ಕರ್ನಾಟಕ ರತ್ನ ದೇಜಗೌ ಪ್ರತಿಷ್ಠಾನ ಅಸ್ತಿತ್ವಕ್ಕೆ: ನೂತನ ಕಾರ್ಯಕಾರಿ ಸಮಿತಿ ಆಯ್ಕೆ

| Published : Apr 08 2025, 12:30 AM IST

ಕರ್ನಾಟಕ ರತ್ನ ದೇಜಗೌ ಪ್ರತಿಷ್ಠಾನ ಅಸ್ತಿತ್ವಕ್ಕೆ: ನೂತನ ಕಾರ್ಯಕಾರಿ ಸಮಿತಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಷ್ಠಾನದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ತಾಲೂಕಿನ ಕದರಮಂಗಲ ಮರಿಮಲ್ಲಯ್ಯ, ಉಪಾಧ್ಯಕ್ಷರಾಗಿ ಡಾ.ಚಕ್ಕೆರೆ ಶಿವಶಂಕರ್ ಹಾಗೂ ಡಾ.ಕೂಡ್ಲೂರು ವೆಂಕಟಪ್ಪ, ಸಂಸ್ಥಾಪಕ ಕಾರ್ಯದರ್ಶಿಯಾಗಿ ಪತ್ರ ಸಂಸ್ಕ್ರತಿ ರಾಯಭಾರಿ ಹೊಸಹಳ್ಳಿ ದಾಳೇಗೌಡ, ಸಹ ಕಾರ್ಯದರ್ಶಿಯಾಗಿ ಚಕ್ಕೆರೆಯ ಎಲ್.ಜಗದೀಶ್, ಖಜಾಂಚಿಯಾಗಿ ಚನ್ನವೀರೇಗೌಡ, ಮಹಿಳಾ ಕಾರ್ಯದರ್ಶಿಯಾಗಿ ಶಾರದಾ ನಾಗೇಶ್, ಪತ್ರಿಕಾ ಕಾರ್ಯದರ್ಶಿಯಾಗಿ ಹೇಮಂತ್ ಗೌಡ ಹಾಗೂ ಟ್ರಸ್ಟಿಯಾಗಿ ಉಮಾ ದಾಳೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣತಾಲೂಕಿನ ಚಕ್ಕೆರೆ ಗ್ರಾಮದ ಹೆಮ್ಮೆಯ ಸುಪುತ್ರ, ಮೇರು ಸಾಹಿತಿ, ರಾಷ್ಟ್ರಕವಿ ಕುವೆಂಪು ಮಾನಸ ಪುತ್ರ ಎಂದೇ ಖ್ಯಾತರಾಗಿದ್ದ ದಿ. ದೇ.ಜವರೇಗೌಡ ಅವರ ಹೆಸರಿನಲ್ಲಿ ‘ಕರ್ನಾಟಕ ರತ್ನ ದೇಜಗೌ ಪ್ರತಿಷ್ಠಾನ’ ಅಧಿಕೃತವಾಗಿ ನೋಂದಣಿಯಾಗಿ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೊದಲ ಸಭೆ ಸೇರಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.

ಕಾರ್ಯಕಾರಿ ಸಮಿತಿ:

ಪ್ರತಿಷ್ಠಾನದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ತಾಲೂಕಿನ ಕದರಮಂಗಲ ಮರಿಮಲ್ಲಯ್ಯ, ಉಪಾಧ್ಯಕ್ಷರಾಗಿ ಡಾ.ಚಕ್ಕೆರೆ ಶಿವಶಂಕರ್ ಹಾಗೂ ಡಾ.ಕೂಡ್ಲೂರು ವೆಂಕಟಪ್ಪ, ಸಂಸ್ಥಾಪಕ ಕಾರ್ಯದರ್ಶಿಯಾಗಿ ಪತ್ರ ಸಂಸ್ಕ್ರತಿ ರಾಯಭಾರಿ ಹೊಸಹಳ್ಳಿ ದಾಳೇಗೌಡ, ಸಹ ಕಾರ್ಯದರ್ಶಿಯಾಗಿ ಚಕ್ಕೆರೆಯ ಎಲ್.ಜಗದೀಶ್, ಖಜಾಂಚಿಯಾಗಿ ಚನ್ನವೀರೇಗೌಡ, ಮಹಿಳಾ ಕಾರ್ಯದರ್ಶಿಯಾಗಿ ಶಾರದಾ ನಾಗೇಶ್, ಪತ್ರಿಕಾ ಕಾರ್ಯದರ್ಶಿಯಾಗಿ ಹೇಮಂತ್ ಗೌಡ ಹಾಗೂ ಟ್ರಸ್ಟಿಯಾಗಿ ಉಮಾ ದಾಳೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

ದೇಜಗೌ ಹೆಸರು ಚಿರಸ್ಥಾಯಿಯಾಗಿಸುವ ಪ್ರಯತ್ನ:

ಪ್ರತಿಷ್ಠಾನದ ಅಧ್ಯಕ್ಷ ಮರಿಮಲ್ಲಯ್ಯ ಮಾತನಾಡಿ, ಚನ್ನಪಟ್ಟಣ ತಾಲೂಕಿನ ಹೆಮ್ಮೆಯ ಸುಪುತ್ರ ದೇಜಗೌ ಬಾಲ್ಯದಿಂದಲೇ ಹೋರಾಟ ನಡೆಸಿ ಶಿಕ್ಷಣ ಪಡೆದವರು. ಸಾಹಿತ್ಯ, ಶಿಕ್ಷಣ, ಹೋರಾಟ ಹಾಗೂ ಕನ್ನಡ ಪ್ರೇಮ ಸೇರಿದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಕನ್ನಡ ಅಧ್ಯಾಪಕರಾಗಿ, ಮೈಸೂರು ವಿವಿ ಕುಲಪತಿಗಳಾಗಿ ’ಕರ್ನಾಟಕ ರತ್ನ’ ಪ್ರಶಸ್ತಿ ಪಡೆಯುವ ಹಂತಕ್ಕೆ ಬೆಳೆದ ದೇಜಗೌ ಸಾಧನೆ ಅಮೋಘವಾದುದು. ದೇಜಗೌ ಅವರ ಹೆಸರನ್ನು ಅವರ ತವರಿನಲ್ಲಿ ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ರತ್ನ ದೇಜಗೌ ಪ್ರತಿಷ್ಠಾನ ಕಾರ್ಯೋನ್ಮುಖವಾಗಲಿದೆ ಎಂದರು.

ಪ್ರತಿಷ್ಠಾನದ ಖಜಾಂಚಿ ಚನ್ನವೀರೇಗೌಡ ಮಾತನಾಡಿ, ಕರ್ನಾಟಕ ರತ್ನ ಪಡೆದ ಮೇರು ವ್ಯಕ್ತಿತ್ವವೊಂದು ದೀಪದ ಕೆಳಗೆ ಕತ್ತಲು ಎಂಬಂತೆ ತವರಿನಲ್ಲಿಯೇ ಪ್ರವರ್ಧಮಾನಕ್ಕೆ ಬಾರದಿರುವುದು ಸೋಜಿಗವೇ ಸರಿ. ದೇಜಗೌ ಹುಟ್ಟೂರು ಚಕ್ಕೆರೆ, ಚನ್ನಪಟ್ಟಣ ತಾಲೂಕು ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ದೇಜಗೌ ಅವರ ವೈಚಾರಿಕ ಚಿಂತನೆ, ಹೋರಾಟ, ಕನ್ನಡ ಪ್ರೇಮ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕುರಿತಂತೆ ಇಂದಿನ ಪೀಳಿಗೆಗೆ ಪರಿಚಯಿಸಿ, ಮುಂದಿನ ತಲೆಮಾರಿಗೂ ದಾಟಿಸಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಈ ಹಿಂದೆ ಸಾಹಿತ್ಯಾಸಕ್ತರು ಒಂದೆಡೆ ಕಲೆತು, ಚನ್ನಪಟ್ಟಣದ ಯಾವುದಾದರೂ ಪ್ರಮುಖ ವೃತ್ತ ಅಥವಾ ಒಂದು ಪೂರ್ಣ ಬಡಾವಣೆಗೆ ದೇಜಗೌ ಅವರ ಹೆಸರನ್ನಿಡಬೇಕು ಹಾಗೂ ಪ್ರಮುಖ ವೃತ್ತದಲ್ಲಿ ದೇಜಗೌ ಪ್ರತಿಮೆ ಸ್ಥಾಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಅದು ಇನ್ನೂ ಸಾಕಾರಾಗೊಂಡಿಲ್ಲ, ಮುಂಬರುವ ದಿನಗಳಲ್ಲಿ ಪ್ರತಿಷ್ಠಾನವು ಈ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರತಿಷ್ಠಾನದ ಕಾರ್ಯದರ್ಶಿ ಹೊಸಹಳ್ಳಿ ದಾಳೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.