ಶಾಲೆಗಳಲ್ಲಿ ಕೈಮುಗಿದು ಬನ್ನಿ ಬದಲು ಪ್ರಶ್ನಿಸಿ ವಿವಾದ!

| Published : Feb 20 2024, 01:48 AM IST / Updated: Feb 20 2024, 11:46 AM IST

ಶಾಲೆಗಳಲ್ಲಿ ಕೈಮುಗಿದು ಬನ್ನಿ ಬದಲು ಪ್ರಶ್ನಿಸಿ ವಿವಾದ!
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳಲ್ಲಿ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಿರುವುದನ್ನು ಖಂಡಿಸಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಧಾನಮಂಡಲ

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳಲ್ಲಿ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಎಂಬ ಘೋಷವಾಕ್ಯವನ್ನು ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಿಸಿರುವುದನ್ನು ಖಂಡಿಸಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಶೂನ್ಯವೇಳೆಯಲ್ಲಿ ಉಭಯ ಸದನಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಸುತ್ತೋಲೆಯನ್ನು ಬಿಜೆಪಿ ಸದಸ್ಯರು ಪ್ರಸ್ತಾಪಿಸಿ, ಸರ್ಕಾರ ಈಗಲೇ ಉತ್ತರ ಕೊಡಬೇಕೆಂದು ಪಟ್ಟು ಹಿಡಿದರು. 

ಇದರಿಂದ ಸಾಕಷ್ಟು ವಾಗ್ವಾದ, ಮಾತಿನ ಚಕಮಕಿಗಳು ನಡೆದವು. ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಉತ್ತರಕ್ಕೆ ಸದಸ್ಯರು ಸಭಾಪತಿಗಳ ಮುಂದೆ ಆಗ್ರಹಿಸಿದ ಘಟನೆ ನಡೆಯಿತು.

ಪ್ರೇರಣೆ ಯಾರು? 
ಶೂನ್ಯವೇಳೆಯಲ್ಲಿ ಮೇಲ್ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಮುಖ್ಯಸಚೇತಕ ಎನ್‌.ರವಿಕುಮಾರ್‌, ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಪಡೆದ ಸಾಲುಗಳನ್ನು ಬದಲಾಯಿಸಲು ಯಾರು ಪ್ರೇರಣೆ ನೀಡಿದರು? ಈ ಕುರಿತು ಚರ್ಚಿಸಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.

ಸಭಾನಾಯಕ ಬೋಸರಾಜು ಅವರು, ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು, ಸಚಿವರನ್ನು ಈಗಲೇ ಕರೆಯಿಸಿ, ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿ ಸದನದ ಬಾವಿಗೆ ಇಳಿದು ಪ್ರತಿಭಟಿಸಲು ಆರಂಭಿಸಿದರು. 

ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ಬೇರೆ ರೂಪದಲ್ಲಿ ಚರ್ಚೆಗೆ ತನ್ನಿ ಎಂದು ಸಭಾಪತಿ ಸ್ಥಾನದಲ್ಲಿದ್ದ ತೇಜಸ್ವಿನಿ ಗೌಡ ಅವರು ಅನೇಕ ಬಾರಿ ಹೇಳಿದರೂ ಒಪ್ಪದ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. 

ಕೆಲ ಕಾಲ ನಿಯಮಗಳ ಉಲ್ಲೇಖ, ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ತಮ್ಮ ಪಟ್ಟು ಸಡಿಲಿಸದೇ ಇದ್ದಾಗ ಸಭಾಪತಿಗಳು ಕಲಾಪವನ್ನು ಮುಂದೂಡಿದರು.

ಭೋಜನ ವಿರಾಮದ ಬಳಿಕವೂ ಧರಣಿ: ಭೋಜನ ವಿರಾಮದ ಬಳಿಕವೂ ಮೇಲ್ಮನೆಯಲ್ಲಿ ಧರಣಿ ಮುಂದುವರೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮ್ಮದ್, ಸಂಬಂಧಪಟ್ಟ ಸಚಿವರು ಉತ್ತರ ಕೊಡಲಿದ್ದು, ಈ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದರು. 

ಮಧ್ಯ ಪ್ರವೇಶಿಸಿದ ಸಭಾಪತಿ‌ ಬಸವರಾಜ ಹೊರಟ್ಟಿ, ಸರ್ಕಾರದಿಂದ ‌ಮಂಗಳವಾರ ಉತ್ತರ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದರಿಂದ ಪ್ರತಿಪಕ್ಷದ ಸದಸ್ಯರು ಧರಣಿ ಹಿಂಪಡೆದರು.

ವಿಧಾನಸಭೆಯಲ್ಲೂ ಗದ್ದಲ: ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಿ.ವೈ.ವಿಜಯೇಂದ್ರ, ಶಾಲಾ-ಕಾಲೇಜು ಬಳಿ ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಬದಲಾಗಿ ‘ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಘೋಷಣೆ ಅಳವಡಿಸಲಾಗಿದೆ. ಇದು ಕುವೆಂಪು ಅವರಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಇತ್ತೀಚೆಗೆ ಶಾಲೆಗಳಲ್ಲಿ ಧಾರ್ಮಿಕ ಹಬ್ಬ ಆಚರಿಸಬಾರದು ಎಂದು ಆದೇಶ ಹೊರಡಿಸಿ ಅಂದೇ ಹಿಂಪಡೆದಿದ್ದಾರೆ. ಇದೀಗ ಈ ರೀತಿ ಆದೇಶ ಹೊರಡಿಸಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ. ಅವನಿಗೆ ಏನು ಅಧಿಕಾರ ಇದೆ. ಇದು ಹುಚ್ಚುತನದ ಆದೇಶ ಎಂದು ಏಕವಚನದಲ್ಲೇ ಹರಿಹಾಯ್ದರು.

ಬಿಜೆಪಿ, ಕಾಂಗ್ರೆಸ್‌ ಆರೋಪ-ಪ್ರತ್ಯಾರೋಪ: ಸಚಿವ ಕೃಷ್ಣಬೈರೇಗೌಡ, ನೀವು ಕೇಳಿರುವ ಪ್ರಶ್ನೆಗೆ ಸಂಬಂಧಪಟ್ಟ ಸಚಿವರಿಂದ ವಸ್ತುನಿಷ್ಠ ಉತ್ತರ ಕೊಡಿಸಲಾಗುವುದು. ಈ ಬಗ್ಗೆ ಮಂಗಳವಾರ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಈ ವೇಳೆ ಬಿಜೆಪಿ ಸದಸ್ಯರು ಈಗಲೇ ಉತ್ತರಿಸಬೇಕು ಎಂದು ಪಟ್ಟು ಹಿಡಿದಾಗ, ‘ಕುವೆಂಪು ಅವರ ಪಠ್ಯವನ್ನೇ ಬದಲಿಸಿದ ನೀವು ನಮಗೆ ಕುವೆಂಪು ಅವರ ಬಗ್ಗೆ ಪಾಠ ಹೇಳುತ್ತೀರಾ? ಮಾತನಾಡಿದರೆ ನಿಮ್ಮ ಬಗ್ಗೆಯೂ ತುಂಬಾ ಇದೆ. 

ನಾನು ವಿಚಾರ ಕೆದಕಲು ಹೋಗಲ್ಲ. ಉತ್ತರ ಕೊಡಿಸುತ್ತೇವೆ’ ಎಂದು ತಿರುಗೇಟು ನೀಡಿದರು. ಈ ವೇಳೆ ಕೆಲ ಕಾಲ ಪರಸ್ಪರ ವಾಗ್ವಾದ ನಡೆಯಿತು. ಸಭಾಧ್ಯಕ್ಷರು ಉತ್ತರ ಕೊಡಿಸುವ ಭರವಸೆ ನೀಡಿದ್ದರಿಂದ ಸದಸ್ಯರು ಸುಮ್ಮನಾದರು.