೆ ‘ಕರ್ನಾಟಕ ಕ್ರೀಡಾಕೂಟ’

| Published : Jan 10 2025, 12:47 AM IST

17ರಿಂದ ಕರಾವಳಿಯಲ್ಲಿ ಪ್ರಥಮ ಬಾರಿಗೆ ‘ಕರ್ನಾಟಕ ಕ್ರೀಡಾಕೂಟ’
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಫೆನ್ಸಿಂಗ್ (ಕತ್ತಿ ವರಸೆ), ಫುಟ್ಬಾಲ್, ಹ್ಯಾಂಡ್‌ಬಾಲ್, ಖೋ-ಖೋ, ನೆಟ್‌ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್, ಭಾರ ಎತ್ತುವ ಸ್ಪರ್ಧೆ, ವುಶು, ಉಡುಪಿಯಲ್ಲಿ ಆರ್ಚರಿ (ಬಿಲ್ಲುಗಾರಿಕೆ), ಅತ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೋಯಿಂಗ್, ಮಣಿಪಾಲದಲ್ಲಿ ಹಾಕಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್ಸ್ ಮತ್ತು ಶೂಟಿಂಗ್ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ‘ಕರ್ನಾಟಕ ಕ್ರೀಡಾಕೂಟ-2025’ ಜ.17ರಿಂದ 23ರವರೆಗೆ ನಡೆಯಲಿದ್ದು, ಭರದ ಸಿದ್ಧತೆ ನಡೆದಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾರೋಪಕ್ಕೆ ಗೃಹ ಸಚಿವ ಪರಮೇಶ್ವರ್‌ ಆಗಮಿಸಲಿದ್ದಾರೆ. ಹೆಸರಾಂತ ಕ್ರೀಡಾಪಟುಗಳು, ಸಚಿವರುಗಳು ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಒಲಿಂಪಿಕ್‌ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ., ಉಡುಪಿ ಜಿಲ್ಲಾಡಳಿತ ವತಿಯಿಂದ ಈ ಪ್ರತಿಷ್ಠಿತ ಕ್ರೀಡಾಕೂಟ ಆಯೋಜಿಸಲಾಗಿದ್ದು, ಗುರುವಾರ ನಗರದಲ್ಲಿ ವಿಧಾನಸಭೆ ಸ್ಪೀಕರ್‌ ಅವರು ರಾಜ್ಯದ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳನ್ನೊಳಗೊಂಡ ಪೂರ್ವಭಾವಿ ಸಭೆ ಆಯೋಜಿಸಿದ್ದರು.25 ಕ್ರೀಡೆ, 3 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು:

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ್ಪೀಕರ್‌ ಹಾಗೂ ಕ್ರೀಡಾಕೂಟದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಯು.ಟಿ. ಖಾದರ್ ಫರೀದ್‌, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಆಟಗಾರರ ಸಹಿತ ಒಟ್ಟು 25 ಕ್ರೀಡೆಗಳಲ್ಲಿ 3,247 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾರತದ ತಂಡಗಳಲ್ಲಿ ಸ್ಥಾನ ಗಳಿಸಲು ಇಂತಹ ಕ್ರೀಡೆಗಳಲ್ಲಿ ಪಡೆಯುವ ಪದಕಗಳನ್ನು ಬೆಂಚ್‌ಮಾರ್ಕ್ ಆಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಈ ಕ್ರೀಡಾಕೂಟ ಮಹತ್ವ ಪಡೆದಿದೆ ಎಂದು ಹೇಳಿದರು.

17ರಂದು ಸಿಎಂ ಉದ್ಘಾಟನೆ: ಜ.17ರಂದು ಸಂಜೆ 5 ಗಂಟೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡುವರು. ಇದಕ್ಕೂ ಮೊದಲು ನಗರದ ಪಿವಿಎಸ್ ಕಲಾಕುಂಜ ಮುಂಭಾಗದಿಂದ ಮೈದಾನವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ವಿವಿಧ ಅಕಾಡೆಮಿಗಳ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.

ಸಮಾರೋಪ ಸಮಾರಂಭ ಜ.23ರಂದು ಸಂಜೆ 4.30ಕ್ಕೆ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭಾಗವಹಿಸುವರು.

5 ಕೋಟಿ ರು. ಅನುದಾನ: ಕ್ರೀಡಾಕೂಟಕ್ಕೆ 5 ಕೋಟಿ ರು.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಒದಗಿಸುವ ಭರವಸೆ ನೀಡಿದ್ದಾರೆ. ಕ್ರೀಡಾಕೂಟದ ಲಾಂಛನವನ್ನು ಕಳೆದ ಡಿ.23ರಂದು ಮುಖ್ಯಮಂತ್ರಿ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಯು.ಟಿ. ಖಾದರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಗೋವಿಂದರಾಜು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಣದೀಪ್, ಆಯುಕ್ತ ಚೇತನ್, ದಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗ್ರವಾಲ್‌ ಇದ್ದರು.ಯಾವ್ಯಾವ ಕ್ರೀಡಾಕೂಟ?

ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಫೆನ್ಸಿಂಗ್ (ಕತ್ತಿ ವರಸೆ), ಫುಟ್ಬಾಲ್, ಹ್ಯಾಂಡ್‌ಬಾಲ್, ಖೋ-ಖೋ, ನೆಟ್‌ಬಾಲ್, ಈಜು, ಟೇಕ್ವಾಂಡೋ, ವಾಲಿಬಾಲ್, ಭಾರ ಎತ್ತುವ ಸ್ಪರ್ಧೆ, ವುಶು, ಉಡುಪಿಯಲ್ಲಿ ಆರ್ಚರಿ (ಬಿಲ್ಲುಗಾರಿಕೆ), ಅತ್ಲೆಟಿಕ್ಸ್, ಬಾಕ್ಸಿಂಗ್, ಸೈಕ್ಲಿಂಗ್, ಜೂಡೋ, ಕಬಡ್ಡಿ, ಕುಸ್ತಿ, ಕಯಾಕಿಂಗ್ ಮತ್ತು ಕನೋಯಿಂಗ್, ಮಣಿಪಾಲದಲ್ಲಿ ಹಾಕಿ, ಲಾನ್ ಟೆನ್ನಿಸ್, ಟೇಬಲ್ ಟೆನ್ನಿಸ್, ಬೆಂಗಳೂರಿನಲ್ಲಿ ಜಿಮ್ನಾಸ್ಟಿಕ್ಸ್ ಮತ್ತು ಶೂಟಿಂಗ್ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.