13 ಭ್ರಷ್ಟರ ಮೇಲೆ 68 ಕಡೆ ಭಾರಿ ಲೋಕಾಯುಕ್ತ ದಾಳಿ

| Published : Dec 06 2023, 01:15 AM IST

ಸಾರಾಂಶ

9 ಜಿಲ್ಲೆಗಳಲ್ಲಿ ಏಕಕಾಲಕ್ಕೆ 200 ಅಧಿಕಾರಿಗಳಿಂದ ರೇಡ್‌. 66 ಕೋಟಿ ಆಸ್ತಿ, ಅಪಾರ ನಗದು, ಚಿನ್ನ, ವಜ್ರಗಳು ಪತ್ತೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 9 ಜಿಲ್ಲೆಗಳಲ್ಲಿನ 13 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ನಿವಾಸಗಳು ಸೇರಿದಂತೆ 68 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ನೀರಿಳಿಸಿದ್ದಾರೆ.ದಾಳಿ ವೇಳೆ ಕೋಟ್ಯಂತರ ರು. ನಗದು, ಕೆ.ಜಿ.ಗಟ್ಟಲೆ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳು, ವಜ್ರದ ಆಭರಣಗಳು ಹಾಗೂ ದುಬಾರಿ ವಸ್ತುಗಳು ಸೇರಿದಂತೆ ಒಟ್ಟು 65.84 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಸುಮಾರು 200ಕ್ಕೂ ಅಧಿಕ ಲೋಕಾಯುಕ್ತ ಪೊಲೀಸರು ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಕಲಬುರಗಿ, ಬೀದರ್‌, ಮೈಸೂರು, ಕೊಪ್ಪಳ, ಧಾರವಾಡ, ಬಳ್ಳಾರಿ ಜಿಲ್ಲೆಗಳ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಬೇಟೆಯಾಡಿದ್ದು, ಪರಿಶೀಲನೆ ವೇಳೆ ಭಾರೀ ಪ್ರಮಾಣದ ಅಕ್ರಮ ಆಸ್ತಿಗಳು ಬೆಳಕಿಗೆ ಬಂದಿವೆ. 13 ಅಧಿಕಾರಿಗಳ ವಿರುದ್ಧ ಪ್ರತ್ಯೇಕವಾಗಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.ಬೆಂಗಳೂರಿನ ಬೆಸ್ಕಾಂ ಜಯನಗರ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ(ಇಇ) ಎಚ್.ಡಿ.ಚೆನ್ನಕೇಶವ ಅವರ ಮನೆ, ಕಚೇರಿ, ಸಂಬಂಧಿಕರ ನಿವಾಸಿಗಳು ಸೇರಿದಂತೆ 7 ಸ್ಥಳಗಳ ಮೇಲೆ ನಡೆದ ದಾಳಿ ವೇಳೆ ಒಟ್ಟು 15.53 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.ರಾಮನಗರ ಜಿಲ್ಲೆ ಕಣಿಮಿಣಿಕೆ ಗ್ರಾಮದ ಕೆಎಂಎಫ್‌ ಮುಖ್ಯ ಕಾರ್ಯನಿರ್ವಾಹಕ(ಕಾರ್ಯದರ್ಶಿ) ಎಚ್‌.ಎಸ್‌.ಕೃಷ್ಣಮೂರ್ತಿ ಅವರ ಮನೆ, ಕಚೇರಿ ಸೇರಿದಂತೆ 5 ಸ್ಥಳಗಳ ಮೇಲೆ ನಡೆದ ದಾಳಿ ವೇಳೆ ಒಟ್ಟು 4.09 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.ಬೆಂಗಳೂರು ಬೆಸ್ಕಾಂ ಜಾಗೃತ ದಳದ ಉಪ ಪ್ರಧಾನ ವ್ಯವಸ್ಥಾಪಕ ಟಿ.ಎನ್‌.ಸುಧಾಕರ್‌ ರೆಡ್ಡಿ ಅವರ ಮನೆ, ಕಚೇರಿ, ಸಂಬಂಧಿಕರ ಮನೆಗಳು ಸೇರಿದಂತೆ 5 ಸ್ಥಳಗಳಲ್ಲಿ 5.73 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.ಹುಬ್ಬಳ್ಳಿ ನಗರ ಹೆಸ್ಕಾಂ ನಗರ ವಿಭಾಗೀಯ ಸ್ಟೋರ್‌ನ ನಿವೃತ್ತ ಕಿರಿಯ ಅಭಿಯಂತರ (ಗ್ರೇಡ್‌-2) ಬಸವರಾಜ ಅವರ ಮನೆ, ಸಂಬಂಧಿಕರ ಮನೆಗಳು ಸೇರಿದಂತೆ 3 ಸ್ಥಳಗಳಲ್ಲಿ ಒಟ್ಟು 4.05 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ.ಮೈಸೂರು ಜಿಲ್ಲೆ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎಸ್‌.ಮಹದೇವಸ್ವಾಮಿ ಅವರ ಮನೆ, ಸಂಬಂಧಿಕರ ಮನೆಗಳು ಸೇರಿದಂತೆ 12 ಸ್ಥಳಗಳಲ್ಲಿ ಒಟ್ಟು 8.41 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಬೆಳಗಾವಿ ಕೆಆರ್‌ಐಡಿಎಲ್‌ನ ಅಧೀಕ್ಷ ಇಂಜಿನಿಯರ್‌ ತಿಮ್ಮರಾಜಪ್ಪ ಅವರ ಕೋಲಾರದ ಮಹದೇವಪುರ ಗ್ರಾಮದ ಮನೆ, ಸಂಬಂಧಿಕರ ಮನೆಗಳು ಸೇರಿದಂತೆ 9 ಸ್ಥಳಗಳಲ್ಲಿ ಒಟ್ಟು 9 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ರಾಮನಗರ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್‌.ಮುನೇಗೌಡ ಅವರ ಮನೆ, ಕಚೇರಿ, ಸಂಬಂಧಿಕರ ಮನೆಗಳು ಸೇರಿದಂತೆ 6 ಸ್ಥಳಗಳಲ್ಲಿ ಒಟ್ಟು 5 ಕೋಟಿ ರು. ಮೌಲ್ಯ ಆಸ್ತಿಗಳು ಪತ್ತೆಯಾಗಿವೆ.ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ ಅವರ ಮನೆ ಸೇರಿದಂತೆ 2 ಸ್ಥಳಗಳಲ್ಲಿ ಒಟ್ಟು 8.90 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ ಮತ್ತು ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಲೆಕ್ಕ ಸಹಾಯಕ(ಹೊರಗುತ್ತಿಗೆ) ಸುನೀಲ್‌ ಕುಮಾರ್‌ ಅವರ ಮನೆ, ಸಂಬಂಧಿಕರ ಮನೆ ಸೇರಿದಂತೆ 4 ಸ್ಥಳಗಳಲ್ಲಿ ಒಟ್ಟು 1.25 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಕೊಪ್ಪಳ ಜಿಲ್ಲೆ ಆನೆಗುಂಡಿ ವಿಭಾಗದ ಡಿಆರ್‌ಎಫ್‌ಓ ಬಿ.ಮಾರುತಿ ಅವರ ಮನೆ ಸೇರಿ 2 ಸ್ಥಳಗಳ ಮೇಲೆ ನಡೆದ ದಾಳಿ ವೇಳೆ 21.39 ಲಕ್ಷ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಬಳ್ಳಾರಿ ಜಿಲ್ಲೆ ಗಣಿ ಮತ್ತು ಭೂಗರ್ಭ ಇಲಾಖೆಯ ಹಿರಿಯ ಭೂಗರ್ಭಶಾಸ್ತ್ರಜ್ಞ ಚಂದ್ರಶೇಖರ್‌ ಹಿರೇಮನಿ ಅವರ ಮನೆ, ಕಚೇರಿ ಸೇರಿದಂತೆ 5 ಸ್ಥಳಗಳಲ್ಲಿ ನಡೆದ ದಾಳಿ ವೇಳೆ ಒಟ್ಟು 10.72 ಲಕ್ಷ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಯಾದಗಿರಿ ಸಿಟಿ ಮುನ್ಸಿಪಲ್‌ ಕೌನ್ಸಿಲ್‌ನ ಆಯುಕ್ತ ಶರಣಪ್ಪ ಅವರ ಮನೆ, ಕಚೇರಿ ಸೇರಿದಂತೆ 4 ಸ್ಥಳಗಳಲ್ಲಿ ಒಟ್ಟು 2.05 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.ಯಾದಗಿರಿ ಜಿಲ್ಲೆ ಡಿಎಚ್‌ಒ ಡಾ.ಕೆ.ಪ್ರಭುಲಿಂಗ ಅವರ ಮನೆ, ಕಚೇರಿ ಸೇರಿದಂತೆ 4 ಸ್ಥಳಗಳಲ್ಲಿ ನಡೆದ ದಾಳಿ ವೇಳೆ 1.49 ಕೋಟಿ ರು. ಮೌಲ್ಯದ ಆಸ್ತಿಗಳು ಪತ್ತೆಯಾಗಿವೆ.