ಸಾರಾಂಶ
ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಅಧಿಕಾರಿಗಳ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೌಕರರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಅಧಿಕಾರಿಗಳ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೌಕರರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟಿಸಿದ ನೌಕರರು, ಬ್ಯಾಂಕ್ ನೌಕರರ ಸಂಘದ ಜನರಲ್ ಕೌನ್ಸಿಲ್ ಸಭೆಯಲ್ಲಿ ಗ್ರಾಮೀಣ ಬ್ಯಾಂಕುಗಳ ಪ್ರಸ್ತುತ ಪರಿಸ್ಥಿತಿ ಹಾಗೂ ಉದ್ಯೋಗಿಗಳ ಸಮಸ್ಯೆಗಳನ್ನು ಸವಿಸ್ತಾರವಾಗಿ ಚರ್ಚಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ಪ್ರೇರಕ ಬ್ಯಾಂಕುಗಳ ಆಡಳಿತದಿಂದ ಮುಕ್ತಿ ಪಡೆದು ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಅದರಡಿ ರಾಜ್ಯ ಮಟ್ಟದ ಗ್ರಾಮೀಣ ಬ್ಯಾಂಕನ್ನು ರಚಿಸಬೇಕು. ಒಂದು ಬಾರಿ ವಿಶೇಷ ನೇರ ನೇಮಕಾತಿ ಪ್ರಕ್ರಿಯೆ ನಡೆಸಿ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಶೀಘ್ರವಾಗಿ ತುಂಬಬೇಕು. ಗ್ರಾಮೀಣ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.
ಬಡ್ತಿ ನಿಯಮಾವಳಿಗಳನ್ನು ಶೀಘ್ರವೇ ಪುನರ್ ವಿಮರ್ಶಿಸಬೇಕು. ಪ್ರೇರಕ ಬ್ಯಾಂಕುಗಳಲ್ಲಿನ ಸಿಬ್ಬಂದಿ ಸೇವಾ ನಿಯಮಗಳು, ಬಡ್ತಿ ಪ್ರಕ್ರಿಯೆ ನಿಯಮಗಳು, ಪಿಂಚಣಿ ನಿಯಮಗಳು, ಅನುಕಂಪ ಆಧಾರಿತ ನೇಮಕಾತಿ ನಿಯಮಗಳು, ಕಂಪ್ಯೂಟರ್ ಇಂಕ್ರಿಮೆಂಟ್ ನಿಯಮಗಳ ಜೊತೆಗೆ ಪ್ರೇರಕ ಬ್ಯಾಂಕುಗಳಲ್ಲಿರುವ ವೇತನ ಶ್ರೇಣಿ ಮತ್ತು ಇತರೆ ಸೌಲಭ್ಯಗಳನ್ನು ನಮ್ಮ ಬ್ಯಾಂಕ್ ಉದ್ಯೋಗಿಗಳಿಗೂ ಯಥಾವತ್ತಾಗಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.ಗ್ರಾಮೀಣ ಬ್ಯಾಂಕುಗಳಲ್ಲಿರುವ ಎಲ್ಲ ದಿನಗೂಲಿ, ಹೊರಗುತ್ತಿಗೆ ನೌಕರರನ್ನು ಒಂದು ಬಾರಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಖಾಯಂಗೊಳಿಸಬೇಕು. ಎಲ್ಲ ತರಹದ ವಿಮಾ ಸರಕುಗಳ ಮಾರಾಟವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಆರ್.ವಸಂತ್ ಕುಮಾರ್, ಜಂಟಿ ಕಾರ್ಯದರ್ಶಿ ಎಚ್.ಸಿ.ನಾ ಗರಾಜು, ಉಮಾ ಶಂಕರ್, ಪುಟ್ಟಸ್ವಾಮಿ, ಸತ್ಯಾನಂದ ಸ್ವಾಮಿ, ದಿನೇಶ್, ಸತ್ಯ, ಮಹದೇವಸ್ವಾಮಿ, ಬಿಂದಿಯಾ, ಮದನಿಕ, ಸುನಿತಾ ಮಣಿ, ಉಮಾದೇವಿ ಭಾಗವಹಿಸಿದ್ದರು.