ನ.29ರಂದು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ `ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಸಮ್ಮೇಳನ-2025 ನಡೆಯಲಿದೆ
ಪುತ್ತೂರು: ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ, ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಹಾಗೂ ರಾಜ್ಯದ ರಬ್ಬರು ವ್ಯವಹಾರ ಮಾಡುವ ಸಹಕಾರಿ ಸಂಘಗಳ ಜಂಟಿ ಆಶ್ರಯದಲ್ಲಿ ನ.29ರಂದು ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ `ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಸಮ್ಮೇಳನ-2025 ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶ್ರೀಧರ್ ಜಿ ಭಿಡೆ ಮುಂಡಾಜೆ ತಿಳಿಸಿದ್ದಾರೆ.
ಅವರು ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನವನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ರಬ್ಬರು ಮಂಡಳಿ ಸದಸ್ಯ ಹಾಗೂ ದ.ಕ. ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವರದಿ ಬಿಡುಗಡೆ ಮಾಡಲಿದ್ದಾರೆ. ಹಿರಿಯ ಅರ್ಥ ಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. `ಭಾರತದಲ್ಲಿ ರಬ್ಬರು ಕೃಷಿಯ ಭವಿಷ್ಯ ಎಂಬ ವಿಷಯದ ಬಗ್ಗೆ ಕೊಟ್ಟಾಯಂ ರಬ್ಬರು ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕ ಎಂ. ವಸಂತಗೇಸನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಬ್ಬರು ವ್ಯಾಪಾರಿಗಳ ಸಂಘದ ಅಧ್ಯಕ್ಷರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದ ಉದ್ದೇಶದ ಬಗ್ಗೆ ತಿಳಿಸಿದ ಅವರು ಪ್ರಕೃತ ರಬ್ಬರು ಧಾರಣೆ ಕುಸಿಯುತ್ತಿದ್ದು, ರಾಜ್ಯದಾದ್ಯಂತ ರಬ್ಬರು ಬೆಳೆಗಾರರು ಮರಗಳನ್ನು ಕಡಿಯುತ್ತಿದ್ದಾರೆ. ರಬ್ಬರು ಟ್ಯಾಪಿಂಗ್ ಮಾಡಲು ಹಿಂಜರಿಯುತ್ತಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ರಬ್ಬರು ಕೃಷಿಯನ್ನು ಈ ತನಕ ಕೃಷಿ ಇಲಾಖೆ ಅಥವಾ ತೋಟಗಾರಿಕಾ ಇಲಾಖೆಯ ಅಡಿಯಲ್ಲಿ ಸೇರಿಸಿಲ್ಲ. ಇದರಿಂದಾಗಿ ಬೆಳೆಗಾರರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ದೇಶಕ್ಕೆ ಅಧಿಕ ರಬ್ಬರು ಆಮದು ಆಗುತ್ತಿರುವುದರಿಂದಾಗಿ ಧಾರಣೆ ಕುಸಿತಕ್ಕೆ ದಾರಿಯಾಗುತ್ತಿದೆ. ರಾಜ್ಯ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡಲು ಮುಂದಾಗುತ್ತಿಲ್ಲ. ಈಗಾಗಲೇ ಕೇರಳ ಸರ್ಕಾರ ಕಿಲೋ ಒಂದಕ್ಕೆ ರು. 200 ನಿಗದಿಪಡಿಸಿದೆ. ಇವೆಲ್ಲದರ ಬಗ್ಗೆ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ ಎಂದರು.ಸುದ್ಧಿಗೋಷ್ಠಿಯಲ್ಲಿ ಹಿರಿಯ ಅರ್ಥ ಶಾಸ್ತ್ರಜ್ಞ ಡಾ. ವಿಘ್ನೇಶ್ವರ ವರ್ಮುಡಿ, ರಬ್ಬರು ಮಂಡಳಿ ನಿರ್ದೇಶಕ ಕೇಶವ ಭಂಡಾರಿ ಕೈಪ, ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಉಪಸ್ಥಿತರಿದ್ದರು.