ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮ್ಯಾನೇಜರ್‌ ಕಿರುಕುಳ: ರೈತ ಆಕ್ರೋಶ

| Published : Feb 15 2025, 12:31 AM IST

ಸಾರಾಂಶ

ಬ್ಯಾಂಕ್‌ ವ್ಯವಸ್ಥಾಪಕರು ಬೆಳೆಸಾಲ ಪಡೆದ ಸುಸ್ತಿದಾರರಿಗೆ ನೋಟಿಸ್‌ ನೀಡಿ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಬೆಳೆ ಸಾಲ ವಸೂಲಾತಿ ವಿಚಾರವಾಗಿ ಇಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕರು ಮನೆ ಬಳಿ ಬಂದು ಸಾಲದ ಹಣ ನೀಡುವಂತೆ ಕಿರುಕುಳ ನೀಡಿದ ಪರಿಣಾಮ ಮಹಿಳೆಯರು ಭಯಾಭೀತರಾಗಿದ್ದು ಸಾಲಗಾರ ರೈತರು ಆತ್ಮಹತ್ಯೆಗೆ ಮುಂದಾಗಿದ್ದಾರೆಂದು ತಾಲೂಕು ರೈತ ಸಂಘದ ಅಧ್ಯಕ್ಷ ಗುಂಡಾರ್ಲಹಳ್ಳಿ ನರಸಿಂಹರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಹಾಗೂ ಇತರೆ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ ವ್ಯವಸ್ಥಾಪಕರು ಬೆಳೆಸಾಲ ಪಡೆದ ಸುಸ್ತಿದಾರರಿಗೆ ನೋಟಿಸ್‌ ನೀಡಿ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ರೈತ ಸಂಘದಿಂದ ಶುಕ್ರವಾರ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ಉಗ್ರ ಪ್ರತಿಭಟನೆ ನಡೆಸಿದರು.ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ತಾಲೂಕು ರೈತ ಸಂಘದ ಅಧ್ಯಕ್ಷರಾದ ಜಿ.ಎನ್‌.ನರಸಿಂಹರೆಡ್ಡಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆಗಳು (ಕೆಜಿಬಿ)ಕಾರ್ಯಾರಂಭದಲ್ಲಿದ್ದು ಬೆಳೆ ಸಲುವಾಗಿ ಇಲ್ಲಿನ ಬ್ಯಾಂಕ್‌ಗಳಲ್ಲಿ ಬೆಳೆ ಸಲುವಾಗಿ ತಾಲೂಕಿನ ಅನೇಕ ಮಂದಿ ರೈತರು ಸಾಲ ಹಣಪಡೆದಿದ್ದಾರೆ. ಆದರೆ ಪಟ್ಟಣ ಹಾಗೂ ತಾಲೂಕಿನ ಕೆಲ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರು ಬೆಳೆ ಸಾಲಪಡೆದಿರುವ ರೈತರಿಗೆ ಸಾಲ ಮರುವಾವತಿಸುವಂತೆ ನೋಟಿಸ್‌ ನೀಡಿ ಬೆದರಿಗೆ ಹಾಕುತ್ತಿದ್ದಾರೆ.ಬೆಳೆ ಸಾಲಪಡೆದ ಸುಸ್ತಿದಾರ ರೈತರಿಗೆ ನ್ಯಾಯಾಲಯದಿಂದ ನೋಟಿಸ್‌ ನೀಡಿ ಕೋರ್ಟ್‌ ಹಾಜರಾಗಲು ಸೂಚಿಸಿದ್ದಾರೆ. ಕಳೆದ ಅನೇಕ ವರ್ಷದಿಂದ ಮಳೆಯ ಅಭಾವ ತಾಲೂಕಿನಲ್ಲಿ ಸೃಷ್ಟಿಯಾಗಿದೆ. ಕಳೆದ ಸಾಲಿಗೆ ಮಳೆ ಇಲ್ಲದೆ ಲಕ್ಷಾಂತರ ರು. ಖರ್ಚು ಮಾಡಿ ಇಟ್ಟ ಬೆಳೆ ಸಹ ಕೈಗೆ ಬರದೆ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಸರ್ಕಾರ ಹಾಗೂ ಬ್ಯಾಂಕಿನವರಿಗೆ ಗೊತ್ತಿದ್ದರೂ ರಾತ್ರಿ ಹಗಲು ಎನ್ನದೇ ಕೆಜಿಬಿ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸಾಲಗಾರರ ಮನೆ ಬಾಗಿಲಿಗೆ ನುಗ್ಗಿ ಬೆಳೆ ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿರುವುದರಿಂದ ರೈತರು ಊರು ಬಿಡುವ ಸ್ಥಿತಿಗೆ ತಲುಪಿರುವುದಾಗಿ ಅರೋಪಿಸಿದರು.ಮೈಕ್ರೋ ಫೈನಾನ್ಸ್‌ ಕಂಪನಿಯವರಿಂತ ಕೆಜಿಬಿ ವ್ಯವಸ್ಥಾಪಕನ ಕಿರುಕುಳ ಹೆಚ್ಚಾಗಿದ್ದು, ಬ್ಯಾಂಕಿನಿಂದ ಸಾಲ ಪಡೆದ ಬಡ ರೈತ ಮಹಿಳೆಯರನ್ನು ಹೀನಾಮಾನವಾಗಿ ಬಾಯಿಬಂದ ಹಾಗೆ ನಿಂಧಿಸುತ್ತಿದ್ದಾರೆ. ಈ ಸಂಬಂಧ ಅಗತ್ಯ ದಾಖಲೆಗಳಿವೆ. ಸಾಲಕಟ್ಟಲು ನೋಟಿಸ್‌ ನೀಡಿದ್ದೇವೆ. ವಿಳಂಬ ಮಾಡಿದರೆ ಕೋರ್ಟ್‌ಗೆ ಹಾಕುತ್ತೇವೆ. ತಮ್ಮ ಮನೆ ಹಾಗೂ ಜಮೀನು ಜಪ್ತಿ ಮಾಡುತ್ತಿವೆ. ನೀವು ಜಮೀನಿನ ದಾಖಲೆ ಮರ್ಟಿಗೇಜ್‌ ಮಾಡಿದ್ದು ನಿಮ್ಮ ಜಮೀನು ಹರಾಜು ಹಾಕುತ್ತೇವೆ ಎಂದು ಎದುರಿಸುವಲ್ಲಿ ವ್ಯವಸ್ಥಾಪಕರು ನಿರತರಾಗಿದ್ದಾರೆ. ಈ ಬ್ಯಾಂಕಿನಲ್ಲಿ ಬೆಳೆಸಾಲ ಪಡೆದ ರೈತರು ವ್ಯವಸ್ಥಾಪಕರ ಕಾಟ ತಾಳಲಾದರೆ ಭಯಾಭೀತರಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ನವರು ಬೆಳೆ ಸಾಲ ಪಡೆದ ರೈತರಿಗೆ ಇಲ್ಲ ಸಲ್ಲದ ಭಯ ಹುಟ್ಟಿಸುತ್ತಿದ್ದು ಬ್ಯಾಂಕಿನ ನಿಯಮ ಪಾಲಿಸದೇ ರೈತರ ಮೇಲೆ ದಬ್ಬಾಳಿಕೆ ಮಾಡಿ ದರ್ಬಾರ್‌ ನಡೆಸುತ್ತಿದ್ದಾರೆ. ಪಟ್ಟಣ ಕರ್ನಾಟಕ ಗ್ರಾಮೀಣ ಹಾಗೂ ತಾಲೂಕಿನ ಇತರೆ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿ ತಮ್ಮ ಕಚೇರಿಯಲ್ಲಿ ಸಭೆ ನಡೆಸುವ ಮೂಲಕ ರೈತರ ಮೇಲಿಗೆ ದೌರ್ಜನ್ಯ ನಿರತ ವ್ಯವಸ್ಥಾಪಕರ ವಿರುದ್ಧ ಸೂಕ್ತ ಕ್ರಮ ಜರಿಗಿಸಬೇಕು.ಇದೇ ಮುಂದುವರಿಸಿದರೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವಿರುದ್ಧ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.ಈ ಸಂಬಂಧ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಬೇಕು.ಸಾಲ ವಸೂಲಾತಿ ವಿಚಾರವಾಗಿ ರೈತರಿಗೆ ಹಿಂಸೆ ನೀಡದಂತೆ ಪ್ರಕಟಣೆ ಹೊರಡಿಸಿ ವಸೂಲಾತಿ ನಿಲ್ಲಿಸಲು ಕ್ರಮವಹಿಸುವಂತೆ ಒತ್ತಾಯಿಸಿದರು.ಇದೇ ವೇಳೆ ತಾಲೂಕು ರೈತ ಸಂಘದ ಉಪಾಧ್ಯಕ್ಷ ಬಡನ್ನ, ಕಾರ್ಯದರ್ಶಿ ಕೊಂಡಪ್ಪ, ರೈತ ಮುಖಂಡರಾದ ಪಿ.ಜಿ.ವೇಣುಗೋಪಾಲ್‌, ಟಿ.ಅಂಜಯ್ಯ, ಕೃಷ್ಣಾರೆಡ್ಡಿ, ವೀರಕ್ಯಾತಪ್ಪ, ಅಂಜಿನಪ್ಪ, ನಾಗರಾಜು, ಹನುಮಂತರಾಯಪ್ಪ, ಗಿರಿಜಮ್ಮ, ಹನುಮಕ್ಕ, ತಿಮ್ಮಯ್ಯ ಗೋವಿಂದಪ್ಪ, ಹನುಮಂತರೆಡ್ಡಿ, ನಾಗರಾಜಪ್ಪ, ಅದಿವೇಣಮ್ಮ ನಾರಾಯಣಸ್ವಾಮಿ ಸೇರಿದಂತೆ ಅಪಾರ ಸಂಖ್ಯೆಯ ತಾಲೂಕು ರೈತ ಸಂಘದ ಪದಾಧಿಕಾರಿಗಳಿದ್ದರು.

ಫೋಟೋ 14ಪಿವಿಡಿ1ಬೆಳೆ ಸಾಲ ವಸೂಲಾತಿಯಲ್ಲಿ ಇಲ್ಲಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕನ ಕಿರುಕುಳ ತಪ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ತಾಲೂಕು ರೈತ ಸಂಘದಿಂದ ತಹಸೀಲ್ದಾರ್‌ ವರದರಾಜುಗೆ ಮನವಿ ಪತ್ರ ಸಲ್ಲಿಸಲಾಯಿತು.