ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಜನ ಹಿಂದೇಟು ಹಾಕುವ ದುಸ್ಥಿತಿ ಬಂದಿದೆ. ನೆಪಕ್ಕೆ ಮಾತ್ರ ರಾಜ್ಯೋತ್ಸವದ ದಿನದಂದು ಸಮಾಗಮವಾಗಿ ಅನಗತ್ಯ ಕಾಲಹರಣ ಮಾಡುವ, ಕನ್ನಡದ ಕುರಿತು ಗಂಧ-ಗಾಳಿ ಅರಿವಿಲ್ಲದ ಜನರನ್ನು ನೋಡಿ ಬೇಸರವಾಗುತ್ತದೆ.

ಧಾರವಾಡ:

ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಜನ ಹಿಂದೇಟು ಹಾಕುವ ದುಸ್ಥಿತಿ ಬಂದಿದೆ. ನೆಪಕ್ಕೆ ಮಾತ್ರ ರಾಜ್ಯೋತ್ಸವದ ದಿನದಂದು ಸಮಾಗಮವಾಗಿ ಅನಗತ್ಯ ಕಾಲಹರಣ ಮಾಡುವ, ಕನ್ನಡದ ಕುರಿತು ಗಂಧ-ಗಾಳಿ ಅರಿವಿಲ್ಲದ ಜನರನ್ನು ನೋಡಿ ಬೇಸರವಾಗುತ್ತದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ಯುವಪೀಳಿಗೆ ಅನ್ನ, ನೀರು, ಸೂರು, ಬಟ್ಟೆ ಇತ್ಯಾದಿ ಕನ್ನಡದಿಂದಲೇ ಪಡೆದುಕೊಂಡು ರಾಜ್ಯಕ್ಕೆ ಮತ್ತು ದೇಶಕ್ಕೆ ಋಣ ಸಂದಾಯ ಮಾಡುವಲ್ಲಿ ವಿಮುಖರಾಗುತ್ತಿದ್ದಾರೆ. ಕನ್ನಡ, ನಾಡು, ನುಡಿ, ಸಂಸ್ಕೃತಿ ಸೇರಿ ಎಲ್ಲ ಪರಂಪರೆ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳು ಗರಿಗೆದರಿವೆ. ವಿಶೇಷವಾಗಿ ರಂಗಭೂಮಿ ಕಲಾವಿದರಿಗೆ ಅನುಕೂಲಕ್ಕೆ ತಕ್ಕಂತೆ ನಾಟಕಗಳನ್ನು ಆಯೋಜಿಸಿ ಸಮಾಜದ ಸಾಮರಸ್ಯ ಮನೋಭಾವನೆ ಹೆಚ್ಚಿಸುವಲ್ಲಿ ನಿಷ್ಣಾತವಾಗಿದೆ ಎಂದರು.

ಕ್ಲಿಷ್ಟಕರ ದಿನಮಾನಗಳಲ್ಲಿ ತಂತ್ರಜ್ಞಾನದ ಕೊಡುಗೆಯಿಂದಾಗಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳು ಯಚ್ಛೇತ್ತವಾಗಿ ಬಳಕೆಯಾಗುತ್ತಿದೆ. ಎಚ್ಚರ ವಹಿಸಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಗತ್ಯವಿದ್ದರೆ ಮಾತ್ರ ಬಳಸುವಂತಾಗಬೇಕು ಎಂದು ಹೇಳಿದರು.

ಜಾನಪದ ಕಲಾವಿದ ದೇಗಾವಿ ಗ್ರಾಮದ ಶಿವಪುತ್ರ ವಸ್ತ್ರದ ಅವರಿಗೆ ರಂಗಕಲಾ ಸನ್ಮಾನ ಮಾಡಿ ಗೌರವಿಸಲಾಯಿತು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರೊ. ಧನವಂತ ಹಾಜವಗೋಳ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು. ಭಿನ್ನವತ್ತಳೆ ಫಲಕ ವಾಚನವನ್ನು ಗುರು ಹಿರೇಮಠ ಮಾಡಿದರು. ನಂತರ ಸಮೀರ್‌ ಸೂರ್ಯಕಾಂತ ಪೆಣ್ಕರ್‌ ರಚನೆಯ, ಜಯಶ್ರೀ ಇಡ್ಕಿದು ಕನ್ನಡ ಅನುವಾದದ, ವಿದ್ದು ಉಚ್ಚಿಲ್ ನಿರ್ದೇಶನದ ‘ಈದಿ’ ನಾಟಕವನ್ನು ಉಡುಪಿಯ ಸುಮನಸಾ ಕೊಡವೂರು ಕಲಾಬಳಗದವರು ಪ್ರಸ್ತುತಪಡಿಸಿದರು.