ಗೂಂಡಾ ರಾಜ್ಯವಾಗುತ್ತಿದೆ ಕರ್ನಾಟಕ

| Published : May 18 2024, 12:35 AM IST

ಸಾರಾಂಶ

ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಅಲ್ಲಿ ಶಾಂತಿ ನೆಲೆಸಿದೆ. ಅವರು ಯಾವುದೇ ಕಾನೂನು ಬದಲಾವಣೆ ಮಾಡದೇ ಇದ್ದ ಕಾನೂನಿನಲ್ಲಿಯೇ ಎಲ್ಲವನ್ನು ನಿಭಾಯಿಸಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ.

ಹುಬ್ಬಳ್ಳಿ:

ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದ್ದು ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.

ಅವರು ಇಲ್ಲಿನ ವೀರಾಪುರ ಓಣಿಯ ಮೃತ ಯುವತಿ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಉತ್ತರ ಪ್ರದೇಶ ಮೊದಲು ಗೂಂಡಾ ರಾಜ್ಯವಾಗಿತ್ತು. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಅಲ್ಲಿ ಶಾಂತಿ ನೆಲೆಸಿದೆ. ಅವರು ಯಾವುದೇ ಕಾನೂನು ಬದಲಾವಣೆ ಮಾಡದೇ ಇದ್ದ ಕಾನೂನಿನಲ್ಲಿಯೇ ಎಲ್ಲವನ್ನು ನಿಭಾಯಿಸಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಅಂತಹ ದಿಟ್ಟ ನಿರ್ಧಾರವನ್ನು ರಾಜ್ಯದ ಮುಖ್ಯಮಂತ್ರಿಗಳು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಗೃಹ ಸಚಿವರು ಸಭೆ ನಡೆಸಿ ಅಧಿಕಾರಿಗಳ ಕಾರ್ಯವೈಖರಿಯ ಪರಿಶೀಲನೆ ಮಾಡಬೇಕಿತ್ತು. ಆದರೆ, ಗೃಹ ಇಲಾಖೆಯು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇಲ್ಲ ಎಂದರು.

ಈಚೆಗೆ ನೇಹಾ ಹಿರೇಮಠ ಕೊಲೆಯಾದಾಗ ಇಡೀ ರಾಜ್ಯವೇ ತಲ್ಲಣಗೊಂಡಿತ್ತು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಕೊಲೆ, ಸುಲಿಗೆ, ದರೋಡೆ ನಡೆಯುತ್ತಿದೆ. ಇದನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ಈ ಹಿಂದೆ ನೇಹಾ ಹತ್ಯೆಯಾದ ವೇಳೆ ರಾಜ್ಯದ ಸಚಿವರು ಬೇಜಾವ್ದಾರಿಯಾಗಿ ಮಾತನಾಡಿದ್ದರು. ಆದರೆ, ಈಗ ಅಂಜಲಿ ಹತ್ಯೆಯಾಗಿದೆ ಇದಕ್ಕೇನು ಹೇಳುತ್ತಾರೆ ಎಂದು ಶೆಟ್ಟರ್‌ ಪ್ರಶ್ನಿಸಿದರು.

ನಾನು ಅಂಜಲಿ ಅಜ್ಜಿಯೊಂದಿಗೆ ಚರ್ಚಿಸಿದ್ದೇನೆ. ಆರೋಪಿಯಿಂದ ಅವರಿಗೆ ಜೀವಭಯವಿತ್ತು. ಹಾಗಾಗಿಯೇ ಅವರು ಪೊಲೀಸ್‌ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದರು. ಆದರೆ, ಅಲ್ಲಿನ ಪೊಲೀಸರು ಅವರಿಗೆ ಕುಚೇಷ್ಠೆ ಮಾಡಿ ಕಳಿಸಿದರು. ರಾಜ್ಯದಲ್ಲಿ ಸರ್ಕಾರದ ವ್ಯವಸ್ಥೆ ಕುಸಿದು ಹೋಗಿದೆ. ಹುಬ್ಬಳ್ಳಿ ಧಾರವಾಡದಲ್ಲಂತೂ ಸಂಪೂರ್ಣವಾಗಿ ಕುಸಿದಿದೆ. ಇದನ್ನೆಲ್ಲ ಗಮನಿಸಿದರೆ ಕರ್ನಾಟಕ ಈಗ ಗೂಂಡಾ ರಾಜ್ಯವಾಗಿದೆ. ಜನರ ನೆಮ್ಮದಿ ಕೆಡಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ ಆರೋಪಿ ಗಿರೀಶನನ್ನು ಬಂಧಿಸಲಾಗಿದೆ. ಆದರೆ, ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಅಂಜಲಿ ಆತ್ಮಕ್ಕೆ ಶಾಂತಿ ಸಿಗಬೇಕು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಬೇಕು. ಅಂದಾಗ ಮಾತ್ರ ನ್ಯಾಯ ದೊರೆಯಲು ಸಾಧ್ಯ ಎಂದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ವೇಳೆ ಎಷ್ಟು ಕೊಲೆಗಳಾಗಿವೆ ಎಂದು ಪ್ರಶ್ನಿಸಿದ್ದಾರೆ. ಆದರೆ, ನಿಮ್ಮ ಸರ್ಕಾರದಲ್ಲಿ‌ ಎಷ್ಟು ಕೊಲೆಗಳಾಗಿವೆ ಎಂಬುದನ್ನು ಅರಿತುಕೊಳ್ಳಲಿ. ಇಂತಹ ಘಟನೆಗಳನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ, ಗೃಹಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಘಟನೆ ನಡೆದು ಇಷ್ಟು ದಿನಗಳಾದರೂ ಗೃಹ ಸಚಿವರು ಏಕೆ ಬಂದು ಕುಟುಂಬಕ್ಕೆ ಸಾಂತ್ವನ ಹೇಳಿ ಅಧಿಕಾರಿಗಳ ಸಭೆ ಮಾಡಿಲ್ಲ. ನಿಷ್ಕಾಳಜಿ ತೋರಿದ ಪೊಲೀಸರನ್ನು ಅಮಾನತ್ತು ಮಾಡುವ ನಾಟಕವಾಡುವುದನ್ನು ಬಿಟ್ಟುಬಿಡಿ ಎಂದು ವಾಗ್ದಾಳಿ ನಡೆಸಿದರು.