ಬೆಳಗು ಪುಸ್ತಕದ ರಾಷ್ಟ್ರವಿರೋಧಿ ಲೇಖನ ಕೈ ಬಿಟ್ಟ ಕವಿವಿ

| Published : Jan 25 2025, 01:01 AM IST

ಸಾರಾಂಶ

ಕರ್ನಾಟಕ ವಿವಿ ತೀರ್ಮಾನಕ್ಕೂ ಮುಂಚೆ ಶುಕ್ರವಾರ ಬೆಳಗ್ಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಬಿಜೆಪಿ ಮುಖಂಡರು ವಿವಿ ಆವರಣದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಅತ್ಯಂತ ಹಳೆಯ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಹೊಂದಿರುವ ಕರ್ನಾಟಕ ವಿವಿ ರಾಜ್ಯಕ್ಕೆ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅನೇಕ ಕೊಡುಗೆಗಳನ್ನು ನೀಡಿದೆ.

ಧಾರವಾಡ:

ತೀವ್ರ ವಿರೋಧ, ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ ಕನ್ನಡ ಭಾಷೆಯ ಬೆಳಗು ಪುಸ್ತಕದಲ್ಲಿರುವ ರಾಷ್ಟ್ರ ವಿರೋಧಿ ಮತ್ತು ಸಮಾಜ ವಿಘಟಿಸುವ ರೀತಿಯಲ್ಲಿರುವ ಬರಹಗಳನ್ನು ಕರ್ನಾಟಕ ವಿಶ್ವವಿದ್ಯಾಲಯವು ಕೈ ಬಿಟ್ಟಿದೆ.

ಈ ಕುರಿತು ಕರ್ನಾಟಕ ವಿವಿ ಪ್ರಭಾರಿ ಕುಲಪತಿ ಜಯಶ್ರೀ ಅವರು ಸ್ಪಷ್ಟಪಡಿಸಿದ್ದು, ಬೆಳಗು ಪುಸ್ತಕದ ಬರಹಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕುರಿತು ತಜ್ಞರ ಸಮಿತಿಯು ನೀಡಿದ ವರದಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ವರದಿಯನ್ವಯ ಬೆಳಗು ಪಠ್ಯಪುಸ್ತಕದ ವಿವಾದಾತ್ಮಕ ಭಾಗ ಕೈಬಿಡಲಾಗಿದೆ. ಜ. 29ರಂದು ನಡೆಯಬೇಕಿದ್ದ ಬಿಎ ಪ್ರಥಮ ಸೆಮಿಸ್ಟರ್‌ ಕನ್ನಡ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯಲ್ಲಿ ವಿವಾದಿತ ಪಠ್ಯವನ್ನು ಪರಿಗಣಿಸದೇ ಪ್ರಶ್ನೆ ಪತ್ರಿಕೆ ರೂಪಿಸಲಾಗುವುದು. ಪಠ್ಯಪುಸ್ತಕ ಆಯ್ಕೆ ಸಮಿತಿ ಮೇಲೆ ಕ್ರಮಕೈಗೊಳ್ಳುವ ಕುರಿತು ಸಭೆಗಳನ್ನು ನಡೆಸಲಾಗುವುದು. ಸಭೆಯ ತೀರ್ಮಾನದನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಮಾಧ್ಯಮಗಳಿಗೆ ಶುಕ್ರವಾರ ತಿಳಿಸಿದರು.

ಕರ್ನಾಟಕ ವಿವಿ ತೀರ್ಮಾನಕ್ಕೂ ಮುಂಚೆ ಶುಕ್ರವಾರ ಬೆಳಗ್ಗೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ಬಿಜೆಪಿ ಮುಖಂಡರು ವಿವಿ ಆವರಣದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಅತ್ಯಂತ ಹಳೆಯ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಹೊಂದಿರುವ ಕರ್ನಾಟಕ ವಿವಿ ರಾಜ್ಯಕ್ಕೆ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅನೇಕ ಕೊಡುಗೆಗಳನ್ನು ನೀಡಿದೆ. ಇಂತಹ ಹಿರಿಮೆ ಹೊಂದಿರುವ ವಿವಿ ತನ್ನ ಪಠ್ಯ ಪುಸ್ತಕದಲ್ಲಿ ಭಾರತೀಯತೆ, ಸಂವಿಧಾನ, ದೇಶಪ್ರೇಮಕ್ಕೆ ಧಕ್ಕೆ ತರುವಂತಹ ಲೇಖನವನ್ನು ಸೇರಿಸಿರುವುದು ವಿದ್ಯಾರ್ಥಿಗಳಲ್ಲಿ ಭಾರತೀಯತೆ ಮತ್ತು ಸಂವಿಧಾನದ ಮೇಲೆ ಅಗೌರವ ಭಾವನೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಬೆಳಗು ಪಠ್ಯಪುಸ್ತಕದಲ್ಲಿ ಸಂವಿಧಾನ ವಿರೋಧಿ ಲೇಖನ ಸೇರಿಸಿದ್ದರಿಂದ ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ಕೂಡಲೇ ಸರ್ಕಾರ ಲೇಖನದ ಲೇಖಕರು, ಪುಸ್ತಕದ ಸಂಪಾದಕರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕವಿವಿಯಿಂದ ದೊಡ್ಡ ಅವಾಂತರವಾಗಿದೆ. ದೇಶ ವಿರೋಧಿ ಲೇಖನ ಪಠ್ಯದಲ್ಲಿ ಸೇರಿಸಿ ಪ್ರಮಾದ ಮಾಡಿದೆ. ಲೇಖನವು ವಿದ್ಯಾರ್ಥಿಗಳ ದಾರಿ ತಪ್ಪಿಸುವ ಉದ್ದೇಶ ಹೊಂದಿದೆ. ಪಠ್ಯದಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕಿತ್ತು ಎಂದು ಬರೆಯಲಾಗಿದೆ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಜ್ಯೋತಿ ಪಾಟೀಲ, ಶಂಕರ ಶೇಳಕೆ, ಚಂದ್ರಶೇಖರ ಮನಗುಂಡಿ, ಮಂಜುನಾಥ ಬಟ್ಟೆಣ್ಣವರ, ವಿಷ್ಣು ಕೊರ್ಲಹಳ್ಳಿ ಹಾಗೂ ಎಬಿವಿಪಿಯ ಅರುಣ ಅಮರಗೋಳ, ಮಣಿಕಂಠ ಕಳಸ, ವಿಜಯ ಕಲ್ಲೂರ, ಸೋಹನ ಮಲ್ಲಾಡದ, ನಾಗರತ್ನ, ತೃಪ್ತಿ,ಪೂನಂ , ವಿಜಯಲಕ್ಷ್ಮಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.