ಪ್ರತಿ ವರ್ಷದಂತೆ ಈ ವರ್ಷವು ಕೂಡ ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವೈಭವ - ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರತಿ ವರ್ಷದಂತೆ ಈ ವರ್ಷವು ಕೂಡ ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ವೈಭವ - ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನದಿಂದ ಜಾತ್ರೆಯವರೆಗೆ, ಜ್ಞಾನಪೀಠದಿಂದ ವಚನ ಸಾಹಿತ್ಯದವರೆಗೆ, ಚೆನ್ನಮನ ಧೈರ್ಯದಿಂದ ರಾಯಣ್ಣನ ಶೌರ್ಯದವರೆಗೆ, ಡೊಳ್ಳಿನ ಬಡಿತದಿಂದ ಜನಪದದ ಹೆಜ್ಜೆಯವರೆಗೆ, ಇವೆಲ್ಲವೂ ನಮ್ಮ ಕರ್ನಾಟಕದ ಹೆಮ್ಮೆ.ಕರ್ನಾಟಕದ ಗತವೈಭವನ್ನು ಸಾರುವ ಕದಂಬ, ಹೊಯ್ಸಳ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ವಚನಕಾರರು ಇವರೆಲ್ಲರ ನಾಡ ಅಭಿಮಾನವನ್ನು ವಿದ್ಯಾರ್ಥಿಗಳು ನಾಟಕದ ಮೂಲಕ ಪ್ರಸ್ತುತ ಪಡಿಸಿದರು. ನೃತ್ಯ ರೂಪಕದಲ್ಲಿ ಕರ್ನಾಟಕದ ಜನಪದ ಕಲೆಗಳಾದ ಯಕ್ಷಗಾನ, ಕಂಸಾಳೆ, ಡೊಳ್ಳು ಕುಣಿತ, ಹುಲಿ ಕುಣಿತ 180 ವಿದ್ಯಾರ್ಥಿಗಳ ಪ್ರದರ್ಶನ ವೀಕ್ಷಕರ ಮನರಂಜಿಸಿತು.ವಿಶೇಷವಾಗಿ 12 ನೇ ಶತಮಾನದ ವಚನಕಾರರಾದ ಬಸವಣ್ಣ ಪಾತ್ರಧಾರಿಯಾಗಿ ಪೂಜ್ಯ ದೊಡ್ಡಪ್ಪ ಎಸ. ಅಪ್ಪಾ ಹಾಗೂ ಕಿತ್ತೂರು ರಾಣಿ ಚೆನ್ನಮ್ಮಳಾಗಿ ಕುಮಾರಿ ಮಹೇಶ್ವರಿ ಎಸ. ಅಪ್ಪಾ ಆಕರ್ಷಕ ಮತ್ತು ಭಾವನಾತ್ಮಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.ಅತಿಥಿಗಳಾಗಿ ಮಹಾದೇವಯ್ಯ ಕರದಳ್ಳಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಶಂಕರಗೌಡ ಹೊಸಮನಿ, ವಿಭಾಗ ಸಂಯೋಜಕ ಜೋಸೆಫ್ ವರ್ಗೀಸ್, ಶ್ರೀಮತಿ ಆಶಾರಾಣಿ ಪಾಟೀಲ್, ವೃಷಾಲಿ, ಶಿವಲೀಲಾ ಪೂಜಾರಿ ಹಾಗೂ ಚಟುವಟಿಕೆ ಸಂಯೋಜಕಿ ಅಕ್ಷತಾ ಕುಲಕರ್ಣಿ ಪಾಲ್ಗೊಂಡಿದ್ದರು.
ಕನ್ನಡವನ್ನು ಕೇವಲ ಮಾತನಾಡುವುದರಿಂದ ಮಾತ್ರ ಕನ್ನಡಿಗರಾಗುವುದಿಲ್ಲ; ಕನ್ನಡದ ಸಂಸ್ಕೃತಿ, ಸಾಹಿತ್ಯ, ಇತಿಹಾಸ ಮತ್ತು ಜೀವನ ಮೌಲ್ಯಗಳನ್ನು ತಿಳಿದುಕೊಳ್ಳುವುದರಿಂದ ಕನ್ನಡದ ನಿಜವಾದ ಆತ್ಮವನ್ನು ಅರಿಯಲು ಸಾಧ್ಯ” ಎಂದು ತಿಳಿಸಿದರು. ಕನ್ನಡ ಎಲ್ಲರೊಟ್ಟಿಗೆ, ಎಲ್ಲರೊಂದಿಗೆ ಬೆಳೆಯಲಿ; ಕನ್ನಡದ ಸಂಸ್ಕೃತಿ, ಸಾಹಿತ್ಯ ಮತ್ತು ಚಿಂತನೆ ವಿಶ್ವದಾದ್ಯಂತ ಪಸರಿಸಲಿ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಭಿಪ್ರಾಯಪಟ್ಟರು.ಕನ್ನಡದ ಸಂಸ್ಕೃತಿ, ಇತಿಹಾಸ, ಪರಂಪರೆ, ಸಾಹಿತ್ಯ ಹಾಗೂ ಮೌಲ್ಯಗಳ ಅರಿತುಕೊಳ್ಳುವ ಅಗತ್ಯವಿದೆ. ಕರ್ನಾಟಕದ ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಬಸವಣ್ಣನ್ನ ಕಾಲದದಿಂದಲೂ ಅಸ್ತಿತ್ವದಲ್ಲಿದ್ದ ಮಾನವೀಯ ಮೌಲ್ಯಗಳನ್ನು ಇಂದಿನ ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾಗಿದೆ. ಇಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸುವ ಮೂಲಕ ಅವರಲ್ಲಿ ಹೆಮ್ಮೆ ಮತ್ತು ಶಾಂತಿಯುತ ಸಹಬಾಳ್ವೆಯ ಮನೋಭಾವ ಬೆಳೆಸಬೇಕಾಗಿದ್ದು, ಕರ್ನಾಟಕ ವೈಭವ ಒಂದು ಪ್ರಯತ್ನವಾಗಿದೆ ಎಂದು ಅಪ್ಪಾ ಪಬ್ಲಿಕ್ ಶಾಲೆ ಪ್ರಾಚಾರ್ಯ ಶಂಕರಗೌಡ ಹೊಸ್ಮನಿ ಹೇಳಿದರು. ಅನನ್ಯ ಸ್ವಾಗತಿಸಿದರು. ಆರಾಧ್ಯ ಅತಿಥಿ ಪರಿಚಯಿಸಿದರು. ಸಾನ್ವಿ ವಂದಿಸಿದರು. ಸೃಜನ್ ಮತ್ತು ವೃಷಾಲಿ, ಭೀಮಾಶಂಕರ, ತನಿಷ್ಕಾ ನಿರೂಪಿಸಿದರು.