ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಫೆ.5 ರಿಂದ ನೂತನವಾಗಿ ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಮುಂಬರುವ ದಿನಗಳಲ್ಲಿ ರೈತರ ಪರ ಹೋರಾಟ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಪುಂಡಲೀಕ ಕವಡಿಮಟ್ಟಿ ತಿಳಿಸಿದರು. ನಗರದ ಕಾನಿಪ ಭವನದಲ್ಲಿ ಶನಿವಾರ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ಗ್ರಾಮೀಣ ಭಾಗವದರಿಗೆ ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಬೇಕು. ಸರ್ಕಾರ ಪಿಕೆಪಿಎಸ್ ಮೂಲಕ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು. ರೈತರಿಗೆ ಲಾಭದಾಯಕ ದರ ನಿಗದಿ ಮಾಡಬೇಕು. ದೇಶದ ಬೆನ್ನುಲುಬು ರೈತ ಎಂದು ಹೇಳುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ಜಾರಿ ಮಾಡಬೇಕು. ರೈತರಿಗೆ ಮಧ್ಯವರ್ತಿಗಳು ವಂಚಿಸದಂತೆ ಎಪಿಎಂಸಿ ಮೂಲಕ ರೈತರಿಗೆ ನೇರವಾಗಿ ಖರೀದಿ ಮಾಡಬೇಕು. ರೈತರ ಬಗ್ಗೆ ಸ್ಪಷ್ಟ ಯೋಜನೆಗಳು ಇಲ್ಲ. ಕೇಂದ್ರದ ಬಜೆಟ್ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಕಳಸಾ-ಬಂಡೂರಿ ಬ್ಯಾರೇಜ್ ನಿರ್ಮಾಣ, ಪಿಕೆಪಿಎಸ್ ಮೂಲಕ ಸರಳ ಸಾಲ ಸೌಲಭ್ಯ, ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ, ರೈತರ ಆತ್ಮಹತ್ಯೆ ತಡೆಯಬೇಕು. ರೈತರ ಬೆಳೆಗಳಿಗೆ ಸ್ಥಿರ ಬೆಲೆ ಘೋಷಣೆ ಮಾಡಿಲ್ಲ. ರಸಗೊಬ್ಬರ ಸಬ್ಸಿಡಿಗೆ ಕಡಿಮೆ ಅನುದಾನ ನೀಡಲಾಗುತ್ತಿದೆ. ರೈತರು ಬೆಳೆದ ಎಲ್ಲ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಪಾತ್ರೋಟ ಮಾತನಾಡಿ, ಬರುವ ದಿನಗಳಲ್ಲಿ ಉತ್ತರ ಭಾರತದ ಮಾದರಿಯಲ್ಲಿ ರೈತರ ಪರವಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಮಾರುತಿ ಬೆಳ್ಳಿಗುಂಡಿ, ವಸಂತ ಜಡಿಯನ್ನವರ, ಬಸವರಾಜ ತೀರ್ಥಪ್ಪನ್ನವರ, ಮಲೀಕಸಾಬ ರಾಜೂರ, ತುಳಸಿಗೇರಪ್ಪ ತಳವಾರ, ನಾಗಪ್ಪ ದೊಡಮನಿ, ಮಹಾಂತೇಶ ಶಿವಪೂರ ಇದ್ದರು. ಬಾಕ್ಸ್-1;ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘದ ಪದಾಧಿಕಾರಿಗಳು:ಮಾರುತಿ ಬೆಳ್ಳಿಗುಂಡಿ(ಗೌರವಾಧ್ಯಕ್ಷರು), ಪುಂಡಲೀಕಪ್ಪ ಕವಡಿಮಟ್ಟಿ(ರಾಜ್ಯಾಧ್ಯಕ್ಷರು), ವಸಂತ ಜಡಿಯನ್ನವರ(ಉಪಾಧ್ಯಕ್ಷರು), ಯಲ್ಲಪ್ಪ ಪಾತ್ರೋಟ(ಪ್ರಧಾನ ಕಾರ್ಯದರ್ಶಿ), ಶಂಷಾದಬೇಗಂ ದಾದಾಪೀರ(ಸಹಕಾರ್ಯದರ್ಶಿ), ಬಸವರಾಜ ತೀರ್ಥಪ್ಪನ್ನವರ(ಖಜಾಂಚಿ), ಕೃಷ್ಣಮೂರ್ತಿ ನಾಯ್ಕರ(ಸದಸ್ಯರು), ಮಲೀಕಸಾಬ ರಾಜೂರ(ಸದಸ್ಯರು),ತುಳಗೇರಪ್ಪ ತಳವಾರ(ಸದಸ್ಯರು), ಚಂದ್ರಶೇಖರ ಅಂಗಡಿ(ಸದಸ್ಯರು) ಆಯ್ಕೆಯಾಗಿದ್ದಾರೆ.ಬಾಕ್ಸ್-2;ಕೇಂದ್ರ ರಾಜ್ಯ ಸರಕಾರಗಳು ರೈತರ ಉತ್ಪಾದನೆ ಹೆಚ್ಚಳ, ಬೆಳೆ ವೈವಿದ್ಯತೆಗೆ ಉತ್ತೇಜನ, ಕಟಾವು ಬಳಿಕ ಸಂಗ್ರಹ ವ್ಯವಸ್ಥೆ, ನೀರಾವರಿಗೆ ಮೂಲಸೌಕರ್ಯಗಳ ನಿರ್ಮಾಣ, ಸುಲಭವಾಗಿ ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಮಾಡಬೇಕು-ಪುಂಡಲೀಕ ಕವಡಿಮಟ್ಟಿ, ರಾಜ್ಯಾಧ್ಯಕ್ಷರು ,ರಾಜ್ಯ ಹಸಿರು ಕ್ರಾಂತಿ ರೈತ ಸಂಘ. ಬಾಕ್ಸ್-3:ಪ್ರತಿ ಭಾನುವಾರ ಬಾದಾಮಿಯ ಎಪಿಎಂಸಿ ಯಲ್ಲಿ ದನಗಳ ಸಂತೆ ನಡೆಸಬೇಕು. ಈಗ ತರಕಾರಿ ಸವಾಲು ಮಧ್ಯರಾತ್ರಿ 3 ಗಂಟೆಗೆ ನಡೆಯುತ್ತಿದೆ. ಇದನ್ನು ರದ್ದು ಪಡಿಸಿ, ಬೆಳಿಗ್ಗೆ 6 ರಿಂದ 8 ರ ವರೆಗೆ ನಡೆಯುವಂತಾಗಬೇಕು.-ಮಲೀಕಸಾಬ ರಾಜೂರ, ಸದಸ್ಯರು.