ಸಂವಿಧಾನವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲರಿಗೂ ಸಮಾನ ಅವಕಾಶ, ನ್ಯಾಯ ಕಲ್ಪಿಸುವ ಮೂಲಕ ಅಂಬೇಡ್ಕರ್ ಅವರು ವಿಶ್ವವೇ ಒಪ್ಪುವಂತಹ ದೇಶದ ಜನರ ಆಶಯಕ್ಕೆ ತಕ್ಕಂತೆ ಸಂವಿಧಾನ ರಚನೆ ಮಾಡಿದ್ದಾರೆ .
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸಮಾನ ಅವಕಾಶ ಕಲ್ಪಿಸಿಕೊಡುವಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನ ಸರ್ವ ಶ್ರೇಷ್ಠವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಸಮಿತಿಯ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದ ಬಳಿಕ ದೇಶದ ಸಮಗ್ರ ಅಭಿವೃದ್ಧಿಗಾಗಿ ಸಂವಿಧಾನ ರಚನೆ ಮಾಡಲಾಯಿತು. ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಧ್ಯಕ್ಷರಾಗಿ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ನೀಡಿದ ಸಂವಿಧಾನವು ಜಾತ್ಯತೀತ ಹಾಗೂ ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಎಲ್ಲ ನಾಗರಿಕರು ಒಪ್ಪುವಂಥ ಸರ್ವ ಅಭಿವೃದ್ಧಿಗೆ ಪೂರಕವಾದ ಸಂವಿಧಾನವನ್ನು ೧೯೪೯ರ ನ. ೨೬ ರಂದು ದೇಶಕ್ಕೆ ಸಮರ್ಪಣೆ ಮಾಡಿದರು. ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಂದಿನಿಂದ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ ದೇಶ ಮತ್ತು ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್ ಮಾತನಾಡಿ, ಸಂವಿಧಾನವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಎಲ್ಲರಿಗೂ ಸಮಾನ ಅವಕಾಶ, ನ್ಯಾಯ ಕಲ್ಪಿಸುವ ಮೂಲಕ ಅಂಬೇಡ್ಕರ್ ಅವರು ವಿಶ್ವವೇ ಒಪ್ಪುವಂತಹ ದೇಶದ ಜನರ ಆಶಯಕ್ಕೆ ತಕ್ಕಂತೆ ಸಂವಿಧಾನ ರಚನೆ ಮಾಡಿದ್ದಾರೆ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್ ಸಂವಿಧಾನ ಪೀಠಿಕೆಯನ್ನು ಬೋಧಿಸಿ, ಪ್ರಮಾನ ವಚನ ನೀಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಮುಖಂಡರಾದ ಬ್ಯಾಡಮೂಡ್ಲು ರಾಜಣ್ಣ, ತಾಪಂ ಮಾಜಿ ಸದಸ್ಯ ರಾಜು, ನಾಗಾರ್ಜುನ, ಪೃಥ್ವಿ, ಮುಖಂಡರಾದ ಎ.ಎಚ್. ನಸ್ರುಲ್ ಖಾನ್, ಅಬ್ದುಲ್ ಅಹಮದ್, ನೂರ್ ಅಹಮದ್ ಸಾಬ್, ರವೀಂದ್ರ, ನಾಗರಾಜು ಮೊದಲಾದವರು ಇದ್ದರು.