ಸಾರಾಂಶ
ಗಜೇಂದ್ರಗಡ: ಕರ್ನಾಟಕವೆಂಬುದು ಕೇವಲ ಈ ಮಣ್ಣಿನ ಹೆಸರಷ್ಟೇ ಅಲ್ಲ, ಈ ಮಣ್ಣಿನ ಸಂಸ್ಕೃತಿ, ಶೌರ್ಯ ಪರಾಕ್ರಮದ ಸ್ವಾಭಿಮಾನದಿಂದ ಕದಂಬ, ಮಯೂರವರ್ಮನಿಂದ ಕಟ್ಟಲ್ಪಟ್ಟ ಸರ್ವರ ಸಾಮರಸ್ಯದ ಬೀಡು ಎಂದು ಚಿಂತಕ ರವೀಂದ್ರ ದೊಡ್ಡಮೇಟಿ ಹೇಳಿದರು.
ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜರುಗಿದ ಸಿರಿಗನ್ನಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡಿಗರು ದುರಾಸೆಯಿಂದ ಮತ್ತೊಬ್ಬರ ಮೇಲೆ ಆಕ್ರಮಣ ಮಾಡಿದವರಲ್ಲ. ಆಕ್ರಮಣ ಮಾಡಿದವರನ್ನು ಸದೆಬಡಿಯದೆ ಬಿಟ್ಟಿಲ್ಲ. ನಾವೆಲ್ಲ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಭಾರತ ಒಕ್ಕೂಟದ ಭಾವೈಕ್ಯತೆಯ ರಾಷ್ಟ್ರವಾಗಿದ್ದು, ಎಲ್ಲ ಭಾಷೆಗಳು ಸಂಸ್ಕೃತಿ ಪರಂಪರೆಗಳಿಗೆ ಅವುಗಳದ್ದೇ ಮಹತ್ವವಿದೆ. ಎಲ್ಲವನ್ನೂ ಗೌರವಿಸಬೇಕು. ಜ್ಞಾನಕ್ಕೋಸ್ಕರ ಆಂಗ್ಲ ಸೇರಿ ಇತರ ಭಾಷೆಗಳನ್ನು ಕಲಿತು, ಕನ್ನಡವನ್ನು ಸಮೃದ್ಧಗೊಳಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ.ಬಿ. ಗುಡಿಮನಿ ಮಾತನಾಡಿ, ಕರ್ನಾಟಕ ಏಕೀಕರಣದ ನಂತರ ನಾಡನ್ನು ಕಟ್ಟವ ಸ್ವಾಭಿಮಾನದ ಶಕ್ತಿಗಳು ಯುವ ಸಮುದಾಯಕ್ಕೆ ನಾಡ ರಕ್ಷಣೆಯ ದೀಕ್ಷೆ ನೀಡಬೇಕಾಗಿದೆ. ಒಂದು ಭಾಷೆ ಕೇವಲ ಭಾಷೆಯಲ್ಲ, ಈ ಮಣ್ಣಿನ ಚರಿತ್ರೆಯ ಧ್ವನಿಯಾಗಿದೆ ಎಂದರು.ಉಪನ್ಯಾಸಕ ಅರವಿಂದ ವಡ್ಡರ ಮಾತನಾಡಿ, ಏಕೀಕರಣ ಚಳವಳಿ ಎಂಬುದು ಕರ್ನಾಟಕ ಸ್ವಾತಂತ್ರ‍್ಯ ಸಂಗ್ರಾಮದ ತ್ಯಾಗ, ಬಲಿದಾನ, ಸ್ವಾಭಿಮಾನಿ ಕನ್ನಡಿಗರು ಸದಾ ಸ್ಮರಣೀಯವಾಗಿಸಿಕೊಳ್ಳಬೇಕು. ಅಂದಾನಪ್ಪ ದೊಡ್ಡಮೇಟಿ, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಸಿದ್ದಪ್ಪ ಕಂಬಳಿ ಸೇರಿ ಮಹನೀಯರ ತತ್ವ-ಸಿದ್ಧಾಂತಗಳನ್ನು ಯುವ ಸಮೂಹ ಸ್ಫೂರ್ತಿಯಾಗಿಸಿಕೊಳ್ಳಿ ಎಂದರು.
ಈ ವೇಳೆ ಎಸ್.ಕೆ. ಕಟ್ಟಿಮನಿ, ಎಸ್.ಎಸ್. ವಾಲಿಕಾರ, ಬಿ.ವಿ. ಮುನವಳ್ಳಿ, ವಿ.ಎಂ. ಜೂಚನಿ, ಸಿದ್ದು ಕರಬಾಶಟ್ಟರ, ಜ್ಯೋತಿ ಗದಗ, ಸಂಗಮೇಶ ಹುನಗುಂದ, ಎಂ.ಎಲ್. ಕ್ವಾಟಿ, ಎಲ್.ಕೆ. ಹಿರೇಮಠ ಇದ್ದರು.;Resize=(128,128))