ಕನ್ನಡಪ್ರಭ ವಾರ್ತೆ ಮೈಸೂರುಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗಾಧ ಜ್ಞಾನ ಶಿಸ್ತು ಮತ್ತು ಪ್ರಸ್ತುತ ವಿದ್ಯಮಾನಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳುವ ಮನೋಭಾವ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು, ಕಾಲೇಜು ಶಿಕ್ಷಣ ಇಲಾಖೆ ಮತ್ತು ಮೈಸೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ರೂಸಾ ಪ್ರಾಯೋಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಧ್ಯಾಪಕರಿಗೆ ನೀಡಲಾಗುತ್ತಿರುವ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಪಾತ್ರ ಹಿರಿದು. ಸರ್ಕಾರಿ ಕಾಲೇಜುಗಳಿಗೆ ಸೇರುವುದು ಗ್ರಾಮೀಣ ಹಿನ್ನೆಲೆಯ ಮಕ್ಕಳು. ಅವರಿಗೆ ಸೂಕ್ತ ಮಾರ್ಗದರ್ಶನ ಮೌಲ್ಯಯುತ ಶಿಕ್ಷಣ ಒದಗಿಸುವುದರ ಜೊತೆಗೆ ಉದ್ಯೋಗಾವಕಾಶ ಸೃಷ್ಟಿಸುವುದು ಶಿಕ್ಷಣದ ಗುರಿ. ಪ್ರಾಧ್ಯಾಪಕರಲ್ಲಿ ಶಿಸ್ತು ಮತ್ತು ಬದ್ಧತೆ ಅತ್ಯಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಮೈಸೂರು ವಲಯದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಡಿ.ಎಸ್. ಪ್ರತಿಮಾ ಮಾತನಾಡಿ, ಸಮಾಜದಲ್ಲಿ ಸರ್ಕಾರಿ ಕಾಲೇಜುಗಳ ಕುರಿತು ಮೂಡಿರುವ ಋಣಾತ್ಮಕ ಭಾವನೆಯನ್ನು ಬದಲಾಯಿಸುವ ಜವಾಬ್ದಾರಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮೆಲ್ಲರ ಮೇಲಿದೆ. ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಪೂರ್ಣ ವಿದ್ಯಾರ್ಥಿಗಳು ಸೃಷ್ಟಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಮೈಸೂರು ವಿಶ್ವವಿದ್ಯಾಲಯದ ಬಿಐಎಂಎಸ್ ನ ಹಿರಿಯ ಪ್ರಾಧ್ಯಾಪಕ ಪ್ರೊ. ಡಿ. ಆನಂದ್, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಎಚ್. ಪವಿತ್ರ ತರಬೇತಿ ನೀಡಿದರು. ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶಪಾಲ ಡಾ. ಸಿ. ನಟರಾಜ್, ಮೈಸೂರು ವಲಯದ ಜಂಟಿ ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕ ಎ.ಬಿ. ನಾಗೇಂದ್ರ ಪ್ರಸಾದ್, ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ಲಲಿತ ಕುಮಾರಿ ಇದ್ದರು.ತರಬೇತಿಯ ಸಂಯೋಜಕರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಗ್ರಂಥಪಾಲಕರು ಹಾಗೂ ಆಯ್ಕೆ ಸಂಯೋಜಕ ಎಸ್. ಮುತ್ತುರಾಜ್ ಸ್ವಾಗತಸಿದರು.