ಸಾರಾಂಶ
ಗುಬ್ಬಿ : ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಸರ್ಕಾರ ತಂದಿರುವುದರಿಂದ ಕರ್ನಾಟಕದಲ್ಲಿ ಪ್ರತಿಯೊಬ್ಬರ ತಲಾದಾಯ ಹೆಚ್ಚಳವಾಗಿ, ಅಭಿವೃದ್ಧಿಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಇರುವುದರಿಂದ ಕೇಂದ್ರ ಸರ್ಕಾರ ಕೊಟ್ಟಿರುವಂತಹ ಅಂಕಿ ಅಂಶಗಳಲ್ಲಿ ಪ್ರಕಾರ ಕಳೆದ ಮೂರು ವರ್ಷಗಳ ಹಿಂದೆ 1.77 ಲಕ್ಷ ತಲಾದಾಯ ಇತ್ತು. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿರುವುದರಿಂದ ಪ್ರಸ್ತುತ 2.04 ಲಕ್ಷ ತಲಾದಾಯ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿರುವುದನ್ನು ಕಾಣಬಹುದು.
ಪ್ರತಿಯೊಬ್ಬ ಭಾರತೀಯರಿಗೂ ಸ್ವಾತಂತ್ರ್ಯ ತಂದುಕೊಟ್ಟವರ ಬಗ್ಗೆ ಗೌರವ ಇರಬೇಕು.ಭಾರತವನ್ನು ಕಟ್ಟುವಂತಹ ಜವಾಬ್ದಾರಿ ಪ್ರತಿಯೊಬ್ಬರ ಭಾರತೀಯ ನಾಗರಿಕರ ಮೇಲಿದೆ. ಬೇರೆ ದೇಶಗಳಿಂದ ಬೆದರಿಕೆಗೆ ಬರುತ್ತಿದ್ದು ಅವುಗಳನ್ನು ಎದುರಿಸಲು ನಾವುಗಳು ಸಂಘಟಿತರಾಗಬೇಕು ಹೋರಾಟ ಮಾಡಬೇಕು ಎಂದರು.ತಹಸೀಲ್ದಾರ್ ಆರತಿ ಬಿ. ಮಾತನಾಡಿ, ನಾವೆಲ್ಲರೂ ನಮ್ಮೆಲ್ಲರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಶಕ್ತಿಯುತವಾಗಿ ಕೊಡುಗೆ ನೀಡುವ ಉಜ್ವಲ ಭವಿಷ್ಯ ನಮ್ಮೆಲ್ಲರ ಕಣ್ಣಿನ ಮುಂದೆ ಇದೆ.
ಪರಿಸರ ಸಂರಕ್ಷಣೆ, ಕಾನೂನು ರಕ್ಷಣೆ, ಸ್ವಚ್ಛತೆಗೆ, ಸಮಾಜಸೇವೆಗೆ ಯುವಕರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಮುಖ್ಯ ಭಾಷಣಕಾರ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಮಾತನಾಡಿ, ಸ್ವಾತಂತ್ರ ಹೋರಾಟಕ್ಕೆ ಶ್ರಮಿಸಿದ ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ಇಂದು ಸ್ಮಾರಿಸಬೇಕು. ನಾವುಗಳು ಮೂರು ರೀತಿಯ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಇಂದು ನಡೆಯುತ್ತಿರುವುದು ದೇಶಭಕ್ತಿ ಸಾರುವ ರಾಷ್ಟ್ರೀಯ ಹಬ್ಬ. ದೇಶಭಕ್ತಿ ಎಂಬುದು ಎಲ್ಲರಲ್ಲಿಯೂ ಇರಬೇಕು. ಗುಬ್ಬಿ ಶರಣರ ನಾಡು ಆಗಿರುವುದರಿಂದ ಸಮಾಜಕ್ಕೆ ಹಲವು ಮಹಾನ್ ವ್ಯಕ್ತಿಗಳನ್ನು ಕೊಡುಗೆ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷೆ ಅಯಿಷಾ ತಾಸೀನ್, ಉಪಾಧ್ಯಕ್ಷೆ ಶ್ವೇತ ಜಗದೀಶ, ಕಾಂಗ್ರೆಸ್ ಮುಖಂಡ ಕೆ.ಆರ್. ವೆಂಕಟೇಶ್, ಪ್ರಾಂಶುಪಾಲರಾದ ಡಾ.ಪ್ರಸನ್ನ, ಚಂದ್ರಶೇಖರ್, ಇಒ ಎಸ್.ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಂಜುಳದೇವಿ, ಎಇಇ ಕೃಷ್ಣಕಾಂತ್, ಚಂದ್ರಶೇಖರ್, ಆರಕ್ಷಕ ವೃತ್ತ ನಿರೀಕ್ಷಕ ರಾಘವೇಂದ್ರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ್, ಬಿಇಒ ಎಂ.ಎಸ್.ನಟರಾಜು,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎಸ್.ಯತೀಶ್, ಅಕ್ಷರ ಸಹಾಯಕ ನಿರ್ದೇಶಕ ಜಗದೀಶ್, ಸಿಡಿಪಿಒ ಕೃಷ್ಣಮೂರ್ತಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಸರ್ಕಾರಿ ಇಲಾಖೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ವರ್ಗದವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ದಲಿತ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಮತ್ತಿತರರು ಇದ್ದರು.