ಕರ್ನಾಟಕದ ಗ್ಯಾರಂಟಿಗಳೇ ಕಾಂಗ್ರೆಸ್‌ ಗೆಲುವಿನ ದಡ ತಲುಪಿಸುವ ಪಂಚ ಅಂಬಿಗರು: ಖರ್ಗೆ

| Published : May 02 2024, 12:21 AM IST

ಕರ್ನಾಟಕದ ಗ್ಯಾರಂಟಿಗಳೇ ಕಾಂಗ್ರೆಸ್‌ ಗೆಲುವಿನ ದಡ ತಲುಪಿಸುವ ಪಂಚ ಅಂಬಿಗರು: ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಬಗ್ಗೆಯೇ ದೇಶದಾದ್ಯಂತ ಅನೇಕರು ಬೆರಗಾಗಿದ್ದಾರೆ. ನಮ್ಮಲ್ಲಿನ ಪಂಚ ಗ್ಯಾರಂಟಿಗಳು ಮನೆ ಮನ ತಲುಪಿವೆ. ಇದರಿಂದ ಜನರು ಖುಷಿಯಲ್ಲಿದ್ದಾರೆ. ಜನತೆಗೆ ನೆರವು ನೀಡಿದ ನಮಗೆ ಜನ ಪುನಃ ಶಕ್ತಿ ತುಂಬಲು ಉತ್ಸುಕರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಕರ್ನಾಟಕದಲ್ಲಿ ಜಾರಿಯಾಗಿರುವ ಜನರ ಮನೆ ಮನ ತಲುಪಿರುವಂತಹ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹ ಜ್ಯೋತಿ, ಗ-ಹ ಲಕ್ಷ್ಮೀ ಎಂಬ ಪಂಚ ಗ್ಯಾರಂಟಿಗಳೇ ನಮ್ಮನ್ನ ಗೆಲುವಿನ ದಡ ತಲುಪಿಸುವ ಅಂಬಿಗರು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜೇವರ್ಗಿಯಲ್ಲಿ ಲೋಕಸಭೆ ಕಾಂಗ್ರೆಸ್‌ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಬಗ್ಗೆಯೇ ದೇಶದಾದ್ಯಂತ ಅನೇಕರು ಬೆರಗಾಗಿದ್ದಾರೆ. ನಮ್ಮಲ್ಲಿನ ಪಂಚ ಗ್ಯಾರಂಟಿಗಳು ಮನೆ ಮನ ತಲುಪಿವೆ. ಇದರಿಂದ ಜನರು ಖುಷಿಯಲ್ಲಿದ್ದಾರೆ. ಜನತೆಗೆ ನೆರವು ನೀಡಿದ ನಮಗೆ ಜನ ಪುನಃ ಶಕ್ತಿ ತುಂಬಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಪರ ಅಲೆ ಎಲ್ಲೆಡೆ ಇದೆ ಎಂದು ಖರ್ಗೆ ಹೇಳಿದರು.

ಲೋಕಸಭೆಯಲ್ಲಿಯೂ ನಾರಿ ನ್ಯಾಯ, ಯುವ ನ್ಯಾಯ, ಶ್ರಮಿಕ್‌, ಕಿಸಾನ್‌ ನ್ಯಾಯ ಎಂದು ಗ್ಯಾರಂಟಿ ಯೋಜನೆಗಳನ್ನು ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ನಮ್ಮ ಪ್ರಣಾಳಿಕೆ ನಿಮ್ಮ ಮುಂದಿದೆ. ಸರಿಯಾಗಿ ವಿಷಯ ತಿಳಿದು ಮತ ಹಾಕಿರಿ ಎಂದರು.

ಕಾಂಗ್ರೆಸ್‌ನ ಪ್ರಣಾಳಿಕೆಯಿಂದ ಮೋದಿಗೆ ಹೊಟ್ಟೆ ಉರಿ ಆಗಿದೆ. ನಿರಾಶರಾಗಿ ನಿದನೆ ಮಾಡುತ್ತಿದ್ದಾರೆ. ನಿತ್ಯ ನಮ್ಮನ್ನ ಬೈಯ್ಯದಿದ್ದರೆ ಮೋದಿಗೆ ಊಟವೇ ಹೋಗೋದಿಲ್ಲವೆಂದು ಛೇಡಿಸಿದರು. ನಿತ್ಯ ದೇವ್ರು ಹೆಸರು ಗಿಂತ ಹೆಚ್ಚು ಬಾರಿ ಕಾಂಗ್ರೆಸ್ ನಿಂದನೆ ಮಾಡ್ತಾರೆ. ನಿತ್ಯ ನಮಗೆ ಬೈದು ಬೈದು ಜನರ ಮನದಲ್ಲಿ ನಮ್ಮ ಬಗ್ಗೆ ದ್ವೇಷ ಬೆಳೆಸುತ್ತಿದ್ದಾರೆಂದು ಟೀಕಿಸಿದರು.

ನಮ್ಮ ಚುನಾವಣೆ ಭರವಸೆಗಳನ್ನೆಲ್ಲ ಮುಸ್ಲಿಂ ಲೀಗ್ ಪ್ರಣಾಳಿಕೆ ಅಂತ ಟೀಕೆ ಮಾಡುತ್ತಾರೆ, ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದರು. ಮೋದಿ ಸಿರಿವಂತರ ಪರ ಇರೋ ವ್ಯಕ್ತಿ. ಜನರು ಅರಿಯಬೇಕು. ನರೇಗಾ ಯೋಜನೆ 400 ರು. ಖಾತ್ರಿ ಕೊಡುತ್ತೇವೆ. ಎಲ್ಲಾ ಹಳ್ಳಿಗಳಲ್ಲಿ ಜಾರಿ ಮಾಡುತ್ತೇವೆ. ನಾವೇ ಬಡವರ ಪರ ಇರೋರು ಎಂದರು.

ಪಂಚ ಗ್ಯಾರಂಟಿ ಜಾರಿಗೆ ಮುಂದಾದಾಗ ರಾಜ್ಯ ದಿವಾಳಿ ಅಂದಿದ್ದ ಮೋದಿ, ತಮ್ಮಾ ನಮ್ಮಾ ಚಿಂತೆ ಬೇಡ, ನಿಮ್ಮದು ನೋಡಿಕೊಳ್ಳಿ ಎಂದಿದ್ದೇವು. ರೈತರ ಸಾಲಮನ್ನಾ ಮಾಡದ ಮೋದಿ ಸಿರಿವಂತರ ಸಾಲಮನ್ನಾ ಮಾಡಿದರು. ಬುಲೆಟ್ ಟ್ರೈನ್ ಜಪಾನ್‌ ಸಾಲ ಇನ್ನೂ ಮುಗಿದಿಲ್ಲ ಯೋಜನೆ. ಬಿಜೆಪಿಯಲ್ಲಿ ಕೆಲಸ ಮಾಡಿವರೇ ಖರ್ಗೆಗೆ ಅನ್ಯಾಯ ಮಾಡೀವಿ ಅಂತ ಅಲ್ಲಿನವರೇ ಹೇಳಿದ್ದಾರೆ. ಅದಕ್ಕೇ ಪ್ರಧಾನಿ ಮೋದಿ ಸುಳ್ಳಿನ ಸರದಾರ. ಸುಳ್ಳಿನದ್ದೇ ಮೋದಿ ಗ್ಯಾರಂಟಿ ಎಂದರು.

ಮೋದಿ ಪ್ರಗತಿ ವಿರೋಧಿ, ಅಭಿವೃದ್ಧಿಗೆ ಮತ ಹಾಕಿರಿ. ಖರ್ಗೆಗೆ ರೈಲು ಬಿಡಕ್ಕೆ ಯಾಕೆ ಆಗಲಿಲ್ಲ ಅಂತಾರೆ, ಇಲ್ಲಿ ಆ ವ್ಯವಸ್ಥೆ ಇರಲಿಲ್ಲಂತ ರೈಲು ಇಲ್ಲಿಂದ ಓಜಡಿಸಲು ಆಗಲಿಲ್. ನಾವೇ ಪಿಟ್ ಲೈನ್ ಮಾಡಿದ್ವಿ. ಅದು ಹೀಗೆ ಕೇಳೋರಿಗೆ ಗೊತ್ತಿರಲಿ ಎಂದು ಸಂಸದ ಉಮೇಶ ಜಾಧವ್‌ಗೆ ಟಾಂಗ್‌ ನೀಡಿದರು.

ಒಳ್ಳೆಯ ಕೆಲಸ ಮಾಡಿರರೆ ಜನರ ನಂಬುತಾರೆ, ಇದಕ್ಕೆ ಸತತವಾಗಿ ಗೆದ್ದು ಬಂದ ನನ್ನ ರಾಜಕೀಯ ಬದುಕೇ ಉದಾಹರಣೆ. ರೈತರಿಗೆ, ದೇಶಕ್ಕೆ ಏನು ಮಾಡುವೆ ಹೇಳಪ್ಪ ಮೋದಿ. ಸುಮ್ನೆ ಸುಳ್ಳು ಹೇಳಬೇಡ ಎಂದು ಖರ್ಗೆ ಮಾತಲ್ಲಿ ಕುಟುಕಿದರು.

ಜನರ ಉದ್ಧಾರಕ್ಕೆ ಮೋದಿ ಪ್ರಧಾನಿ ಆಗಿಲ್ಲ, ಸಂಘ ಪರಿವಾರಕ್ಕೆ, ಸಿರಿವಂತರಿಗೆ ಉದ್ಧಾರ ಮಾಡಲು ಅದ. ಪ್ರಧಾನಿ ಭಾಯ್, ಬಹಿನೋ ಬಿಟ್ಟು ಈಗ ಮೇರೇ ಪರಿವಾರ್‌ ಅಂತ ಶುರು ಮಾಡ್ಯಾನ ಎಂದು ಮೋದಿ ಅವರಿಗೆ ಏಕ ವಚನದಲ್ಲಿ ಟೀಕಿಸಿದರು. ಕೊನೆಯಲ್ಲಿ ಸಭಿಕರೊಂದಿಗೆ ಸಂವಿಧಾನ ಉಳಿಸಲು ಕಾಂಗ್ರೆಸ್‌ಗೆ ಮತ ಹಾಕಿ ಎಂದರಲ್ಲದೆ ಮೋದಿ ಹಠಾವೋ ದೇಶ ಬಚಾವೋ ಎಂದು ಘೋಷಣೆ ಹಾಕಿದರು.

ಕೈ ಮುಗಿದು ಮತ ಯಾಚಿಸಿದ ಡಾ. ಅಜಯ್‌ ಸಿಂಗ್‌: ನುಡಿದಂತೆ ನಡೆದಿದ್ದೇವೆ, ಪಂಚ ಗ್ಯಾರಂಟಿ ನೀಡಿದ್ದೇವೆ, ಯೋಜನೆಯ ಫಲ ನಿಮ್ಮ ಮನೆ, ಮನ ತಲುಪಿದೆ, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಬಹುಮತ ನೀಡಿ ಗೆಲ್ಲಿಸಬೇಕು, ಆ ಮೂಲಕ ಖರ್ಗೆ ಅವರ ಕೈ ಬಲ ಪಡಿಸಬೇಕು ಎಂದು ಜೇವರ್ಗಿ ಶಾಸಕ ಅಜಯ್ ಸಿಂಗ್ ಜನತೆಗೆ ಕೈ ಜೋಡಿಸಿ ಸೇರಿದ್ದ ಜನರಲ್ಲಿ ಮನವಿ ಮಾಡಿದರು.

ತಮ್ಮ ಬಾಷಣದುದ್ದಕ್ಕೂ ತುಂಬಾ ಬಾವುಕರಾಗಿ, ಜನರಿಗೆ ನಾವು ಏನೆಲ್ಲಾ ಕೊಟ್ಟಿದ್ದೇವೆ ಎಂಬುದನ್ನು ಹೇಳುತ್ತ ಮತ ಹಾಕುವಾಗ ನಮ್ಮನ್ನು ಮರಿಬೇಡಿರೆಂದರು.

2019ರಲ್ಲಿ ನಾವು ಮಾಡಿದ ತಪ್ಪು ಮುತ್ಸದ್ದಿ ನಾಯಕನ ಸೋಲಿಗೆ ಕಾರಣ ಆಗಿದೆ, ಅದೇ ತಪ್ಪು ಮತ್ತೆ ಮಾಡೋದು ಬೇಡ, ಈ ಬಾರಿ ಜಾಗೃತರಾಗಿ ಮತ ಹಾಕಿರಿ, ನಿಮ್ಮ ಮತ ಕಾಂಗ್ರೆಸ್ ಗೇಲ್ಲಿಸಲಿ ಎಂದು ಭಾವುಕರಾಗಿ ಕೋರಿದರು. ಶಾಸಕರ ಈ ಕೋರಿಕೆಗೆ ಪ್ರತಿಯಾಗಿ ಸೇರಿದ್ದ ಜನಸ್ತೋಮ ಒಕ್ಕೊರಲಿನಿಂದ ಕಾಂಗ್ರೆಸ್‌ ಪಕ್ಷಕ್ಕೇ ಜಯವಾಗಲಿ ಎಂದು ಕೂಗಿ ಸ್ಪಂದಿಸಿದ್ದು ವಿಶೇಷವಾಗಿತ್ತು.

ಜೇವರ್ಗಿಗೆ ಬಹು ಕೋಟಿ ಮೊತ್ತದ ಬಹುಗ್ರಾಮ ಯೋಜನೆ ಜಾರಿಗೆ ತರಲಾಗಿದೆ. ಇದು ಟೆಂಡರ್ ಹಂದಲ್ಲಿದೆ, ಇದು ಜಾರಿ ಆದಲ್ಲಿ ಜೇವರ್ಗಿ ಪ್ರತಿ ಮನೆ ನೀರು ಪೂರೈಕೆ ಆಗಲಿದೆ ಎಂದು ಹೇಳಿದರು.

ಹರವಾಳ ಬಾಂದಾರು ಸೇತುವೆ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇದು ಜಾರಿ ಆದಲ್ಲಿ ಹೆಚ್ಚು ನೀರಾವರಿ ಆಗಲಿದೆ. ಜೇವರ್ಗಿ ಪ್ರಗತಿ ಪರ್ವ, ಕಲಬುರಗಿ , ರಾಜ್ಯದ ಪ್ರಗತಿ ಚಕ್ರ ಹಾಗೇ ಸಾಗಲು ಕೈ ಬಳಪಡಿಸುವ ಅಗತ್ಯವಿದೆ ಎಂದು ಅಜಯ್ ಸಿಂಗ್ ಹೇಳಿದರು.

ಕೇಂದ್ರದಲ್ಲಿ ಖರ್ಗೆ ಅವರು ಮಂತ್ರಿ ಆಗಿದ್ದಾಗ, ತಂದೆಯವರಾದ ಧರಂ ಸಿಂಗ್ ಅವರು ಸಂಸದ ಆಗಿದ್ದಾಗ ಕಲಾಂ 371 ಜೆ ಜಾರಿಗೆ ತಂದರು. ಇದು ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಿದೆ, ಇವೆಲ್ಲ ಯೋಜನೆಗಳ ಹರಿಕಾರರು ಖರ್ಗೆಯವರು. ಅವರ ಕೈ ಬಲ ಪಡಿಸಲು ನಾವು ನೀವೆಲ್ಲರೂ ಕಾಂಗ್ರೆಸ್ ಪಕ್ಷ ಗೆಲ್ಲಿಸೋದು ತುಂಬಾ ಅಗತ್ಯ ವಾಗಿದೆ ಎಂದು ಕೈ ಜೋಡಿಸಿ ಅಜಯ್ ಸಿಂಗ್ ಅವರು ಕೋರಿದರು.

ನಾವು ನಿಮಗೆ ಶಕ್ತಿ, ನೀವು ನಮಗೆ ಶಕ್ತಿ: ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡುತ್ತ, ಪಂಚ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ, ಉಪಕಾರ ಸ್ಮರಣೆ ಮಾಡಿರಿ, ಹೋದ ಸಾಲದ ಅನ್ಯಾಯ ಪುನರಾವರ್ತನೆ ಆಗೋದು ಬೇಡ. ನಾವು ನಿಮಗೆ ಶಕ್ತಿ ತುಂಬುತ್ತೆವೆ. ನೀವು ನನಗೆ ಶಕ್ತಿ ತುಂಬಿ. ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಹೇಳುತ್ತಾ ಜನತೆಗೆ ಮನವಿ ಮಾಡಿದರು. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸೀಟು ಜಿಳ್ಳುತ್ತೇವೆ. ನಿಮ್ಮ ಆಶೀರ್ವಾದ ಸದಾ ಕಾಂಗ್ರೆಸ್ಗೆ ಇರಲಿ. ಜೇವರ್ಗಿ ಯಿಂದ 40 ಸಾವಿರ ಲೀಡ್ ಕೊಡಿ ಪದಕ್ಕೆ ನಮಸ್ಕಾರ ಮಾಡಿ ಹೋಗುತ್ತೇವೆ ಎಂದರು.

ದೇಶಭಕ್ತಿ ಬಿಜೆಪಿ ಗುತ್ತಿಗೆಯೆ?: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಬಿಜೆಪಿ ದೇಶ ಭಕ್ತಿ ಗುತ್ತಿಗೆ ಹಿಡಿದಿದೆ, ನಾವೆಲ್ಲ ಹಂಗೇ ನಂಬಿದ್ವಿ, ವಾಸ್ತವ ಬೇರೇನೇ ಇದೇ. ನಿಜವಾದ ದೇಶ ಭಕ್ತಿ ಕಾಂಗ್ರೆಸ್‌ನದ್ದು. ದೇಶಕ್ಕೆ ಸ್ವತಂತ್ರ ಸಿಕ್ಕಾಗ ಬಿಜೆಪಿ ಹುಟ್ಟಿರಲಿಲ್ಲ. ಆದ್ರೂ ಭಾರೀ ದೇಶ ಭಕ್ತಿ ಮಾತು ಹೆಳ್ತಾರೆ ಅವರು. ಅವರ ಮಾತಿಗೆ ಮರಳು ಆಗಬೇಡಿ ನೀವು. ಜಾಗೃತರಾಗಿ, ಯಾರಿಗೆ ಬೆಂಬಲ ನೀಬೇಕು ಅನ್ನೋಸು ಯೋಚಿಸಿರಿ ಎಂದರು.

ಎಂಎಲ್ಸಿ ತಿಪ್ಪಣ್ಣ ಕಮಕನೂರ್‌, ಬಾಬೂರಾವ ಚಿಂಚನ್ಸೂರ್‌ ಮಾತನಾಡುತ್ತ ಮೋದಿ ಸುಲ್ಳು ಹೇಳುತ್ತ ಕೋಲಿ ಸಮಾಜಕ್ಕೆ ಮೋಸ ಮಾಡಿದ್ದಾರೆಂದು ನಿಂದಿಸಿದರು. ಸಮಾರಂಭದಲ್ಲಿ ಸಚಿವರಾದ ಪ್ರಿಯಾಂಕ್‌ ಖರ್ಗೆ, ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ನಟ ಎಎಸ್‌ ನಾರಾಯಣ ಸೇರಿದಂತೆ ಕಾಂಗ್ರೆಸ್‌ನ ಮುಖಂಡರಿದ್ದರು.