ಸಾರಾಂಶ
ನಾಗಮಂಗಲ : ಕೃಷಿ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಅತ್ಯುತ್ತಮ ಸ್ಥಾನದೊಂದಿಗೆ ಮುಂಚೂಣಿಯಲ್ಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬಣ್ಣಿಸಿದರು.
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ 72ನೇ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ವಿಜ್ಞಾತಂ ಉತ್ಸವದ ವಸ್ತು ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಏರೋ ಇಂಡಿಯಾ ಶೋ ಮತ್ತು ಅತ್ಯುತ್ತಮ ತಂತ್ರಜ್ಞಾನದ ಪ್ರದರ್ಶನವಾಗಿದೆ. ಇದರ ಜೊತೆಗೆ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಉದ್ಯಮ ವಲಯಗಳಿಂದ 10 ಲಕ್ಷ ಕೋಟಿ ರು.ಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ. ಬೇರೆ ದೇಶಗಳಿಂದ ಉದ್ಯಮಿಗಳು ಹೊಸ ತಂತ್ರಜ್ಞಾನ ಹಾಗೂ ಸ್ಥಳೀಯ ಮಾನವ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಂಡು ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ನಾವು ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸುತ್ತಿದ್ದೇವೆ ಎಂದರು.
ಇಷ್ಟೆಲ್ಲಾ ಇದ್ದರೂ ಕೂಡ ಮನುಷ್ಯನಿಗೆ ಸಿಗಬೇಕಾದ ಆರೋಗ್ಯ, ಮಾನಸಿಕ ನೆಮ್ಮದಿ ಇದೆಯೇ ಎಂಬುದನ್ನು ಬುದ್ಧಿ ಜೀವಿಗಳಾದ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಎಲ್ಲವೂ ಸಮೃದ್ಧಿಯಾಗಿದ್ದರೂ ಸಹ ಸರಿಯಾಗಿ ನಿದ್ರೆ ಬಾರದಿದ್ದರೆ ಪ್ರಯೋಜನವಿಲ್ಲ. ಎಲ್ಲಾ ರೀತಿಯ ಸವಲತ್ತುಗಳಿದ್ದರೂ ಕೂಡ ಬಿಪಿ, ಡಯಾಬಿಟೀಸ್, ಕ್ಯಾನ್ಸರ್‌ನಂತಹ ಸಮಸ್ಯೆಗಳಿದ್ದಾಗ ನಿಜವಾದ ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ ಎಂದರು.
ತಂತ್ರಜ್ಞಾನದ ಜೊತೆಗೆ ನಮ್ಮ ಪಾರಂಪರಿಕ ಪದ್ಧತಿಗಳನ್ನು ಮರುಪರುಶೀಲನೆ ಮಾಡಿ ಯೋಗ, ಆಯುರ್ವೇದ, ಪಾರಂಪರಿಕ ವೈದ್ಯ ಪದ್ಧತಿ ಹೀಗೆ ಹಿಂದಿನ ಪೂರ್ವಜರ ಪದ್ಧತಿಗಳಿಗೆ ಆಧುನಿಕ ಸ್ಪರ್ಷ ನೀಡಿ, ಭೂಮಿ ಮತ್ತು ಪರಿಸರವನ್ನು ಶಾಶ್ವತವಾಗಿ ಉಳಿಸುವ ಕೆಲಸ ಮಾಡುವ ಮೂಲಕ ನಮ್ಮ ರಾಜ್ಯವನ್ನು ಇನ್ನಷ್ಟು ಸಮೃದ್ಧಿಗೊಳಿಸಬೆಕಿದೆ ಎಂದರು.
ನಾವು ಮಾಡುವ ಊಟಕ್ಕೆ ಭತ್ತ ಅತ್ಯಗತ್ಯ. ಭತ್ತವನ್ನು ಬೆಳೆಯಲು ಎಷ್ಟು ನೀರು ಬಳಕೆಯಾಗುತ್ತದೆ. ಅದರಿಂದ ಎಷ್ಟು ಕಾರ್ಬನ್ ಉತ್ಪಾದನೆಯಾಗುತ್ತಿದೆ. ಅದು ಮನುಷ್ಯನ ಜೀವನ ಮತ್ತು ಆರೋಗ್ಯಕ್ಕೆ ಎಷ್ಟು ಕಷ್ಟಪೂರ್ಣವಾಗಿರುತ್ತದೆ. ತಂತ್ರಜ್ಞಾನ ಉಪಯೋಗಿಸಿ ಅದನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತ ಯೋಜನೆಯನ್ನು ರಾಜ್ಯದಲ್ಲಿ ಕೃಷಿ ಸಚಿವರ ನೇತೃತ್ವದಲ್ಲಿ ಆದಿಚುಂಚನಗಿರಿ ಸಂಸ್ಥೆ ಮೂಲಕ ಆಯೋಜಿಸಲಾಗುವುದು ಎಂದರು.
ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಆ ಮಾದರಿಗಳನ್ನು ವಾಣಿಜ್ಯ ಮಟ್ಟಕ್ಕೆ ಕೊಂಡೊಯ್ಯದಿದ್ದರೆ ಅವು ವಸ್ತು ಪ್ರದರ್ಶನದ ಮಳಿಗೆಯಲ್ಲಿಯೇ ಉಳಿಯುತ್ತವೆ. ಹಾಗಾಗಿ ಯುವ ಸಮುದಾಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಬೇಕು ಎಂದರು.
ತುಮಕೂರು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, ಧರ್ಮ ವಿಜ್ಞಾನ ಆಧ್ಯಾತ್ಮದ ಅವಿನಾಭಾವತೆಯು ವಿಶ್ವದ ಅನೇಕ ಆವಿಷ್ಕಾರಗಳಿಗೆ ನಾಂದಿಯಾಗಿದೆ. ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಧನಗಳಾದ ಸದ್ಗುಣ ಸಂಸ್ಕಾರಗಳು ಶಿಕ್ಷಣದ ಗುರಿಯಾಗಬೇಕು ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ ಶಿಕ್ಷಣ ಕ್ರಾಂತಿಯನ್ನೇ ಮಾಡಿರುವ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠವು ದೇಶದ ಮಾದರಿ ಸಂಸ್ಥಾನವಾಗಿದೆ. ಮಹಾನ್ ದಾರ್ಶನಿಕ ಡಾ.ಬಾಲಗಂಗಾಧರನಾಥ ಶ್ರೀಗಳ ಸಂಕಲ್ಪಶಕ್ತಿಯ ಫಲವಾಗಿ ಇಂದು ಶ್ರೀಮಠ ವಿಶ್ವಮಟ್ಟದಲ್ಲಿ ಬೆಳೆದು ನಿಂತಿದೆ. ನಾಡಿನ ಸಮಸ್ತ ವಿದ್ಯಾರ್ಥಿಗಳಿಗೆ ವಿಜ್ಞಾನದ ಆಕಷ್ಣೆ ಹೆಚ್ಚಿಸಿ ಜ್ಞಾನವಂತರನ್ನಾಗಿಸಲು ಇಂತಹ ವಿಜ್ಞಾತಂ ಉತ್ಸವ ಹಾಗೂ ವಸ್ತು ಪ್ರದರ್ಶನದ ಆಯೋಜನೆ ನಿಜಕ್ಕೂ ಅರ್ಥಪೂರ್ಣ ಹಾಗೂ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಭಾರತೀಯ ವಿಜ್ಞಾನ ಸಂಸ್ಥೆ ಖ್ಯಾತ ವಿಜ್ಞಾನಿ ಹಾಗೂ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮೊಮ್ಮಗ ಡಾ.ಗೌತಮ್ ರಾಧಾಕೃಷ್ಣ ದೇಸಿರಾಜು ಮಾತನಾಡಿ, ಧರ್ಮ ಮತ್ತು ವಿಜ್ಞಾನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರ ಭೂಮಿಯನ್ನು ಸುತ್ತುತ್ತದೆ. ಇದು ನೈಸರ್ಗಿಕ ವಿಸ್ಮಯವಾದರೂ ಇಲ್ಲಿ ಧರ್ಮ ಮತ್ತು ವಿಶಿಷ್ಟ ಸಂಬಂಧವೂ ಇದೆ ಎಂದರು.
ಪೂರ್ಣಚಂದ್ರನಿಂದ ಪೌರ್ಣಮಿಯಾಗುವುದು, ಭಾರತೀಯ ಸಂಸ್ಕೃತಿಯಾದ ಸಹಸ್ರನಾಮದ ಮಹತ್ವ, ಸಪ್ತಮಿ ಮತ್ತು ಅಷ್ಟಮಿ ಚಂದ್ರ ಶಾಂತಿಯ ಸಾಗರ ಎಂದು ಬಣ್ಣಿಸಿ, ವಿಜ್ಞಾನವು ಹೇಗೆ ನೋಡುತ್ತದೆ ಎಂಬುದನ್ನು ಸಂಸ್ಕೃತ ಶ್ಲೋಕದ ಮೂಲಕ ತಿಳಿಸಿದರು. ರಾಜಕೀಯ ಕೇವಲ ಸಾಮಾಜಿಕವಲ್ಲದೆ ವೈಜ್ಞಾನಿಕವಾಗಿ ಹೇಗೆ ರೂಪಗೊಳ್ಳುತ್ತದೆ ಎಂಬುದನ್ನು ವಿಸ್ತಾರವಾಗಿ ತಿಳಿಸಿಕೊಟ್ಟರು.