ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಆತಂಕ ಬಿಟ್ಟು, ಭರವಸೆ ಹೆಚ್ಚಿಸಿಕೊಳ್ಳಿ. ಏಕಾಗ್ರತೆ ಮತ್ತು ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಎಂದು ಮೈಸೂರು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿಯ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪರೀಕ್ಷೆ ಯಶಸ್ಸಿನ ತಂತ್ರಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಅವರು, ಆತ್ಮ ವಿಶ್ವಾಸ, ಸಮಯ ಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೇ ಎಂದು ಅವರು ಹೇಳಿದರು.ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆ ಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಅಹಂಕಾರ ಬಿಡಿ ಮಾನವೀಯತೆ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.ಓದುವ ಸಮಯದಲ್ಲಿ ನಿಮ್ಮ ಸುತ್ತಮುತ್ತಲಿನ ಪರಿಸರ, ಜನ ಸಾಮಾನ್ಯರ ಸಮಸ್ಯೆ, ಜೈವಿಕ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ. ಪ್ರತಿ ವರ್ಷದ ಪ್ರಶ್ನೆ ಪತ್ರಿಕೆ ತಾಳೆಹಾಕಿ ಜೊತೆಗೆ ಪ್ರತಿದಿನ ನಿಮ್ಮ ಶಬ್ದಕೋಶ ಹೆಚ್ಚಿಸಿಕೊಳ್ಳಿ. ಸಮಸ್ಯೆ ಎಂತದ್ದೆ ಇರಲಿ ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ. ಪರೀಕ್ಷೆ ಬಗ್ಗೆ ಗಮನದ ಜೊತೆಗೆ ಕಣ್ಣಿನ ನೋಟ ಗುರಿಯ ಕಡೆ ಇರಲಿ ಎಂದರು.ಮುಕ್ತ ಭಂಡಾರ ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಅವರು, ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆ ಇದ್ದೇ ಇರುತ್ತೆ. ಅವುಗಳನ್ನು ಧೈರ್ಯದಿಂದ ಎದುರಿಸಿ ನಿಮ್ಮ ಗುರಿತಲುಪಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಹೆಚ್ಚಬೇಕು. ಇಲ್ಲಿಯೂ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದೀರಾ, ಮಹಿಳೆಯರ ಶ್ರದ್ದೆ ಮತ್ತು ನಿಷ್ಠೆ ಇಂದಿನ ಕೆಲಸಗಳಿಗೆ ತುಂಬಾ ಅನಿವಾರ್ಯ. ಮೊಬೈಲ್ ಗಳು ಯುವ ಸಮೂಹ ಹಾಗೂ ಸಮಾಜವನ್ನು ಹಾಳು ಮಾಡುತ್ತಿದೆ. ಸಮಯವೇ ಸಿಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುವ ಜನರು ಮೊಬೈಲ್ ನ ಲ್ಲಿ ರೀಲ್ಸ್ ನೋಡೋದು ಬಿಟ್ಟು ನೋಡಿ ನಿಮ್ಮ ಸಮಯ ಎಲ್ಲಿ ಕಳೆದು ಹೋಗುತ್ತಿದೆ ಎಂದು ಗೊತ್ತಾಗುತ್ತದೆ ಎಂದರು.ಮುಖ್ಯವಾಗಿ ಯುವ ಸಮೂಹ ಮೊಬೈಲ್ ಗಳಿಂದ ಹೊರ ಬಂದು ಪರಿಶ್ರಮ ಪಟ್ಟು ಅಧ್ಯಯನ ಮಾಡಬೇಕು. ಸಮಯ ನಿರ್ವಹಣೆಯ ಬಗ್ಗೆಯೂ ಗಮನಹರಿಸಿ. ದುಶ್ಚಟಗಳಿಂದ ದೂರ ಉಳಿದು ಮಾದರಿ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಅವರು ಹೇಳಿದರು.ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಶಿಬಿರಾರ್ಥಿಗಳು ಸತತ ಪ್ರಯತ್ನ ಪಟ್ಟು ಅಧ್ಯಯನ ಮಾಡಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ, ಗುರು-ಹಿರಿಯರು ಹಾಗೂ ಅನುಭವಿಗಳು ಹೇಳುವ ಅನುಭವಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಅರಿವೇ ಗುರು ಎನ್ನುವ ಹಾಗೆ ನಿಮ್ಮನ್ನು ನೀವೆ ಆತ್ಮಾವಲೋಕನ ಮಾಡಿಕೊಳ್ಳಿ. ಯಶಸ್ಸಿಗೆ ಗುರಿ ದೊಡ್ಡದಾಗಿರಲಿ. ಎಲ್ಲರೂ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭವಿಷ್ಯದಲ್ಲಿ ದೇಶಕ್ಕೆ ಮಾದರಿಯಾಗುವ ಅಧಿಕಾರಿಗಳಾಗಿ ಎಂದು ಶುಭ ಕೋರಿದರು.ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಜತೆಗೆ ಆಸೆಪಟ್ಟು ಓದಿ. ಆಗ ಎಲ್ಲವೂ ಸಾಕಾರಗೊಳ್ಳುತ್ತದೆ ಎಂದರು.ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಎಚ್. ವಿಶ್ವನಾಥ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ಹೊನ್ನೂರ್, ಬಿ. ಗಣೇಶ ಕೆ.ಜಿ. ಕೊಪ್ಪಲ್ ಇದ್ದರು.