ಪೊಲೀಸಿಂಗ್‌ನಲ್ಲಿ ರಾಜ್ಯ ನಂ.1

| Published : Apr 16 2025, 01:46 AM IST

ಸಾರಾಂಶ

ನ್ಯಾಯದಾನದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನ ಅಂಶಗಳನ್ನು ಪರಿಗಣಿಸಿ ಈ ವರದಿ ತಯಾರಿಸಲಾಗಿದೆ.

- ಜೈಲು ನಿರ್ವಹಣೆ, ನ್ಯಾಯದಾನದಲ್ಲೂ ಮೊದಲ ಸ್ಥಾನ

===

- ದೇಶದಲ್ಲಿನ ಪೊಲೀಸಿಂಗ್‌, ನ್ಯಾಯದಾನ ಬಗ್ಗೆ ಟಾಟಾ ಟ್ರಸ್ಟ್‌ ವರದಿ

- ಭಾರತದ ನ್ಯಾಯದಾನ ವರದಿಯಲ್ಲಿ ದಕ್ಷಿಣದ ರಾಜ್ಯಗಳೇ ಟಾಪ್‌ 5

- 10ಕ್ಕೆ 6.78 ಅಂಕದ ಮೂಲಕ ಕರ್ನಾಟಕಕ್ಕೆ ದೇಶದಲ್ಲೇ ಅಗ್ರಸ್ಥಾನ

- ಬಂಗಾಳ, ಉಪ್ರ., ಉ.ಖಂಡ, ಜಾರ್ಖಂಡ್‌, ರಾಜಸ್ಥಾನ ಲಾಸ್ಟ್‌ 5

--

ನವದೆಹಲಿ: ನ್ಯಾಯದಾನದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ವರದಿಯೊಂದು ತಿಳಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿನ ಪೊಲೀಸ್ ವ್ಯವಸ್ಥೆ, ನ್ಯಾಯ ವಿತರಣೆ, ಜೈಲು ನಿರ್ವಹಣೆ ಮತ್ತು ಕಾನೂನು ನೆರವಿನ ಅಂಶಗಳನ್ನು ಪರಿಗಣಿಸಿ ಈ ವರದಿ ತಯಾರಿಸಲಾಗಿದೆ.

ವರದಿ ಅನ್ವಯ ದೇಶದ 18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಕೊನೆಯ ಸ್ಥಾನದಲ್ಲಿದೆ.ನ್ಯಾಯಾಂಗದ 4 ಆಧಾರಸ್ತಂಭಗಳಾದ ಪೊಲೀಸ್ ವ್ಯವಸ್ಥೆ, ಜೈಲು ನಿರ್ವಹಣೆ, ನ್ಯಾಯದಾನ ಮತ್ತು ಕಾನೂನು ನೆರವನ್ನು ಪರಿಗಣಿಸಿ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ್ದು, ಅದರ ವರದಿಯನ್ನು ಟಾಟಾ ಟ್ರಸ್ಟ್‌ ಮಂಗಳವಾರ ಬಿಡುಗಡೆ ಮಾಡಿದೆ. ಅದರನ್ವಯ 10ಕ್ಕೆ 6.78 ಅಂಕಗಳನ್ನು ಪಡೆದ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡಿದೆ.

ಇನ್ನೊಂದು ವಿಶೇಷವೆಂದರೆ ಪಟ್ಟಿಯಲ್ಲಿ ಎಲ್ಲಾ ಮೊದಲ 5 ಸ್ಥಾನಗಳನ್ನು ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಪಡೆದುಕೊಂಡಿವೆ. ಪಟ್ಟಿಯಲ್ಲಿ ಕಡೆಯ 5 ಸ್ಥಾನಗಳನ್ನು ಕ್ರಮವಾಗಿ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಉತ್ತರಾಖಂಡ, ಜಾರ್ಖಂಡ್‌ ಮತ್ತು ರಾಜಸ್ಥಾನ ರಾಜ್ಯಗಳು ಪಡೆದಿವೆ.

ವರದಿ ಹೇಳಿದ್ದೇನು?:

18 ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅಗ್ರಸ್ಥಾನ (10ಕ್ಕೆ 6.78 ಅಂಕ), ಪಶ್ಚಿಮ ಬಂಗಾಳಕ್ಕೆ ಕೊನೆಯ (3.63) ಸ್ಥಾನ ಪಡೆದಿದೆ. ಇನ್ನು 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕಿಂ ಅಗ್ರಸ್ಥಾನ ಪಡೆದಿದ್ದರೆ, ಗೋವಾಕ್ಕೆ ಕಡೆಯ ಸ್ಥಾನ ಸಿಕ್ಕಿದೆ.

ಅನುಪಾತ:

ಇನ್ನು ಶಾದ್ಯಂತ ಪೊಲೀಸ್-ಜನಸಂಖ್ಯಾ ಅನುಪಾತದಲ್ಲಿ ಅಸಮತೋಲನ ದೊಡ್ಡ ಪ್ರಮಾಣದಲ್ಲಿದೆ. ದೇಶದಲ್ಲಿ 1ಲಕ್ಷ ಜನರಸಂಖ್ಯೆಗೆ ಸರಾಸರಿ ಕೇವಲ 155 ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಹಾರದಲ್ಲಿ ಅತ್ಯಂತ ಕಳಪೆ ಪೊಲೀಸ್-ಜನಸಂಖ್ಯೆ ಅನುಪಾತವಿದ್ದು, ಅಲ್ಲಿ ಪ್ರತಿ ಲಕ್ಷ ಜನರಿಗೆ ಕೇವಲ 81 ಪೊಲೀಸರು ಇದ್ದಾರೆ ಎಂದು ವರದಿ ಹೇಳಿದೆ.

ಇನ್ನು ಕಳೆದೊಂದು ದಶಕದಲ್ಲಿ, ಜೈಲಿನಲ್ಲಿ ಕೈದಿಗಳ ಸಂಖ್ಯೆಯಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ತನಿಖೆ ಅಥವಾ ವಿಚಾರಣೆ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿರುವ ವಿಚಾರಣಾಧೀನ ಕೈದಿಗಳ ಪ್ರಮಾಣವು ಶೇ.66ರಿಂದ ಶೇ.76ಕ್ಕೆ ಏರಿಕೆ ಆಗಿದೆ ಎಂದು ವರದಿ ಹೇಳಿದೆ.