ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದ.ಕ. ಜಿಲ್ಲೆಯ ಮೂರು ಮಂದಿ ಸಾಧಕರಿಗೆ ಲಭಿಸಿದೆ.
ಮಂಗಳೂರು ; ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದ.ಕ. ಜಿಲ್ಲೆಯ ಮೂರು ಮಂದಿ ಸಾಧಕರಿಗೆ ಲಭಿಸಿದೆ.
ಹಿರಿಯ ಸಾಹಿತಿ ಡಾ.ಇಂದಿರಾ ಹೆಗ್ಡೆ, ಹಿರಿಯ ಛಾಯಾಚಿತ್ರಗ್ರಾಹಕ ವಿಶ್ವನಾಥ ಸುವರ್ಣ ಹಾಗೂ ಸಮಾಜ ಸೇವಾ ವಿಭಾಗದಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮುಖಂಡ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಅವರಿಗೆ ಪ್ರಕಟಿಸಲಾಗಿದೆ. ನ. 1 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕಲ್ಕೂರ ಸಂತಸ:ಹಿರಿಯ ಸಾಮಾಜಿಕ ಧುರೀಣ, ಕರ್ಣಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಹಿರಿಯ ಲೇಖಕಿ ಡಾ. ಇಂದಿರಾ ಹೆಗ್ಡೆ ಹಾಗೂ ಮಾಧ್ಯಮ ಛಾಯಾಗ್ರಾಹಕರಾಗಿ ಹೆಸರುವಾಸಿಯಾಗಿರುವ ವಿಶ್ವನಾಥ ಸುವರ್ಣ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿರುವುದು ಸ್ವಾಗತಾರ್ಹ ಮತ್ತು ಕರಾವಳಿಯ ಜನ ಸಂಭ್ರಮ ಪಡುವ ಸಂಗತಿಯಾಗಿದೆ ಎಂದು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಯಾಮೆರಾದಲ್ಲಿ ಇತಿಹಾಸ ದಾಖಲಿಸಿದ ವಿಶ್ವನಾಥ್ ಸುವರ್ಣಪತ್ರಿಕಾ ಛಾಯಾಗ್ರಹಣವೆಂದರೆ ಕೇವಲ ಘಟನೆಗಳನ್ನು ಸೆರೆಹಿಡಿಯುವ ಕಲೆ ಮಾತ್ರವಲ್ಲ, ಕಾಲಘಟ್ಟದ ಮಹತ್ವದ ಕ್ಷಣಗಳನ್ನು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಿಸುವ ಜವಾಬ್ದಾರಿಯೂ ಹೌದು. ಈ ಜವಾಬ್ದಾರಿಯನ್ನು ಸುಮಾರು ನಾಲ್ಕೂವರೆ ದಶಕಗಳ ಕಾಲ ನಿರ್ಭೀತಿಯಿಂದ ನಿರ್ವಹಿಸಿದವರು ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್ ಸುವರ್ಣ.ಮಂಗಳೂರಿನ ಬಲ್ಲಾಳ್ಬಾಗ್ ಮೂಲದ ವಿಶ್ವನಾಥ್ ಸುವರ್ಣ ಅವರು 1955ರ ಮಾರ್ಚ್ 31ರಂದು ಜನಿಸಿದರು. ಬಾಲ್ಯದಿಂದಲೇ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಸಹೋದರ ದಿವಂಗತ ಸುಂದರನಾಥ ಸುವರ್ಣ ಅವರ ಪ್ರೋತ್ಸಾಹ ಮತ್ತು ಸಹಕಾರದಿಂದ ಬೆಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದರು. ಸೀಮಿತ ಶೈಕ್ಷಣಿಕ ಅವಕಾಶಗಳ ನಡುವೆಯೂ ಸ್ವಂತ ಆಸಕ್ತಿ, ಪರಿಶ್ರಮ, ಅನುಭವ ಮತ್ತು ನಿರಂತರ ಕಲಿಕೆಯ ಮೂಲಕ ಪತ್ರಿಕಾ ಛಾಯಾಗ್ರಹಣ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದರು.ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕಾ ಸಂಸ್ಥೆಗಳಲ್ಲಿ ಸುಮಾರು 45 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಅವರು, ಮುಖ್ಯ ಛಾಯಾಗ್ರಾಹಕರಾಗಿ ನಿವೃತ್ತರಾದರು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾರ್ವಜನಿಕ ಜೀವನದ ಅಸಂಖ್ಯಾತ ಮಹತ್ವದ ಘಟನೆಗಳಿಗೆ ತಮ್ಮ ಕ್ಯಾಮೆರಾದ ಮೂಲಕ ಸಾಕ್ಷಿಯಾದರು. ಗಲಭೆ, ಸಂಘರ್ಷ ಮತ್ತು ಸವಾಲಿನ ಸನ್ನಿವೇಶಗಳಲ್ಲಿಯೂ ಧೈರ್ಯದಿಂದ ಕಾರ್ಯನಿರ್ವಹಿಸಿ ವೃತ್ತಿಪರ ಬದ್ಧತೆಯನ್ನು ಮೆರೆದರು.116 ಕೋಟೆಗಳ ಸಾಹಸಮಯ ದಾಖಲೀಕರಣ:
ವಿಶ್ವನಾಥ್ ಸುವರ್ಣ ಅವರ ವೃತ್ತಿಜೀವನದ ಅತ್ಯಂತ ಗಮನಾರ್ಹ ಸಾಧನೆ ಕರ್ನಾಟಕದ ಐತಿಹಾಸಿಕ ಕೋಟೆಗಳ ಛಾಯಾಚಿತ್ರ ದಾಖಲೀಕರಣ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿಕೊಂಡಿರುವ 116 ಕೋಟೆ, ಕೋಟೆಕೊತ್ತಲು ಮತ್ತು ಐತಿಹಾಸಿಕ ರಕ್ಷಣಾ ಸ್ಮಾರಕಗಳನ್ನು ಹುಡುಕಿಕೊಂಡು ಸುಮಾರು 18 ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಂಡರು. ದುರ್ಗಮ ಪ್ರದೇಶಗಳನ್ನೂ ತಲುಪಿ ಕೋಟೆಗಳ ವಾಸ್ತುಶಿಲ್ಪ, ಐತಿಹಾಸಿಕ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು.ಈ ಯೋಜನೆಗೆ ಸುಮಾರು ಎಂಟು ಲಕ್ಷ ರು. ವೆಚ್ಚ ಮಾಡಿದ್ದು, 600ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಒಳಗೊಂಡ ಆಕರ್ಷಕ ಕಾಫಿ ಟೇಬಲ್ ಪುಸ್ತಕ ರೂಪಿಸಿದರು. ‘ಕರುನಾಡಿನ ಕೋಟೆಗಳು’ ಕೃತಿಯ ಕನ್ನಡ ಆವೃತ್ತಿ 2017ರಲ್ಲಿ ಹಾಗೂ ಇಂಗ್ಲಿಷ್ ಆವೃತ್ತಿ 2020ರಲ್ಲಿ ಪ್ರಕಟವಾಯಿತು. ಕಲಬುರಗಿ, ಬೀದರ್, ವಿಜಯಪುರ, ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕೋಟೆಗಳ ವೈಭವವನ್ನು ಈ ಕೃತಿ ಪರಿಚಯಿಸುತ್ತದೆ.
ಪಕ್ಷಿ ಪ್ರಪಂಚದ ಬಣ್ಣದ ಲೋಕ:ಇತಿಹಾಸದ ಕೋಟೆಗಳಷ್ಟೇ ಅಲ್ಲದೆ ನಿಸರ್ಗದ ಸೌಂದರ್ಯವೂ ಅವರ ಕ್ಯಾಮೆರಾದಲ್ಲಿ ಅರಳಿದೆ. ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಕೃತಿಯ ಮೂಲಕ ಕರ್ನಾಟಕದ ಪಕ್ಷಿ ಪ್ರಪಂಚದ ವೈವಿಧ್ಯತೆ, ಬಣ್ಣ ಮತ್ತು ಸೌಂದರ್ಯವನ್ನು ದಾಖಲಿಸಿದ್ದಾರೆ. ಇದರ ಜತೆಗೆ ‘Ports of Karnataka’ ಕೃತಿಯನ್ನೂ ಪ್ರಕಟಿಸಿದ್ದಾರೆ.
2019ರ ಮಂಗಳೂರು ಲಿಟ್ ಫೆಸ್ಟ್ನ ಎರಡನೇ ಆವೃತ್ತಿಯಲ್ಲಿ ಅವರ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆದಿತ್ತು. 2024ರ ಅಕ್ಟೋಬರ್ 26ರಂದು ಮಂಗಳೂರಿನ INTACH ಘಟಕ ಆಯೋಜಿಸಿದ್ದ Photographing Historical Monuments ಕಾರ್ಯಕ್ರಮದಲ್ಲಿ ಕರ್ನಾಟಕದ ಕೋಟೆಗಳು ಮತ್ತು ಐತಿಹಾಸಿಕ ಸ್ಮಾರಕಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಿ ಅವುಗಳ ಮಹತ್ವ ಹಾಗೂ ಸಂರಕ್ಷಣೆಯ ಅಗತ್ಯದ ಕುರಿತು ಉಪನ್ಯಾಸ ನೀಡಿದ್ದರು.2024ರಲ್ಲಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರಿಗೆ ‘ಸುವರ್ಣ ಮಹೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ದೇವಾಲಯ ಕಲಾ ಪರಂಪರೆಯ ದಾಖಲೀಕರಣದ ಕನಸು: ಕೋಟೆಗಳು ಮತ್ತು ಪಕ್ಷಿಗಳ ಛಾಯಾಚಿತ್ರ ದಾಖಲೀಕರಣದ ಬಳಿಕ ಕರ್ನಾಟಕದ ದೇವಾಲಯಗಳ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ವೈಭವವನ್ನು ದಾಖಲಿಸುವ ಕನಸನ್ನೂ ಅವರು ಹೊಂದಿದ್ದರು. Temple Arts of Karnataka ಎಂಬ ಮುಂದಿನ ಪುಸ್ತಕ ಯೋಜನೆಯ ಮೂಲಕ ನಾಡಿನ ದೇವಾಲಯ ಪರಂಪರೆಯನ್ನು ದೃಶ್ಯರೂಪದಲ್ಲಿ ಉಳಿಸುವ ಆಶಯ ಅವರದ್ದಾಗಿದೆ.ನಾನು ಅರ್ಜಿ ಸಲ್ಲಿಸಿರಲಿಲ್ಲ, ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ತಿಳಿಸಿದಾಗ ತುಂಬ ಸಂತಸವಾಯಿತು. ನಾನು ಪ್ರಶಸ್ತಿಯ ನಿರೀಕ್ಷೆಯಲ್ಲೂ ಇರಲಿಲ್ಲ. ಈಗ ನಿವೃತ್ತನಾದರೂ ಛಾಯಾಗ್ರಾಹಕ ಪ್ರವೃತ್ತಿಯನ್ನು ಮುಂದುವರಿಸುತ್ತಿದ್ದೇನೆ.
-ವಿಶ್ವನಾಥ ಸುವರ್ಣತುಳು ಭಾಷೆ, ಸಂಸ್ಕೃತಿಯ ಸಂಶೋಧನೆಗೆ ಡಾ.ಇಂದಿರಾ ಹೆಗ್ಡೆಗೆ ಗೌರವ
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಮೂಲದ ಡಾ. ಇಂದಿರಾ ಹೆಗ್ಡೆ ಅವರು 1949ರಲ್ಲಿ ಕಿನ್ನಿಗೋಳಿಯ ಎಳತ್ತೂರು ಗುತ್ತುವಿನಲ್ಲಿ ಜನಿಸಿದರು. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ಕೃಷಿ ನಡೆಸಿರುವ ಅವರು, ವಿಶೇಷವಾಗಿ ತುಳುನಾಡಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ದಾಖಲಿಸುವ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯ ಕೃತಿಗಳನ್ನು ರಚಿಸಿರುವ ಅವರು ಮೂರು ಕಥಾಸಂಕಲನಗಳು, ಐದು ಕಾದಂಬರಿಗಳು, ಏಳು ಸಂಶೋಧನಾ ಕೃತಿಗಳು, ಒಂದು ಕವನ ಸಂಕಲನ, ಎರಡು ಜೀವನಚರಿತ್ರೆಗಳು ಹಾಗೂ ಮೂರು ಪ್ರವಾಸ ಕಥನಗಳನ್ನು ಪ್ರಕಟಿಸಿದ್ದಾರೆ. ಸೃಜನಶೀಲ ಸಾಹಿತ್ಯದ ಜತೆಗೆ ಸಂಶೋಧನಾ ಬರವಣಿಗೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಬಂಟರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ, ತುಳುನಾಡಿನ ಮಾತೃವಂಶೀಯ ಕುಟುಂಬ ಪದ್ಧತಿ, ಗರೋಡಿ ಸಂಪ್ರದಾಯ, ಮಹಿಳೆಯರ ಸಾಮಾಜಿಕ ಸ್ಥಾನಮಾನ ಹಾಗೂ ತುಳುನಾಡಿನ ಇತಿಹಾಸ ಅವರ ಸಂಶೋಧನೆಯ ಪ್ರಮುಖ ವಿಷಯಗಳಾಗಿವೆ. ವಿಶೇಷವಾಗಿ ತುಳುನಾಡಿನ ಮಾತೃವಂಶೀಯ ವ್ಯವಸ್ಥೆ ಮತ್ತು ಮಹಿಳೆಯರ ಸ್ಥಾನಮಾನದ ಕುರಿತು ನಡೆಸಿರುವ ಅಧ್ಯಯನಗಳು ಗಮನಾರ್ಹವಾಗಿವೆ. ಸ್ಥಳೀಯ ಪರಂಪರೆ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಕೇವಲ ದಾಖಲಿಸುವುದಕ್ಕೆ ಸೀಮಿತವಾಗದೆ, ಅವುಗಳ ಹಿನ್ನೆಲೆ ಹಾಗೂ ಬದಲಾವಣೆಗಳನ್ನು ಸಂಶೋಧನಾತ್ಮಕವಾಗಿ ಪರಿಚಯಿಸಿರುವುದು ಅವರ ಸಾಹಿತ್ಯಿಕ ಸಾಧನೆಯ ವಿಶೇಷತೆಯಾಗಿದೆ.ಅವರ ಸಾಹಿತ್ಯ ಮತ್ತು ಸಂಶೋಧನಾ ಸೇವೆಗೆ ಈಗಾಗಲೇ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.ತುಳುನಾಡಿನ ಭಾಷೆ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಡಾ. ಇಂದಿರಾ ಹೆಗ್ಡೆ ಅವರಿಗೆ ರಾಜ್ಯದ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ತುಳು ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಸಂದ ಗೌರವವಾಗಿದೆ.ನನಗೆ ತುಂಬ ಖುಷಿ ಆಗಿದೆ. ನನ್ನ ಸಾಧನೆಗೆ ಸಂದ ಗೌರವ ಇದು. ನನ್ನ ಸಂಶೋಧನಾ ಶ್ರಮವನ್ನು ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಿದೆ. ಇದರಿಂದ ನನ್ನ ಜವಾಬ್ದಾರಿಯೂ ಹೆಚ್ಚಿದೆ.
-ಡಾ.ಇಂದಿರಾ ಹೆಗ್ಡೆ