ಕೋಟಿ ಕುಬೇರರ ಮೇಲೆ ಲೋಕಾಯುಕ್ತರ ದಾಳಿ

| Published : Jan 10 2024, 01:46 AM IST / Updated: Jan 10 2024, 12:01 PM IST

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ಆರು ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 51.13 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ರಾಜ್ಯದ ಆರು ಅಧಿಕಾರಿಗಳಿಗೆ ಸೇರಿದ 35 ಸ್ಥಳಗಳ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 51.13 ಕೋಟಿ ರು.ಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. 

ಮಂಗಳವಾರ ನಡೆದ ದಾಳಿಯಲ್ಲಿ ಪತ್ತೆಯಾದ ಅಧಿಕಾರಿಗಳೆಲ್ಲರೂ ಕೋಟ್ಯಧಿಪತಿಗಳೇ ಆಗಿದ್ದಾರೆ. ಅವರ ಬಳಿ ಹಲವು ನಿವೇಶನ, ನಗದು, ಚಿನ್ನಾಭರಣ ಪತ್ತೆಯಾಗಿದೆ. ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

 ಬೆಂಗಳೂರು, ರಾಮನಗರ, ದೇವನಹಳ್ಳಿ, ಆನೇಕಲ್‌ ಸೇರಿದಂತೆ 35 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ದಾಳಿಗೊಳಗಾದ ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್‌.ನಾಗರಾಜ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಹುಲಿ ಉಗುರು ಸಹ ಪತ್ತೆಯಾಗಿದೆ ಎಂದು ಹೇಳಲಾಗಿದೆ. 

ಈ ಬಗ್ಗೆ ಅರಣ್ಯ ಇಲಾಖೆಯ ತನಿಖೆಗೆ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ದೇವನಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಡಿ.ಎಂ.ಪದ್ಮನಾಭ, ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್‌ ಎನ್‌.ಸತೀಶ್‌ ಬಾಬು, ರಾಮನಗರದ ಕೆಆರ್‌ಐಡಿಎಲ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಯ್ಯದ್‌ ಮುನೀರ್‌ ಅಹ್ಮದ್‌, ಬೆಂಗಳೂರು ದಕ್ಷಿಣ ಜಿಲ್ಲೆಯ ಚೆನ್ನನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಎಚ್.ಎಸ್‌.ಸುರೇಶ್‌, ಅನೇಕಲ್‌ ಯೋಜನಾ ಪ್ರಾಧಿಕಾರದ ಜಂಟಿ ನಿರ್ದೇಶಕ ಮಂಜೇಶ್‌ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ.

ದಾಳಿ ವೇಳೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಎಸ್‌.ಸುರೇಶ್‌ ಬಳಿ ಅತಿ ಹೆಚ್ಚು ಅಸ್ತಿ ಪತ್ತೆಯಾಗಿದ್ದು, 25.58 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 

ಒಟ್ಟು 16 ನಿವೇಶನಗಳು ಇರುವುದು ಗೊತ್ತಾಗಿದ್ದು, 2.11 ಕೋಟಿ ರು. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಆನೇಕಲ್ ಯೋಜನಾ ಪ್ರಾಧಿಕಾರ ಜಂಟಿ ನಿರ್ದೇಶಕ ಬಿ.ಮಂಜೇಶ್ ಬಳಿ 11 ನಿವೇಶನಗಳು ಇರುವುದು ಶೋಧ ಕಾರ್ಯದ ವೇಳೆ ಪತ್ತೆಯಾಗಿದೆ. 

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ದಾಳಿಗೊಳಗಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಹುಲಿ ಉಗುರು ಪತ್ತೆ!
ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್‌.ನಾಗರಾಜ್‌ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಹುಲಿ ಉಗುರು ಸಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಆದರೆ, ನಾಗರಾಜ್‌ ಅವರು ಹುಲಿ ಉಗುರು ಅಸಲಿಯಲ್ಲ, ನಕಲಿ (ಸಿಂಥೆಟಿಕ್‌) ಆಗಿದೆ ಎಂದು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಗರಾಜ್‌ ನೀಡಿರುವ ಹೇಳಿಕೆ ಹಿನ್ನಲೆಯಲ್ಲಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖೆಗೆ ವಹಿಸಿದ್ದಾರೆ. ಅಲ್ಲದೇ, ಹುಲಿ ಉಗುರಿನ ಸತ್ಯಾಸತ್ಯತೆ ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.