ಭಾರತ ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಏಪ್ರೀಲ್‌ 15ರ ವರೆಗೆ ಗಡುವು ನೀಡುತ್ತಿದ್ದು, ಕನ್ನಡಿಗರ ಬೇಡಿಕೆಗೆ ಕಿವಿಗೊಡದಿದ್ದರೆ ಕರ್ನಾಟಕದಲ್ಲಿ ರೈಲು ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ: ಭಾರತ ರೈಲ್ವೆ ಇಲಾಖೆ ಕರ್ನಾಟಕವನ್ನು ಮಲತಾಯಿ ಧೋರಣೆಯಿಂದ ನೋಡುತ್ತಿದೆ. ಏಪ್ರೀಲ್‌ 15ರ ವರೆಗೆ ಗಡುವು ನೀಡುತ್ತಿದ್ದು, ಕನ್ನಡಿಗರ ಬೇಡಿಕೆಗೆ ಕಿವಿಗೊಡದಿದ್ದರೆ ಕರ್ನಾಟಕದಲ್ಲಿ ರೈಲು ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವುದಾಗಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆ ಮೂಲಕ ಈ ಎಚ್ಚರಿಕೆ ನೀಡಿರುವ ಅವರು, ರೈಲ್ವೆ ಪದೋನ್ನತಿ ಹುದ್ದೆಗಳ ಪರೀಕ್ಷೆ ಸಂದರ್ಭದಲ್ಲಿ ಕನ್ನಡ ಕೈಬಿಟ್ಟು ರೈಲ್ವೆ ಅಧಿಕಾರಿಗಳು ಕರ್ನಾಟಕದಲ್ಲಿ ಏನನ್ನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುತ್ತೇವೆ ಎಂಬಂತೆ ವರ್ತಿಸಿದರು. ಕರವೇ ಕಾರ್ಯಕರ್ತರು ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡಿದೆ. ಆದರೆ, ರೈಲ್ವೆ ಇಲಾಖೆಯಿಂದ ಆಗುತ್ತಿರುವ ಎಲ್ಲ ಅನ್ಯಾಯಗಳ ಕುರಿತು ನಾವು ಧ್ವನಿ ಎತ್ತಬೇಕಿದೆ. ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಎಂದು ಕೇಳಬೇಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ರೈಲ್ವೆಯಿಂದ ಕನ್ನಡಿಗರಿಗೆ ಆಗಿರುವ ವಂಚನೆಗಳ ಸರಮಾಲೆಯನ್ನು ಸಾರ್ವಜನಿಕರ ಮುಂದೆ ತೆರೆದು ಇಡಬೇಕಿದೆ. ಈ ದ್ರೋಹ ಈಗಲಾದರೂ ಕೊನೆಗೊಳ್ಳಬೇಕಿದೆ.

ಮುಖ್ಯ ಬೇಡಿಕೆಗಳು

ರೈಲ್ವೆ ಇಲಾಖೆಯ ಕರ್ನಾಟಕ ಭಾಗದ ಎಲ್ಲ ಹಂತದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕು. ಇಲಾಖೆಯ ಎಲ್ಲ ಹಂತದ ಹುದ್ದೆಗಳ ಪರೀಕ್ಷೆಗಳು ಕಡ್ಡಾಯವಾಗಿ ಕನ್ನಡದಲ್ಲೂ ನಡೆಯಬೇಕು. ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ರೈಲು ಯೋಜನೆಗಳು ಆದಷ್ಟು ಬೇಗ ಜಾರಿಯಾಗಬೇಕು. ರಾಜ್ಯದ ಎಲ್ಲ ರೈಲು ನಿಲ್ದಾಣ, ರೈಲ್ವೆ ಕಚೇರಿಗಳಲ್ಲಿ ಕನ್ನಡೀಕರಣ ಪ್ರಕ್ರಿಯೆ ನಡೆಯಬೇಕು. ನಾಮಫಲಕಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು. ಕನ್ನಡ ಭಾಷೆಯಲ್ಲಿ ಸಂವಹನ ನಡೆಯಬೇಕು. ಎಲ್ಲ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಕರ್ಯ ಹೆಚ್ಚಿಸಬೇಕು.

ಈ ಬೇಡಿಕೆ ಈಡೇರಿಸುವ ಬದ್ಧತೆಯನ್ನು ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಪ್ರದರ್ಶಿಸಬೇಕು. ಜನತೆಗೆ ತನ್ನ ವಾಗ್ದಾನ ನೀಡಬೇಕು. ಇದಕ್ಕಾಗಿ ಕರವೇ ರೈಲ್ವೆ ಇಲಾಖೆಗೆ ಏ.15ರ ವರೆಗೆ ಗಡುವು ನೀಡುತ್ತಿದೆ. ಒಂದು ವೇಳೆ ನಮ್ಮ ಬೇಡಿಕೆಗಳ ಕುರಿತು ಅವರು ತಾತ್ಸಾರ ತೋರಿದರೆ, ಪ್ರತಿಕ್ರಿಯೆ ನೀಡದಿದ್ದರೆ ಇಡೀ ಕರ್ನಾಟಕದ ಎಲ್ಲ ಸ್ವರೂಪದ ರೈಲುಗಳನ್ನು, ರೈಲು ನಿಲ್ದಾಣಗಳನ್ನು ಬಂದ್‌ ಮಾಡಿ ರೈಲು ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಕೇಂದ್ರ ಸರ್ಕಾರ ನಮ್ಮ ಅಹವಾಲುಗಳಿಗೆ ಕಿವಿ ತೆರೆಯುವ ಭರವಸೆಯಿದೆ ಎಂದು ತಿಳಿಸಿದ್ದಾರೆ.