ಕರ್ನಾಟಕ ಶಾಂತಿಯ ತೋಟ, ಭಾವೈಕ್ಯತೆ ಬೀಡು: ಸಚಿವ ಜಮೀರ್ ಅಹ್ಮದ್ ಖಾನ್

| Published : Nov 02 2024, 01:22 AM IST

ಸಾರಾಂಶ

ಬಡ ಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ.

ಹೊಸಪೇಟೆ: ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲ ಸಮಾಜದವರು ಭಾವೈಕ್ಯದಿಂದ ಬಾಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದ ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಚುನಾವಣೆ ವೇಳೆಯಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅದರಂತೆ ಐದು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿ ಅನುಷ್ಠಾನ ಮಾಡಲಾಗಿದೆ. ನಾವು ಆರನೇ ಗ್ಯಾರಂಟಿ ಘೋಷಣೆ ಮಾಡಿಲ್ಲ. ಆದರೆ ಅದು ಬಡ ಜನರ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಮನೆಗಳನ್ನು ನೀಡುವ ಚಿಂತನೆ ಮಾಡಲಾಗಿದೆ. ಸ್ಲಂ ಬೋರ್ಡ್ ನಿಂದ 1,80,253 ಮನೆಗಳು ಮತ್ತು ರಾಜೀವ್‌ ಗಾಂಧಿ ವಸತಿ ನಿಗಮದಿಂದ 47,860 ಮನೆಗಳು ಸೇರಿ 2,030,900 ಮನೆಗಳನ್ನು ಈ ಹಿಂದಿನ ನಮ್ಮ ಸರ್ಕಾರದಲ್ಲಿ ಮಂಜೂರು ಮಾಡಲಾಗಿತ್ತು. ಇವುಗಳು ಕಾರಣಾಂತರದಿಂದ ಹಂಚಿಕೆಯಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಂಜೂರು ಮಾಡಲಾಗುತ್ತದೆ ಎಂದರು.

ವಸತಿ ರಹಿತರ ಸಮಸ್ಯೆಗಳಿಗೆ ಸ್ಪಂದಿಸಿ ಕಳೆದ ಫೆಬ್ರವರಿಯಲ್ಲಿ 36799 ಮನೆಗಳನ್ನು ನೀಡಿ ಇದಕ್ಕಾಗಿ ₹500 ಕೋಟಿ ಬಿಡುಗಡೆ ಮಾಡಲಾಗಿತ್ತು. ಬರುವ ಒಂದು ತಿಂಗಳಲ್ಲಿ ಮತ್ತೆ 38000 ಮನೆಗಳನ್ನು ನೀಡುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲಗಳಾಗಿದ್ದು ಯಾವುದೇ ಕಾರಣಕ್ಕೂ ಯೋಜನೆಗಳು ಸ್ಥಗಿತವಾಗುವುದಿಲ್ಲ. ಈ ಯೋಜನೆಗಳಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದ್ದು ಆರ್ಥಿಕ ಮಟ್ಟ ಸುಧಾರಣೆಯಾಗಿದೆ ಎಂದರು.

ಕರ್ನಾಟಕ ರಾಜ್ಯೋತ್ಸವದ ನಿಮಿತ್ತವಾಗಿ ವಿಜಯನಗರ ಜಿಲ್ಲೆಯಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಎಚ್.ಎಂ.ಶಂಕರಯ್ಯ ಕೋಗಳಿ, ಹಗರಿಬೊಮ್ಮನಹಳ್ಳಿ ತಾಲೂಕು (ಸಂಗೀತ), ಎಚ್.ನಾಗರಾಜ, ಬಾಗಳಿ ಗ್ರಾಮ, ಹರಪನಹಳ್ಳಿ ತಾಲೂಕು (ರಂಗಭೂಮಿ), ಶೇಖರಪ್ಪ ಕಿನ್ನೂರಿ ಜಂಬುನಾಥನಹಳ್ಳಿ, ಹೊಸಪೇಟೆ ತಾಲೂಕು (ಸುಡುಗಾಡು ಸಿದ್ದರು, ಜಾನಪದ), ಬಣಗಾರ ಮೂಗಪ್ಪ, ಹಿರೇಹೆಗ್ಡಾಳ್, ಕೂಡ್ಲಿಗಿ ತಾಲೂಕು (ರಂಗಭೂಮಿ), ಕೆ.ರಾಮು, ಕಡ್ಡಿರಾಂಪುರ ಗ್ರಾಮ, ಹೊಸಪೇಟೆ ತಾಲೂಕು (ಹಗಲುವೇಷ), ಇಟ್ಟಂಗಿ ರೆಹಮಾನ್ ಸಾಬ್ ಹೊಸಪೇಟೆ (ಸಾಹಿತ್ಯ), ಸ್ಫೂರ್ತಿ ವೇದಿಕೆ ಹೊಸಪೇಟೆ (ಸಂಘ-ಸಂಸ್ಥೆ), ಶ್ರೀಬಾಲಕೋಟೇಶ್ವರರಾವ್ ಅಡವಿ ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ತಾಲೂಕು (ಪ್ರಗತಿಪರ ರೈತ), ಡಾ.ಮಹೇಶ್ವರ ಸ್ವಾಮೀಜಿ, ನಂದಿಪುರ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲೂಕು (ಪ್ರಗತಿಪರ ರೈತ), ಆರ್.ಮಲ್ಲಿಕಾರ್ಜುನ ದೂಪದಹಳ್ಳಿ ಗ್ರಾಮ ಕೊಟ್ಟೂರು ತಾಲೂಕು (ಪ್ರಗತಿಪರ ರೈತ), ಡಾ.ರವಿಕುಮಾರ ಕೆ.ಎಂ. ವಾತ್ಸಲ್ಯ ಟ್ರಸ್ಟ್, ಅನಂತಶಯನಗುಡಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಪೇದೆ, ಗೃಹ ರಕ್ಷಕದಳ, ಎನ್‍ಸಿಸಿ, ಸೇವಾದಳ, ಪೌರ ಕಾರ್ಮಿಕರ ತಂಡದಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಕನ್ನಡದ ಮೊಟ್ಟ ಮೊದಲ ಶಿಲಾ ಶಾಸನವಾದ ಹಲ್ಮಿಡಿ ಶಾಸನದ ಸ್ಮಾರಕ ಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಲೋಕಾರ್ಪಣೆಗೊಳಿಸಿದರು.

ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಅಕ್ರಮ್‌ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.