ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿರುವ ಅಧ್ಯಯನ ಪೀಠದ ಕಟ್ಟಡಕ್ಕೆ ವಿವಿ 2 ಎಕರೆ ಜಾಗ ನೀಡಲು ನಿರ್ಣಯಿಸುವ ಮೂಲಕ ಮರುಜೀವ ನೀಡಿದೆ.

ಬಸವರಾಜ ಹಿರೇಮಠ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್‌.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಕೋಣೆಯೊಂದರಲ್ಲಿ ಹೆಸರಿಗಷ್ಟೇ ಇದ್ದ ರಾಮಾಯಣ ಮಹಾಕಾವ್ಯದ ಕರ್ತೃ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿರುವ ಅಧ್ಯಯನ ಪೀಠದ ಕಟ್ಟಡಕ್ಕೆ ವಿವಿ 2 ಎಕರೆ ಜಾಗ ನೀಡಲು ನಿರ್ಣಯಿಸುವ ಮೂಲಕ ಮರುಜೀವ ನೀಡಿದೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ 2022ರಲ್ಲಿಯೇ ಕರ್ನಾಟಕ ವಿವಿಯಲ್ಲಿ ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠ ಆರಂಭವಾಗಿ, ಸಂಯೋಜಕರನ್ನು ನೇಮಿಸಲಾಗಿತ್ತು. ಆದರೆ, ಪೀಠದ ಕಾರ್ಯಚಟುವಟಿಕೆಗಳಿಗೆ ಜಾಗ, ಕಟ್ಟಡ ಹಾಗೂ ಅನುದಾನದ ಕೊರತೆಯಿಂದ ಕನ್ನಡ ಅಧ್ಯಯನ ಪೀಠದ ಕೋಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕೊನೆಗೂ ಕವಿವಿ ಸಿಂಡಿಕೇಟ್‌ ಸಭೆಯಲ್ಲಿ ಬಹಳ ದಿನಗಳ ಬೇಡಿಕೆ ಹಾಗೂ ಒತ್ತಾಸೆಯ ಫಲವಾಗಿ ಕವಿವಿ ಆವರಣದಲ್ಲಿರುವ ಪರೀಕ್ಷಾ ಭವನ ಬಳಿ ಎರಡು ಎಕರೆ ಭೂಮಿ ನೀಡಲು ತೀರ್ಮಾನಿಸಲಾಗಿದೆ.

ಈಗಾಗಲೇ ಸ್ಥಾಪನೆಯಾಗಿರುವ ಹಲವು ಮಹನೀಯರು ಪೀಠಗಳು ಸ್ವಂತ ಕಟ್ಟಡ ಹಾಗೂ ಅಸ್ತಿತ್ವ ಹೊಂದಿದ್ದು, ಅಂತೆಯೇ, ವಾಲ್ಮೀಕಿ ಅಧ್ಯಯನ ಪೀಠಕ್ಕೂ ಸ್ವಂತ ಜಾಗ ನೀಡಿ ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಂಡಬೇಕೆಂದು ಹರಿಹರದ ವಾಲ್ಮೀಕಿ ನಾಯಕ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಕವಿವಿ ಕುಲಪತಿಗೆ ಹಿಂದೆಯೇ ಪತ್ರ ಬರೆದಿದ್ದರು. ಅಲ್ಲದೇ, ಕವಿವಿ ಪರಿಶಿಷ್ಟ ಪಂಗಡ ನೌಕರರ ಸಂಘ ಹಾಗೂ ಪರಿಶಿಷ್ಟ ಪಂಗಡ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಘ, ಧಾರವಾಡದ ವಾಲ್ಮೀಕಿ ನಾಯಕ ಮಹಾ ಸಭಾದ ಮುಖಂಡರು ಕುಲಪತಿಗಳನ್ನು ಖುದ್ದು ಭೇಟಿಯಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿ ಕಟ್ಟಡ ನಿರ್ಮಾಣ ಮಾಡಲು ಜಾಗ ನೀಡುವಂತೆ ಕೋರಿದ್ದರು.

ಮೂರು ವರ್ಷಗಳಿಂದ ಪೀಠಕ್ಕೆ ಅಸ್ತಿತ್ವವೇ ಇಲ್ಲದಂತಾಗಿದ್ದು, ಇದು ವಾಲ್ಮೀಕಿ ಸಮುದಾಯದ ಮುಖಂಡರು, ವಿದ್ಯಾರ್ಥಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ವರ್ಗವು ಸಿಂಡಿಕೇಟ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ವಾಲ್ಮೀಕಿ ಪೀಠಕ್ಕೆ 2 ಎಕರೆ ಜಾಗ ನೀಡಿಲು ನಿರ್ಣಯ ಮಾಡಲಾಗಿದೆ.ಕಟ್ಟಡಕ್ಕೆ ಅನುದಾನದ ಕೋರಿಕೆ

ವಾಲ್ಮೀಕಿ ಪೀಠಕ್ಕೆ ಸ್ಥಳಾವಕಾಶ ನೀಡಿದ ಕವಿವಿ ಕುಲಪತಿಗೆ ಗೌರವ ಸಲ್ಲಿಸಿದ ವಾಲ್ಮೀಕಿ ನಾಯಕ ಸಮಾಜದ ಮುಖಂಡರಾದ ಮೋಹನ ಗುಡಸಲಮನಿ, ಬಸವರಾಜ ಕುರಬೇಟ, ಕಲ್ಮೇಶ ಹಾವೇರಿಪೇಟ, ವಕೀಲರಾದ ಅಶೋಕ ಹಂಚಿನಮನಿ, ಕೆ.ಎಚ್. ಪಾಟೀಲ, ಪ್ರೊ. ಪ್ರಶಾಂತ ಎಚ್.ವೈ. ಸ್ವಂತ ಕಟ್ಟಡ ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸಿ ಅಗತ್ಯ ಅನುದಾನದ ನೀಡಲು ಕವಿವಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 2026-27ನೇ ವರ್ಷದ ಬಜೆಟ್‌ನಲ್ಲಿ ಒದಗಿಸುವಂತೆಯೂ ಆಗ್ರಹಿಸಿದ್ದಾರೆ. ಈ ಮನವಿಗೆ ಸ್ಪಂದಿಸಿರುವ ಕುಲಪತಿ ವಾರದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕೇಂದ್ರ

ವಾಲ್ಮೀಕಿ ಪೀಠವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ₹ 20 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ನೀಲನಕ್ಷೆ ರೂಪಿಸಲಾಗುತ್ತಿದೆ. ವಾಲ್ಮೀಕಿ ಸೇರಿದಂತೆ ವಿವಿಧ ರಾಮಾಯಣಗಳ ಮೇಲೆ ಸಂಶೋಧನೆ, ಅಧ್ಯಯನ ನಡೆಯುವ ಅಂತಾರಾಷ್ಟ್ರೀಯ ಕೇಂದ್ರವಾಗಿ ಈ ಪೀಠವನ್ನು ರೂಪಿಸಲು ಯೋಜಿಸಲಾಗುತ್ತಿದೆ ಎಂದು ಕವಿವಿ ಪರಿಶಿಷ್ಟ ಪಂಗಡದ ನೌಕರರ ಸಂಘದ ಮುಖಂಡ ಪ್ರೊ. ಕೃಷ್ಣಾ ನಾಯಕ ಮಾಹಿತಿ ನೀಡಿದರು. ಮ್ಯೂಸಿಯಂ ಸ್ಥಾಪನೆ

ಮಹರ್ಷಿ ವಾಲ್ಮೀಕಿ ಅಧ್ಯಯನ ಪೀಠಕ್ಕೆ ಕವಿವಿ ಕುಲಪತಿ ಸ್ವತಂತ್ರ ಸ್ಥಳಾವಕಾಶ ನೀಡಿದ್ದು, ಮೂಲ ರಾಮಾಯಣದ ತತ್ವಗಳ ಪ್ರಚಾರ ಹಾಗೂ ಕರ್ನಾಟಕದಲ್ಲಿರುವ ರಾಮಾಯಣದ ಕುರುಹು, ಐತಿಹ್ಯಗಳ ವಿಡಿಯೋ ಕಿರುಚಿತ್ರ, ಡಿಜಿಟಲ್‌ ಚಿತ್ರಣಗಳ ಮ್ಯೂಸಿಯಂ ಸ್ಥಾಪಿಸುವ ಚಿಂತನೆ ಇದೆ. ಪೀಠಕ್ಕೆ ಇನ್ನೇನು ಸರ್ಕಾರದಿಂದ ₹ 2 ಕೋಟಿ ಕಾರ್ಪಸ್‌ ಅನುದಾನ ಬರುವ ನಿರೀಕ್ಷೆಗಳಿದ್ದು, ಹೊಸ ಹೊಸ ಕಾರ್ಯಕ್ರಮ ಯೋಜಿಸಲಾಗುವುದು ಎಂದು ಮಹರ್ಷಿ ವಾಲ್ಮೀಕಿ ಪೀಠದ ಸಂಯೋಜಕ ಅಶೋಕ ಹುಲಿಬಂಡಿ ತಿಳಿಸಿದರು.