ಕರ್ನಾಟಕ ಕಲೆ ಸಂಸ್ಕೃತಿಯ ನೆಲೆಬೀಡು: ಎಆರ್‌ಕೆ

| Published : Feb 13 2024, 12:45 AM IST

ಸಾರಾಂಶ

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯವರಂತಹ ಸಾಂಸ್ಕೃತಿಕ ನಾಯಕರು ನಡೆದಾಡಿದ ಪುಣ್ಯ ಭೂಮಿ ನಮ್ಮ ಜಿಲ್ಲೆಗೆ ಪುಣ್ಯ ಪುರುಷರು ನಡೆದಾಡಿದ ಹೆಮ್ಮೆ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯವರಂತಹ ಸಾಂಸ್ಕೃತಿಕ ನಾಯಕರು ನಡೆದಾಡಿದ ಪುಣ್ಯ ಭೂಮಿ ನಮ್ಮ ಜಿಲ್ಲೆಗೆ ಪುಣ್ಯ ಪುರುಷರು ನಡೆದಾಡಿದ ಹೆಮ್ಮೆ ಇದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪಟ್ಟಣದ ಮಂಜುನಾಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸೌರಭ 2023 - 24 ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ ಕಲೆ ಮತ್ತು ಸಂಸ್ಕೃತಿಯ ನೆಲೆಬೀಡು ಎಂದರೆ ತಪ್ಪಾಗಲಾರದು ವಿಶ್ವದೆಲ್ಲೆಡೆ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದೆ.

ಐತಿಹಾಸಿಕವಾದಂತಹ ಸಾಂಸ್ಕೃತಿಕ ಲೋಕದ ವೈಭವವನ್ನು ಇಲ್ಲಿ ಸೃಷ್ಟಿ ಮಾಡಬಹುದಾಗಿದೆ. ವಿಶ್ವವಿಖ್ಯಾತ ದಸರಾದಲ್ಲಿ ಭಾಗವಹಿಸುವಂತಹ ಕಲಾತಂಡಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ. ಹಂಪಿ ಉತ್ಸವವನ್ನು ಸರ್ಕಾರ ವಹಿಸಿಕೊಳ್ಳುತ್ತದೆ, ದಸರಾ ವೈಭವವನ್ನು ಹಂಪಿ ಉತ್ಸವದಲ್ಲಿ ಕಾಣುತ್ತೇವೆ. ಸ್ಥಳೀಯ ಕಲಾವಿದರು ಕೇವಲ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಬಣ್ಣಿಸಿದರು.

ಇದು ಜಿಲ್ಲಾ ಮಟ್ಟದ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಕ್ರಮ ಆದರೆ ಕೊಳ್ಳೇಗಾಲ ಜಿಲ್ಲೆಯ ಉಪವಿಭಾಗ ಕೇಂದ್ರವಾಗಿರುವುದರಿಂದ ಈ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಇದುವರೆಗೂ ಕ್ರೀಡಾಕೂಟಗಳು, ಆರೋಗ್ಯ ಮೇಳಗಳು, ಹಾಗೂ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳು ಇಲ್ಲಿನ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ನಡೆಸಲಾಗುತ್ತಿತ್ತು. ನಗರ ಸಭೆಯ ವಾರ್ಡ್‌ಗಳ ಯಾವುದೇ ಬಡಾವಣೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಬಾರಿ ಮಂಜುನಾಥ ನಗರದಲ್ಲಿ ಚಾಮರಾಜನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂಜಿಎಸ್‌ವಿ ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿದ್ದರೆ ಸಾರ್ವಜನಿಕರು ಆಗಮಿಸಿ ವೀಕ್ಷಿಸುತ್ತಿದ್ದರು. ಆದರೂ ಇಲ್ಲಿ ನಡೆದಿರುವುದರಿಂದ ಸ್ಥಳೀಯ ಮಂಜುನಾಥ್ ನಗರದ ಜನರು ಈ ಕಾರ್ಯಕ್ರಮವನ್ನು ಆಸ್ವಾದಿಸಲಿದ್ದಾರೆ ಎಂದು ಹೇಳಿದರು. ಇದು ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿರುದರಿಂದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜು ಎಸ್ ತಂಗಡಗಿ ಬರಬೇಕಾಗಿತ್ತು. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಗಡಿನಾಡ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಬೇಕಾಗಿದ್ದರಿಂದ ಹಾಗೂ ನಾಳೆಯಿಂದ ಅಧಿವೇಶನ ನಡೆಯುವುದರಿಂದ ಅವರು ಸ್ಥಳೀಯ ಶಾಸಕರು ಬರಲು ಸಾಧ್ಯವಾಗಲಿಲ್ಲ. ಉಳಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಬಹುದಾಗಿತ್ತು. ಆದರೆ ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದರು. ನಗರಸಭಾ ಸದಸ್ಯ ಶಂಕನಪುರ ಪ್ರಕಾಶ್ ಮಾತನಾಡಿ, ನಾನು ಬಿಜೆಪಿ ಸದಸ್ಯನಾಗಿ ನನ್ನ ವಾರ್ಡ್‌ನಲ್ಲಿ ಈ ಕಾರ್ಯಕ್ರಮ ಅಯೋಜಿಸಿ ಎಂದು ಕೇಳಿಕೊಂಡ ಹಿನ್ನೆಲೆ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಸಹಾಯಕ ನಿರ್ದೇಶಕರು ಇದಕ್ಕೆ ಸಾಥ್ ನೀಡಿ ಇಂತಹ ಅದ್ಭುತ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ನಲ್ಲಿಯೂ ಇಂತಹ ಕಾರ್ಯಕ್ರಮ ನಡೆಯುವಂತಾಗಬೇಕು ಎಂದರು.ಕಳೆ ತಂದ ಕಲಾತಂಡಗಳ ಮೆರವಣಿಗೆ:ಕೊಳ್ಳೇಗಾಲ. ಫೆ.12. ಕಾರ್ಯಕ್ರಮಕ್ಕೂ ಮುನ್ನ ಸಂಜೆ 6 ರ ವೇಳಗೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ವೃತದಿಂದ ಬಡಾವಣೆಯ ಮುಖ್ಯರಸ್ತೆ ಮೂಲಕ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗೊರವರ ಕುಣಿತ ಡೊಳ್ಳು ಕುಣಿತ ಕೀಲು ಕುದುರೆ, ತಮಟೆ ಕಲಾವಿದರು ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದರು. ಮೆರವಣಿಗೆಯುದ್ದಕ್ಕೂ ಶಾಸಕರಿಗೆ ಹಾರ ಹಾಕಿ, ಸ್ವಾಗತ ಕೋರಿ ಕರೆತರಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಾದ ಕೊಳ್ಳೇಗಾಲದ ಬಸಪ್ಪ ಮತ್ತು ತಂಡದವರಿಂದ ವಾದ್ಯ ಸಂಗೀತ, ಕಟ್ನವಾಡಿ ಮಹದೇವಸ್ವಾಮಿ ಮತ್ತು ತಂಡದಿಂದ ವಚನ ಸಂಗೀತ, ಚಾಮರಾಜನಗರದ ಸಿ ಎಂ ನರಸಿಂಹಮೂರ್ತಿ ಮತ್ತು ತಂಡದವರಿಂದ ಸುಗಮ ಸಂಗೀತ, ಮಹೇಶ್ ಮತ್ತು ತಂಡದಿಂದ ನೃತ್ಯ ರೂಪಕ, ರಾಮಸಮುದ್ರದಜಿ ರಾಜಪ್ಪ ಮತ್ತು ತಂಡದಿಂದ ಜನಪದ ಯೇಂಕಾರ, ಗುಂಡ್ಲುಪೇಟೆಯ ಮಹದೇವ ಪ್ರಸಾದ್ ಮತ್ತು ತಂಡದವರಿಂದ ನಾಟಕ: ಮಂಟೇಸ್ವಾಮಿ ಕಥಾ ಪ್ರಸಂಗ, ದೊಡ್ಡ ಮೂಳೆಯ ದೊಡ್ಡ ಗವಿಬಸಪ್ಪ ಮತ್ತು ತಂಡದಿಂದ ನೀಲಗರ ಪದ ಕಾರ್ಯಕ್ರಮಗಳು ನಡೆಯಿತು.

ಅನೇಕ ಗಣ್ಯರು ಗೈರು:

ಈ ಸಂದರ್ಭದಲ್ಲಿ ಸ್ಥಳೀಯ ವಾರ್ಡ್‌ನ ನಗರಸಭಾ ಸದಸ್ಯ ಪ್ರಕಾಶ್ ಶಂಕರಪುರ, ಬಿಇಒ ಮಂಜುಳ ಅವರನ್ನು ಹೊರತುಪಡಿಸಿ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದ್ದ ಯಾವ ಆಹ್ವಾನಿತ ಗಣ್ಯರು ಬಾರದ ಕಾರಣ ಶಾಸಕರೊಟ್ಟಿಗೆ ಬಂದಿದ್ದ ನಗರಸಭಾ ಮಾಜಿ ಅಧ್ಯಕ್ಷರೂ ಹಾಗೂ ಹಾಲಿ ಸದಸ್ಯರಾದ ರೇಖಾ ರಮೇಶ್, ಬಸ್ತಿಪುರ ಶಾಂತರಾಜು, ಜಿ.ಪಿ.ಶಿವಕುಮಾರ್, ಸುಮಾ ಸುಬ್ಬಣ್ಣ, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಷ, ಮಾಜಿ ಸದಸ್ಯ ಕೃಷ್ಣವೇಣಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ಅಸಂತಮೇರಿ ಹಾಗೂ ಮತ್ತಿತರರು ವೇದಿಕೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಸಮಾರಂಭಕ್ಕೆ ಗಣ್ಯರು ಬಾರದ್ದನ್ನ ಮನಗಂಡು ಶಾಸಕರು ಸ್ಥಳೀಯರನ್ನೆ ವೇದಿಕೆಗೆ ಆಹ್ವಾನಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜು ತಂಗಡಗಿ, ಪುಟ್ಟರಂಗಶೆಟ್ಟಿ, ಸಂಸದ ವಿ ಶ್ರೀನಿವಾಸ್ ಪ್ರಸಾದ್, ಗುಂಡ್ಲುಪೇಟೆ ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್, ಹನೂರು ಶಾಸಕ ಎಂ ಆರ್ ಮಂಜುನಾಥ್, ವಿ.ಪ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಮಧು ಜಿ. ಮಾದೇಗೌಡ, ಸಿ.ಎಸ್. ಮಂಜೇಗೌಡ, ವಿಶೇಷ ಆಹ್ವಾನಿತರಾಗಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ.ಸಿಇಒಆನಂದ್ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹೂ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಗೈರಾಗಿದ್ದು ಕಂಡು ಬಂತು.