ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ, ಕರ್ನಾಟಕ ಒಲಂಪಿಕ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಕರ್ನಾಟಕ ಕ್ರೀಡಾಕೂಟ ಜ. 17 ರಿಂದ 23ರ ವರೆಗೆ ಮಂಗಳೂರು ಮತ್ತು ಉಡುಪಿಯಲ್ಲಿ ನಡೆಯಲಿದ್ದು, ಎಲ್ಲ ರೀತಿಯ ಸಿದ್ಧತೆ ಅಂತಿಮಗೊಂಡಿದೆ.ಜ.17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 5 ಗಂಟೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ರೀಡಾ ಜ್ಯೋತಿ ಪ್ರಜ್ವಲಿಸಿ, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಫರೀದ್ ಕ್ರೀಡಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್ ಅವರ ಉಪಸ್ಥಿತಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕ್ರೀಡಾಕೂಟದ ಸಮಾರೋಪ ಸಮಾರಂಭ ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 23 ರಂದು ಸಂಜೆ 4.30 ಗಂಟೆಗೆ ನಡೆಯಲಿದೆ.ಇಂದು ನಗರದಲ್ಲಿ ಬಹುಸಂಸ್ಕೃತಿ ಉತ್ಸವ: ದಕ್ಷಿಣ ಕನ್ನಡ ಮತ್ತು ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ, ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿ, ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಜ.17 ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10 ಗಂಟೆಗೆ ಬಹುಸಂಸ್ಕೃತಿ ಉತ್ಸವ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಫರೀದ್ ಉಪಸ್ಥಿತರಿರುವರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪುಸ್ತಕ ಪ್ರದರ್ಶನ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಫರೀದ್ ಸಂಜೆ 4 ಗಂಟೆಗೆ ನಗರದ ಟಿ.ಎಮ್.ಎ. ಪೈ ಆವರಣದಲ್ಲಿ ಚಾಲನೆ ನೀಡಲಿದ್ದಾರೆ.
ಸಂಜೆ 4.30ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ, ಚಾರ ಪ್ರದೀಪ ಹೆಬ್ಬಾರ್ ವಿರಚಿತ ಶ್ರೀದೇವಿ ಭುವನೇಶ್ವರಿ ಕನ್ನಡ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಮಂಗಳೂರಿಗೆ ಸಿಎಂ ಆಗಮನ ಹಿನ್ನೆಲೆ ಸಂಚಾರ ಬದಲಾವಣೆಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳೂರಲ್ಲಿ ಭಾಗವಹಿಸುವ ವಿವಿಧ ಕಾರ್ಯಕ್ರಮಗಳು ಇರುವುದರಿಂದ ಜ.17ರಂದು ಕೆಲವೊಂದು ರಸ್ತೆಗಳಲ್ಲಿ ಸಾರ್ವಜನಿಕರು ಬದಲಿ ಮಾರ್ಗ ಬಳಸುವಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಹಾಗೂ ಸಂಜೆ 6 ಗಂಟೆಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವವರು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವವರು ಈ ಅವಧಿಯನ್ನು ಹೊರತುಪಡಿಸಿ ಮುಂಚಿತವಾಗಿ ತಲುಪುಬೇಕು. ಮಧ್ಯಾಹ್ನ 11.30 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಪುರಭವನ ಕಡೆಗೆ ಬರುವುದನ್ನು ತಪ್ಪಿಸಿ ಬದಲಿ ಮಾರ್ಗವನ್ನು ಉಪಯೋಗಿಸುವುದು. ಸಂಜೆ 5 ಗಂಟೆಯಿಂದ ರಾತ್ರಿ 9ರ ತನಕ ಮಂಗಳ ಸ್ಟೇಡಿಯಂ ಕಡೆಗೆ ಬರುವುದನ್ನು ತಪ್ಪಿಸಿ ಬದಲಿ ಮಾರ್ಗ ಉಪಯೋಗಿಸುವುದು.ವಾಹನ ದಟ್ಟಣೆಯ ಸ್ಥಳಗಳು:
ಮಂಗಳೂರು ಅಂ.ರಾ. ವಿಮಾನ ನಿಲ್ದಾಣದಿಂದ - ಕಾವೂರು - ಬೋಂದೆಲ್, ಮೇರಿಹಿಲ್ ಜಂಕ್ಷನ್, ಕೆ.ಪಿ.ಟಿ. ವೃತ್ತ - ಬಂಟ್ಸ್ ಹಾಸ್ಟೆಲ್ - ಹಂಪನಕಟ್ಟೆ- ಕ್ಲಾಕ್ ಟವರ್ -ಬಲ್ಮಠ- ಕಂಕನಾಡಿ - ವೆಲೆನ್ಸಿಯಾ - ಪಿವಿಎಸ್ ಜಂಕ್ಷನ್, ಹ್ಯಾಮಿಲ್ಟನ್ ವೃತ್ತ - ರಾವ್ ಆ್ಯಂಡ್ ರಾವ್ ವೃತ್ತ, ಬಾವುಟಗುಡ್ಡೆ, ಲಾಲ್ ಭಾಗ್, ನಾರಾಯಣಗುರು ವೃತ್ತ , ಮಂಗಳಾ ಸ್ಟೇಡಿಯಂ, ಕೆಎಸ್‌ಆರ್‌ಟಿಸಿ ಬಿಜೈ - ಸರ್ಕ್ಯೂಟ್ ಹೌಸ್ ಮೊದಲಾದ ಕಡೆ ವಾಹನ ಪಾರ್ಕಿಂಗ್ ಮಾಡುವಂತಿಲ್ಲ.ಅತಿಥಿ ಗಣ್ಯರು ಸಂಚರಿಸುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಎಲ್ಲ ತರಹದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರ ಪ್ರಕಟಣೆ ತಿಳಿಸಿದೆ.--------------