ಸಾರಾಂಶ
ದೇಶಾದ್ಯಂತ ಕೋವಿಡ್ ಸೋಂಕು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ನೆರೆಯ ಕೇರಳದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಚಿಂತನೆ ಇದೆ. ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ ಜ್ವರ, ಕೆಮ್ಮು ಬಾಧಿತ ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಕುಶಾಲನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ನಿಯಂತ್ರಣ ಸಂಬಂಧ ಡಿ.19ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಕೋವಿಡ್ ಬಾಧಿತರ ಚಿಕಿತ್ಸೆಗೆ ಸಮಸ್ಯೆ ಆಗದಂತೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಮಾಸ್ಕ್, ಪಿಪಿಇ ಕಿಟ್ ಇರಿಸಲಾಗಿದೆ. ಈ ಸಂಬಂಧ ಅಗತ್ಯ ಸಿದ್ಧತೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಆಧಾರದ ಮೇಲೆ ತಾಂತ್ರಿಕ ಸಲಹಾ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಗಡಿಭಾಗದ ಪ್ರವಾಸಿಗರು ಮಾತ್ರವಲ್ಲದೆ ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೇರಳಕ್ಕೆ ಹೋಗಿ ಬರುತ್ತಿದ್ದು, ರಾಜ್ಯದಲ್ಲಿ ಸೋಂಕು ಹರಡದಂತೆ ಮಂಗಳವಾರ ನಡೆಯುವ ತಾಂತ್ರಿಕ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.ಗಡಿ ಭಾಗವಾದ ಕೊಡಗು, ಮಂಗಳೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸಹಜವಾಗಿದೆ. ಸೋಂಕಿನ ಪ್ರಮಾಣವೇನಾದರೂ ಹೆಚ್ಚಾದರೆ ನಿರ್ಬಂಧ ಕ್ರಮಕ್ಕೆ ಮುಂದಾಗುವುದಾಗಿ ಸಚಿವ ತಿಳಿಸಿದರು.