ತಂದೆ-ತಾಯಿಗಳ ಪರಿಶ್ರಮಕ್ಕೆ ಪ್ರತಿಫಲ ಸಿಗಬೇಕೆಂಬ ನಿಟ್ಟಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ತಂದೆ-ತಾಯಿಗಳ ಪರಿಶ್ರಮಕ್ಕೆ ಪ್ರತಿಫಲ ಸಿಗಬೇಕೆಂಬ ನಿಟ್ಟಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿಸಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.ಚಿಕ್ಕಜಾಜೂರು ಗ್ರಾಮದಲ್ಲಿ ಆಂಜನೇಯಸ್ವಾಮಿ ಮೂಲ ಉತ್ಸವ ಮೂರ್ತಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ನಂತರ ನೂತನವಾಗಿ ನಿರ್ಮಿಸಿರುವ ಸಿಸಿ. ರಸ್ತೆ ಉದ್ಘಾಟಿಸಿ ಬಳಿಕ ಚಿಕ್ಕಜಾಜೂರು ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಅನುದಾನದಲ್ಲಿ ಒಂದು ಬಸ್ ವಿತರಿಸಿ ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಲ್.ಕೆ.ಜಿ.ಯಿಂದ ಹಿಡಿದು ದ್ವಿತೀಯ ಪಿ.ಯು.ಸಿ.ವರೆಗೆ ಆಂಗ್ಲ ಮಾಧ್ಯಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು. ಇದರಿಂದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ. ಪ್ರತಿನಿತ್ಯವು ಮಕ್ಕಳನ್ನು ಬಸ್‍ನಲ್ಲಿ ಕರೆ ತಂದು ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ಹಾಗೂ ಸಂಜೆ ಪೌಷ್ಟಿಕಾಂಶವುಳ್ಳ ಕಾಳುಗಳನ್ನು ನೀಡಿ ಗುಣಮಟ್ಟದ ಶಿಕ್ಷಣ ಕೊಟ್ಟು ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಮನೆಗೆ ತಲುಪಿಸಲಾಗುವುದು. ಭಾರತದಲ್ಲಿ ಯಾವ ಶಾಸಕರು ಸರ್ಕಾರಿ ಶಾಲೆಗೆ ಉಚಿತವಾಗಿ ಬಸ್‍ಗಳನ್ನು ಕೊಟ್ಟಿಲ್ಲ ಎಂದು ತಿಳಿಸಿದರು.ಹತ್ತು ಕೋಟಿ ರು.ಗಳನ್ನು ಶಾಲೆಗೆ ಮಂಜೂರು ಮಾಡಿದ್ದೇನೆ. ಇನ್ನು ಎರಡು ಶಾಲೆಗಳನ್ನು ಕೊಡುತ್ತೇನೆ. 32 ವರ್ಷಗಳ ಹಿಂದೆ ನಾನು ಶಾಸಕನಾದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿತ್ತು. ಆಗ ನಾವುಗಳು ಶೇ.50 ರಷ್ಟು ಶಿಕ್ಷಕಿಯರನ್ನು ನೇಮಕ ಮಾಡಬೇಕೆಂಬ ತೀರ್ಮಾನ ಕೈಗೊಂಡೆವು. ಬಿ.ದುರ್ಗ, ಹಿರೆಕಂದವಾಡಿ ಸೇರಿದಂತೆ ತಾಲೂಕಿನ ಹದಿಮೂರು ಕಡೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮಂಜೂರು ಮಾಡಿದ್ದೇನೆ ಎಂದರು.
ನೌಕರರಿಗೆ ಸಂಬಳ ಕೊಡಲು ಸರ್ಕಾರದಲ್ಲಿ ಹಣವಿಲ್ಲ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರು. ಖರ್ಚು ಮಾಡಿದ್ದೇನೆ. ಚಿಕ್ಕಜಾಜೂರಿನ ಕೋಟೆಹಾಳ್ ಬಳಿ ಹದಿಮೂರುವರೆ ಎಕರೆ ಪ್ರದೇಶದಲ್ಲಿ ಐದು ನೂರು ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ಕಟ್ಟಲಾಗುತ್ತದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್, ಡಿ.ಸಿ.ಮೋಹನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್, ಬಸವರಾಜ್, ಜಮೀರ್‍ಭಾಷಾ, ಆನಂದಪ್ಪ, ಪ್ರಶಾಂತ್, ಜಯಣ್ಣ, ಶಿವಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀಕಾಂತ್, ಲಕ್ಷ್ಮಿ, ಗಂಗಮ್ಮ, ಪರ್ವಿನ್, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು ಹಾಜರಿದ್ದರು.