ವಿಭಾಗದ ಛಾಯಾ ಫಡಕೆ ಎಂಬ ಅತಿಥಿ ಉಪನ್ಯಾಸಕಿ ಇದೇ ಮೊದಲಲ್ಲ, ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಹ ಉಪನ್ಯಾಸಕರಿಗೆ ಅನವಶ್ಯಕವಾಗಿ ಬೈಯ್ಯುವುದು, ಕಿರುಕುಳ ನೀಡಿದ್ದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಬೇಸತ್ತಿದ್ದರು.

ಧಾರವಾಡ:

ಕರ್ನಾಟಕ ವಿಶ್ವವಿದ್ಯಾಯದ ಭೂಗೋಳಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕಿಯೊಬ್ಬರು ವಿಭಾಗದ ವಿದ್ಯಾರ್ಥಿ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಸಂಶೋಧನಾ ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ವಿಭಾಗದ ಛಾಯಾ ಫಡಕೆ ಎಂಬ ಅತಿಥಿ ಉಪನ್ಯಾಸಕಿ ಇದೇ ಮೊದಲಲ್ಲ, ಹಲವು ವರ್ಷಗಳಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಹ ಉಪನ್ಯಾಸಕರಿಗೆ ಅನವಶ್ಯಕವಾಗಿ ಬೈಯ್ಯುವುದು, ಕಿರುಕುಳ ನೀಡಿದ್ದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಬೇಸತ್ತಿದ್ದರು. ಕಳೆದ ನವೆಂಬರ್‌ ತಿಂಗಳಲ್ಲಿ ಈ ಬಗ್ಗೆ ವಿವಿಗೆ ದೂರು ಸಹ ಸಲ್ಲಿಸಲಾಗಿತ್ತು. ಆದರೆ, ಇದೀಗ ಬುಧವಾರ ಸಂಶೋಧನಾ ವಿದ್ಯಾರ್ಥಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ವಿದ್ಯಾರ್ಥಿಗಳು ಆಕ್ರೋಶಿತರಾಗಿ ಆಡಳಿತ ಭವನದಲ್ಲಿ ಅತಿಥಿ ಉಪನ್ಯಾಸಕಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.

ಭೂಗೋಳಶಾಸ್ತ್ರ ವಿಭಾಗದ ಡಾ. ಅರವಿಂದ ಮೂಲಿಮನಿ ನಿರ್ದೇಶನದ ಮೇರೆಗೆ ಸಂಶೋಧನಾ ವಿದ್ಯಾರ್ಥಿಯೊಬ್ಬರು ತರಗತಿ ತೆಗೆದುಕೊಂಡಾಗ, ಅಲ್ಲಿಗೆ ಬಂದ ಅತಿಥಿ ಉಪನ್ಯಾಸಕಿ ಛಾಯಾ, ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಸಂಶೋಧನಾ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಆ ವಿದ್ಯಾರ್ಥಿ ಕೈಗೆ ಪರಚಿದ ಗಾಯವಾಗಿದೆ. ಅತಿಥಿ ಉಪನ್ಯಾಸಕಿಯ ಇಂತಹ ವರ್ತನೆ ಹಲವು ಬಾರಿ ಆಗಿದ್ದು, ವಿವಿ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ವಿದ್ಯಾರ್ಥಿಗಳು ವಿವಿ ಆಡಳಿತ ಮಂಡಳಿಗೆ ಆಗ್ರಹಿಸಿದರು.

ಸ್ಥಳಕ್ಕೆ ಬಂದ ಕವಿವಿ ಸಿಂಡಿಕೇಟ್‌ ಸದಸ್ಯರು, ಸಿಂಡಿಕೇಟ್ ಸಭೆಯಲ್ಲಿ ಅತಿಥಿ ಉಪನ್ಯಾಸಕಿಯ ಈ ವರ್ತನೆಯ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಈ ಬಗ್ಗೆ ಈಗಾಗಲೇ ತನಿಖಾ ಸಮಿತಿ ಕೂಡ ರಚನೆಯಾಗಿದೆ. ಒಬ್ಬ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡುವುದು ಅಪರಾಧ. ನಮಗೆ ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ. ಈ ಬಗ್ಗೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದು ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.