ಶಿಕ್ಷಕರ ಕ್ರಿಯಾಶೀಲತೆಯಿಂದ ಶೈಕ್ಷಣಿಕ ಪ್ರಗತಿ

| Published : Feb 20 2024, 01:48 AM IST

ಸಾರಾಂಶ

ಪ್ರೌಢ ಶಾಲಾ ಶಿಕ್ಷಕರ ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ರಾಜ್ಯದಲ್ಲಿ ಬರುತ್ತಿದೆ.

ಕುಕನೂರು: ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಕ್ರಿಯಾಶೀಲ ಚಟುವಟಿಕೆ ಕಾರಣ ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಮು ಗುಗವಾಡ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ಚಟುವಟಿಕೆ ಪರಿಶೀಲನೆ ಹಾಗೂ ಶಿಕ್ಷಕರ ಬೇಡಿಕೆ, ಸಮಸ್ಯೆಗಳ ಕುರಿತು ಜರುಗಿದ ಅವಲೋಕನ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರೌಢ ಶಾಲಾ ಶಿಕ್ಷಕರ ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ರಾಜ್ಯದಲ್ಲಿ ಬರುತ್ತಿದೆ. ಶಾಲೆಯಲ್ಲಿ ಬೆಳಿಗ್ಗೆ ವಿಶೇಷ ತರಗತಿ, ಸಂಜೆ ಗುಂಪು ಚಟುವಟಿಕೆ, ಕಲಿಕಾಸರೆ, 9 ನೇ ತರಗತಿಯ ಮರುಸಿಂಚನ, ಕಾರ್ಯಾಗಾರ, ಇನ್ನಿತರ ಶೈಕ್ಷಣಿಕ ಪ್ರಗತಿ ಕೆಲಸ ನಡೆಯುತ್ತಿರುವುದು ಶಿಕ್ಷಕರ ಕ್ರೀಯಾಶೀಲತೆ ತೋರಿಸುತ್ತದೆ ಎಂದರು.ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ್ ಮಾತನಾಡಿ, ಶಿಕ್ಷಕರು ನಿತ್ಯ ಅಭ್ಯಾಸಗೈಯಬೇಕು. ಇದರಿಂದ ಸುಲಭ ಬೋಧನೆ ಸಾಧ್ಯ. ಶಿಕ್ಷಕರು ವೃತ್ತಿಯಲ್ಲಿ ಏನಾದರೂ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಒತ್ತಡದ ಕೆಲಸ ಅವರಿಗೆ ಒದಗಿದ್ದರೆ ತಿಳಿಸಬಹುದು. ಸಂಘವು ಅವರ ಪರವಾಗಿ ಕೆಲಸ ಮಾಡುತ್ತದೆ. ಶಿಕ್ಷಕರು ಹಿತವಾಗಿ ಇದ್ದರೆ ಮಕ್ಕಳ ಉಜ್ವಲ ಭವಿಷ್ಯ ಸಾಧ್ಯ ಎಂದರು.ಸಂಘಟನಾ ಕಾರ್ಯದರ್ಶಿ ತುಕಾರಾಮ್ ಬಾಗನ್ನವರ, ತಾಲೂಕು ಅಧ್ಯಕ್ಷ ಬಸವರಾಜ ಮೇಟಿ, ಕಾರ್ಯದರ್ಶಿ ಸುರೇಶ ಅಬ್ಬಿಗೇರಿ, ತಾಲೂಕಿನ ಶಿಕ್ಷಕರು ಇದ್ದರು.