13 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್‌

| Published : Mar 28 2024, 01:34 AM IST / Updated: Mar 28 2024, 08:08 AM IST

13 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಲೋಕಾಯುಕ್ತ ಪೊಲೀಸರು ರಾಜ್ಯದ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 62 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 44.39 ಲಕ್ಷ ರು. ನಗದು ಸೇರಿದಂತೆ 35.83 ಕೋಟಿ ರು. ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವ ಲೋಕಾಯುಕ್ತ ಪೊಲೀಸರು ರಾಜ್ಯದ 13 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 62 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 44.39 ಲಕ್ಷ ರು. ನಗದು ಸೇರಿದಂತೆ 35.83 ಕೋಟಿ ರು. ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.

ಬುಧವಾರ ಬೆಳ್ಳಂಬೆಳ್ಳಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಬೆಂಗಳೂರು, ಉಡುಪಿ, ಕಾರವಾರ, ಮಂಡ್ಯ, ಮೈಸೂರು, ಕೊಡಗು, ಧಾರವಾಡ, ಬೀದರ್‌, ಕೋಲಾರ, ವಿಜಯಪುರ, ಚಿಕ್ಕಬಳ್ಳಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ. 

ಬಿಬಿಎಂಪಿ ಬ್ಯಾಟರಾಯಪುರ ಕಚೇರಿಯ ಮುಖ್ಯ ಎಂಜಿನಿಯರ್‌ ಎಸ್‌.ಪಿ.ರಂಗನಾಥ್‌, ಮಂಡ್ಯ ಜಿಲ್ಲೆಯ ಅಗಸನಪುರ ಗ್ರಾಮಪಂಚಾಯ್ತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕೃಷ್ಣೇಗೌಡ, ಕೊಡಗು ಜಿಲ್ಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಹಾಯಕ ಎಂಜಿನಿಯರ್‌ ಎಂ.ಎಂ.ಫಯಾಜ್‌ ಅಹ್ಮದ್‌, 

ಸೋಮವಾರ ಪೇಟೆ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಜಯಣ್ಣ, ರಾಮನಗರ ಜಿಲ್ಲೆಯ ಪಂಚನಾಯಕನಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಯತೀಶ್‌,

 ಚಿಕ್ಕಬಳ್ಳಾಪುರ ಜಿಲ್ಲೆಯ ಕೆಆರ್‌ಐಡಿಎಲ್‌ ಕಾರ್ಯಪಾಲಕ ಎಂಜಿನಿಯರ್‌ ಸದಾಶಿವಯ್ಯ, ಕಾರವಾರದ ಕಿರಿಯ ಎಂಜಿನಿಯರ್‌ ಪ್ರಕಾಶ್ ರೇವಣ್ಣರ್‌, ಉಡುಪಿ ಜಿಲ್ಲೆ ಅಬಕಾರಿ ಇಲಾಖೆ ಜಿಲ್ಲಾ ಆಯುಕ್ತೆ ಎಂ.ರೂಪಾ, ಬೆಳಗಾವಿ ಜಿಲ್ಲೆ ನಿಡಗುಂದಿ ಗ್ರಾಮ ಪಂಚಾಯಿತಿ ಪಿಡಿಒ ಸದಾಶಿವ ಜಯಪ್ಪ, ಧಾರವಾಡ ಜಿಲ್ಲೆ ವಲಯ ಅರಣ್ಯಾಧಿಕಾರಿ ಮಹೇಶ್‌ ಚಂದ್ರಯ್ಯ, 

ಬಾಗಲಕೋಟೆ ಜಿಲ್ಲೆ ಎಆರ್‌ಡಿಓ ಶಣ್ಮುಕಪ್ಪ ಭಿಮ್ಷಾತೀರ್ಥ, ಬೀದರ್‌ ಜಿಲ್ಲೆ ಕಾರಂಜ ಯೋಜನೆ ಕಾರ್ಯಪಾಲಕ ಎಂಜಿನಿಯರ್‌ ಶಿವಕುಮಾರಸ್ವಾಮಿ, ರಾಮನಗರ ಜಿಲ್ಲೆ ಮಾಗಡಿ ಯೋಜನಾ ಪ್ರಾಧಿಕಾರ ಸಹಾಯಕ ನಿರ್ದೇಶಕ ನಾಗರಾಜಪ್ಪ ಅವರ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

ದಾಳಿಗೊಳಗಾದ ಅಧಿಕಾರಿಗಳ ಪೈಕಿ ನಾಗರಾಜಪ್ಪ ಅವರ ಸ್ಥಳಗಳಲ್ಲಿ ಅತಿ ಹೆಚ್ಚು ಸಂಪತ್ತು ಪತ್ತೆಯಾಗಿದೆ. 10.37 ಕೋಟಿ ರು. ಮೌಲ್ಯದ ನಿವೇಶನ, ಮನೆ, ಭೂಮಿ ಸಿಕ್ಕಿದ್ದು, 11.50 ಲಕ್ಷ ರು. ನಗದು ಸೇರಿ ಒಟ್ಟು 11.13 ಕೋಟಿ ರು. ಮೌಲ್ಯದ ಸಂಪತ್ತು ಸಿಕ್ಕಿದೆ. 

ಬಲ್ಲಮೂಲಗಳ ಮಾಹಿತಿ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಇದರ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.