ಸಾರಾಂಶ
ಹಳಿಯಾಳ: ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬದುಕು ಭಾರತೀಯರಿಗೆ ಸ್ಫೂರ್ತಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಸೋಮವಾರ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಅದ್ಭುತ ಆಡಳಿತಗಾರರಾಗಿದ್ದ ಶಿವಾಜಿ ಮಹಾರಾಜರು ಗುಣಶಾಲಿಗಳು, ಪ್ರತಿಭಾವಂತರು ಯಾರೇ ಇದ್ದರೂ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಸರ್ವ ಧರ್ಮಗಳನ್ನು ಗೌರವಿಸುತ್ತಿದ್ದು ವಿಶಾಲ ಜಾತ್ಯತೀತ ಮನೋಭಾವನೆಯ ವಿಚಾರಧಾರೆಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಸೇನೆಯಲ್ಲಿ ಎಲ್ಲ ಧರ್ಮದ ಯೋಧರು ಇದ್ದರು ಎಂದು ಹೇಳಿದರು.ಶಿವಾಜಿ ಮಹಾರಾಜರ ವ್ಯಕ್ತಿತ್ವ ವಿಭಿನ್ನವಾಗಲು ಅವರ ಮಾತೋಶ್ರೀ ಜೀಜಾಮಾತಾ ಅವರ ಪ್ರಭಾವವೇ ಮೂಲ ಕಾರಣ. ಮಹಿಳೆಯರನ್ನು ಗೌರವಿಸುತ್ತಿದ್ದ ಶಿವಾಜಿ ಮಹಾರಾಜರು ಯಾವತ್ತೂ ಯಾರ ಕೆಡುಕನ್ನು ಬಯಸಲಿಲ್ಲ. ಇಂತಹ ಮಹಾನ್ ಆದರ್ಶ ನಾಯಕರ ಜಯಂತಿಯನ್ನು ಎಲ್ಲರೂ ಸ್ವಯಂ ಪ್ರೇರಣೆಯಿಂದಾಗಿ ಆಚರಿಸುವಂತಾಗಬೇಕು ಎಂದರು.
ಉತ್ಸಾಹ ಚೈತನ್ಯವನ್ನು ಹುಟ್ಟಿಸುತ್ತದೆ:ಕೆಎಲ್‌ಎಸ್ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ ಅವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಬಗ್ಗೆ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಕಟ್ಟಿದ್ದ ಹಾಗೂ ಆಳಿದ ಪ್ರತಿ ಕ್ಷಣವೂ ರೋಮಾಂಚಕಾರಿ. ಅವರು ತಮ್ಮ ಇಡೀ ಜೀವನವನ್ನೇ ರಾಷ್ಟ್ರಕ್ಕಾಗಿ, ನ್ಯಾಯಕ್ಕಾಗಿ ಮೀಸಲಿಟ್ಟರು. ಪ್ರತಿಬಾರಿಯೂ ಅವರು ಪ್ರಾಣವನ್ನು ಸಹ ಲೆಕ್ಕಿಸದೇ ಸಾವಿನ ದವಡೆಯಲ್ಲಿ ನುಗ್ಗಿ ಯಶಸ್ವಿಯಾಗಿ ಬರುತ್ತಿದ್ದರು. ಆದ್ದರಿಂದಲೇ ಶಿವಾಜಿ ಮಹಾರಾಜರ ಬದುಕು ನೆನಪು ಇಂದಿಗೂ ಉತ್ಸಾಹ ಚೈತನ್ಯವನ್ನು ಹುಟ್ಟಿಸುತ್ತವೆ ಎಂದರು.
ಸನ್ಮಾನ: 2023ನೇ ಸಾಲಿನಲ್ಲಿ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮರಾಠ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶ್ರೀರಕ್ಷಾ ಸಂಜು ಧಾರವಾಡಕರ, ಪ್ರಮೋದ ರಾಮದೇವ ಪಿಂಪಳಕರ, ಶ್ರೇಯಸ್ ಸುನೀಲ ಗುರವ ಅವರ ಪಾಲಕರನ್ನು ಸನ್ಮಾನಿಸಲಾಯಿತು. ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಬದುಕಿನ ಬಗ್ಗೆ ಪ್ರೇರಣಾದಾಯಕ ಉಪನ್ಯಾಸ ನೀಡಿದ ಕೆಎಲ್‌ಎಸ್ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ರಾಜ್ಯ ಉಪಾಧ್ಯಕ್ಷ ನಾಗೇಂದ್ರ ಜಿವೋಜಿ, ಜಿಲ್ಲಾಧ್ಯಕ್ಷ ಪ್ರಕಾಶ ಪಾಕ್ರೆ, ತಾಲೂಕು ಅಧ್ಯಕ್ಷ ಚೂಡಪ್ಪ ಬೊಬಾಟೆ, ಜೀಜಾಮಾತಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಂಗಲಾ ಕಶೀಲಕರ, ಮರಾಠ ಪ್ರಮುಖರಾದ ಜಿಪಂ ಮಾಜಿ ಅಧ್ಯಕ್ಷ ಕೃಷ್ಣ ಪಾಟೀಲ, ಉದ್ಯಮಿ ಸುಭಾಸ ಕೊರ್ವೇಕರ, ಪುರಸಭಾ ಸದಸ್ಯ ಅನಿಲ ಚವ್ಹಾಣ, ಶಂಕರ ಬೆಳಗಾಂವಕರ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉಮೇಶ ಬೊಳಶೆಟ್ಟಿ, ತಹಸೀಲ್ದಾರ ಆರ್.ಎಚ್. ಭಾಗವಾನ, ತಾಪಂ ಕಾರ್ಯನಿರ್ವಹಣಾಧಿಕಾರಿ ಪರಶುರಾಮ ಘಸ್ತೆ ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.