ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ದಿನಗಳಲ್ಲಿ ಛಂದೋಬದ್ಧವಾಗಿ, ಲಯಬದ್ಧವಾಗಿ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ತಿಳಿಸಿದರು.ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ 23ನೇ ವಾರ್ಷಿಕೋತ್ಸವದಲ್ಲಿ ಲೇಖಕ ಕಿರಣ್ ಸಿಡ್ಲೇಹಳ್ಳಿ ಅವರ ‘ಭೋಗಮುಕ್ತಕ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕವಿತೆಗಳನ್ನು ಬರೆಯುವ ಸಂದರ್ಭದಲ್ಲಿ ಛಂದಸ್ಸು ಬಿಟ್ಟು ರಗಳೆಗಳ ಸ್ವರೂಪದಲ್ಲಿ ಕವಿತೆ ಬರೆಯಲಾಗಿದೆ. ಲಯ ಇಲ್ಲದಿದ್ದರೆ ಕಾವ್ಯವಾಗುವುದಿಲ್ಲ. ಹೀಗಾಗಿ, ಛಂದೋಬದ್ಧವಾಗಿ, ಲಯಬದ್ಧವಾಗಿ ಸಾಹಿತ್ಯ ಇರಬೇಕು ಎಂದರು.
ಗಮಕಿಗಳು ಪದ್ಯಗಳನ್ನು ಸಂಗೀತಕ್ಕೆ ಅಳವಡಿಸಿಕೊಳ್ಳಬೇಕಾದರೆ ಛಂದಸ್ಸು, ಲಯ ಮುಖ್ಯವಾಗಲಿದೆ. ಒಂದು ವೇಳೆ ಇವರೆರಡು ಇಲ್ಲದಿದ್ದರೆ ಕಷ್ಟಪಟ್ಟು ಸಂಗೀತ ಮಾಡಬೇಕಾಗುತ್ತದೆ. ಕೇಳಲು ಕೂಡ ಚೆನ್ನಾಗಿರುವುದಿಲ್ಲ. ಹೀಗಾಗಿ, ಛಂದೋಬದ್ಧ ಮತ್ತು ಲಯಬದ್ಧವಾಗಿ ಕಾವ್ಯ ರಚಿಸಬೇಕು. ಇಂತಹ ಛಂದೋಬದ್ಧ ಕೃತಿಯನ್ನು ಲೇಖಕ ಕಿರಣ್ ಸಿಡ್ಲೇಹಳ್ಳಿ ರಚಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.ಅದ್ಭುತವಾದ ಅಮೃತ ಸಿಂಚನ
ಕೃತಿ ಕುರಿತು ನಿವೃತ್ತ ಕನ್ನಡ ಪ್ರಾಧ್ಯಾಪಕ ಸಿ.ವಿ. ಶ್ರೀಧರಮೂರ್ತಿ ಮಾತನಾಡಿ, ಮುಕ್ತಕ ಒಂದೊಂದು ಬಿಡಿ ಮುತ್ತು. ಸಾಹಿತ್ಯ ಸಾಗರವಾದರೆ, ಮುಕ್ತಕ ಹರಿದು ಸೇರುವ ತೊರೆ ಹಳ್ಳ. ಕಾವ್ಯ ಪ್ರಕಾರ ಮಹಾ ವೃಕ್ಷವಾದರೆ, ಮುಕ್ತಕ ಅದರ ವೈಭವ ಭವ್ಯತೆ ಹೆಚ್ಚಿಸುವ ರಂಬೆ ಕೊಂಬೆ. ಮುಕ್ತಕ ಕೊಡುವ ತಿಳವಳಿಕೆಯ ಶಕ್ತಿ ಅಪಾರ. ಜೀವನ ದರ್ಶನ ಬಿಡಿ ಬಿಡಿಯಾಗಿ ತಿಳಿಸುತ್ತದೆ. ಇದೊಂದು ಅದ್ಭುತವಾದ ಅಮೃತ ಸಿಂಚನ ಎಂದು ಬಣ್ಣಿಸಿದರು.ಭೋಗಮುಕ್ತಕ ಕೃತಿ ಸಾಹಿತ್ಯ ಭಂಡಾರಕ್ಕೆ ಅದ್ಭುತ ಕೊಡುಗೆಯಾಗಿದೆ. ಭಾಷೆ ಸರಳವಾಗಿದ್ದು, ಭಾವ ಮಧುರವಾಗಿದೆ. ಭೋಗ ಷಟ್ಬದಿ ಪುನರುಜ್ಜೀವನಗೊಳಿಸುವ ಕೃತಿಯಾಗಿದೆ. ಇಲ್ಲಿ ಜೀವನ ಮೌಲ್ಯಗಳಿವೆ. ಬದುಕಿನ ದರ್ಶನವಿದೆ. ಸತ್ವ–ತತ್ವವೂ ಅಡಕಗೊಂಡಿದೆ. ಸಾಹಿತ್ಯದ ಸಿರಿವಂತಿಕೆಯೂ ಇದೆ. ತಮ್ಮ ಅನುಭವದಿಂದ ಹೆಕ್ಕಿದ ಎಲ್ಲಾ ಮುತ್ತುಗಳನ್ನು ಕೃತಿಯಲ್ಲಿ ಪೋಣಿಸಿದ್ದಾರೆ ಎಂದು ಅವರು ಶ್ಲಾಘಿಸಿದರು.
ಇದೇ ವೇಳೆ ಸಾಧಕರಿಗೆ ಸನ್ಮಾನಿಸಲಾಯಿತು. ವಿಜಯಾ ಪದ್ಮಶಾಲಿ ಅವರಿಗೆ ಡಿವಿಜಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದುಷಿ ಶಶಿಕಲಾ ಚಂದ್ರಶೇಖರ್ ಮುಕ್ತಕಗಳ ಗಾಯನ ಪ್ರಸ್ತುತ ಪಡಿಸಿದರು.ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್. ರಾಮಪ್ರಸಾದ್, ಅಧ್ಯಕ್ಷ ಡಾ.ಎಚ್.ವಿ. ನಾಗರಾಜರಾವ್, ಲೇಖಕ ಕಿರಣ್ ಸಿಡ್ಲೇಹಳ್ಳಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಮೊದಲಾದವರು, ಕೃಪಾ ಮಂಜುನಾಥ್ ಇದ್ದರು.
----ಕೋಟ್...
ಮುಕ್ತಕ ಎಂದರೆ ಬಿಡಿ ಪದ್ಯ. ಒಂದೇ ಒಂದು ಭಾವವನ್ನು ಅರ್ಥಗರ್ಭಿತವಾಗಿ ಅಭಿವ್ಯಕ್ತಿಸುವ ಗುಣ ಹೊಂದಿದ್ದು, ಅದರ ವ್ಯಾಪ್ತಿ ಬಹಳ ಹಿರಿದು. ಕಾವ್ಯ ಪ್ರಕಾರಗಳಲ್ಲಿಯೇ ಮುಕ್ತಕ ಅತ್ಯಂತ ಸುಂದರವಾಗಿದ್ದು, ಕನ್ನಡದಲ್ಲೂ ಮುಕ್ತಕಗಳು ಅಪಾರ ಸಂಖ್ಯೆಯಲ್ಲಿ ರಚಿತವಾಗಿವೆ. ಸಂಸ್ಕೃತ ಬಿಟ್ಟು ಕನ್ನಡ ಸಾಹಿತ್ಯವಿಲ್ಲ. ಹೀಗಾಗಿ, ಸಂಸ್ಕೃತದಲ್ಲೂ ಬಹಳಷ್ಟು ಮುಕ್ತಕಗಳಿವೆ. ಆದರೆ, ಕನ್ನಡ ಸಾಹಿತ್ಯದಲ್ಲಿನ ಮುಕ್ತಕಗಳು ವಿಶೇಷ ಸ್ಥಾನಮಾನ ಹೊಂದಿದೆ.- ಡಾ. ಧರಣಿದೇವಿ ಮಾಲಗತ್ತಿ, ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ