ಸಾರಾಂಶ
ತಾಪಂ ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅಧಿಕಾರಿಗಳು ಸರ್ಕಾರಿ ನಿಯಮ ಗಾಳಿಗೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ತಾಲೂಕು ಪಂಚಾಯಿತಿಯಲ್ಲಿ ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಆಗ್ರಹಿಸಿ ಕರ್ನಾಟಕ ವೀರ ಕೇಸರಿ ಪಡೆಯವರು ನಜರ್ ಬಾದ್ ನಲ್ಲಿರುವ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ಪ್ರತಿಭಟಿಸಿದರು.ತಾಪಂ ವಿವಿಧ ಲೆಕ್ಕ ಶೀರ್ಷಿಕೆಯಲ್ಲಿ ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅಧಿಕಾರಿಗಳು ಸರ್ಕಾರಿ ನಿಯಮ ಗಾಳಿಗೆ ತೂರಿ, ತಮಗಿಷ್ಟ ಬಂದ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಿ ಅಕ್ರಮ ಎಸಗಿದ್ದಾರೆ. ಸರ್ಕಾರಿ ನಿಯಮದ ಪ್ರಕಾರ ತುಂಡು ಗುತ್ತಿಗೆ ಕಾಮಗಾರಿ ಕೋರಿ ಅರ್ಜಿ ಸಲ್ಲಿಸಿರುವ ಗುತ್ತಿಗೆದಾರರಿಗೆ ಜ್ಯೇಷ್ಠತೆಯನ್ವಯ ಕಾಮಗಾರಿ ನೀಡಬೇಕು. ಜೊತೆಗೆ ಗುತ್ತಿಗೆದಾರರು ಅರ್ಜಿ ನೀಡಿರುವ ವಿವರವನ್ನು ಸ್ವೀಕೃತಿ ವಹಿ ಪುಸ್ತಕದಲ್ಲಿ ನಮೂದಿಸಬೇಕು. ಆದರೆ, ಅಧಿಕಾರಿಗಳು ಹಾಗೆ ಮಾಡದೆ ಅರ್ಜಿಯನ್ನೇ ಸಲ್ಲಿಸದ ಗುತ್ತಿಗೆದಾರರಿಗೆ ಅತಿ ಹೆಚ್ಚು ಕಾಮಗಾರಿ ನೀಡಿ, ಅರ್ಜಿ ಸಲ್ಲಿಸಿದ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.ಎಸ್ಸಿ, ಎಸ್ಟಿಗೆ ಮೀಸಲಾದ ಕಾಮಗಾರಿಯನ್ನು ಸಹ ಅರ್ಜಿ ಸಲ್ಲಿಸಿರುವ ಎಸ್ಸಿ, ಎಸ್ಟಿ ಗುತ್ತಿಗೆದಾರರಿಗೆ ನೀಡದೇ, ಅರ್ಜಿ ಸಲ್ಲಿಸದ ಹೆಚ್ಚು ಹಣ ನೀಡಿದ ಗುತ್ತಿಗೆದಾರರಿಗೆ ನೀಡಿ ಅರ್ಹರಿಗೆ ಅನ್ಯಾಯ ಮಾಡುತ್ತಿದ್ದಾರೆ. ತುಂಡು ಗುತ್ತಿಗೆ ಕಾಮಗಾರಿ ನೀಡದ ಕಾರಣ ಗುತ್ತಿಗೆದಾರರು ಕಾಮಗಾರಿ ದೃಢೀಕರಣ ಪತ್ರ ಹಾಗೂ ಟರ್ನವರ್ ಕೊರತೆಯಿಂದಾಗಿ ಇ-ಪ್ರೊಕ್ಯೂರ್ ಮೆಂಟ್ ಟೆಂಡರ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದರು.ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾದ ಅನುದಾನಕ್ಕೆ ಪ್ರತ್ಯೇಕ ಖಾತೆ ತೆರೆದಿಲ್ಲ. ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ವರುಣ ವ್ಯಾಪ್ತಿಯ ಗ್ರಾಪಂಗಳಲ್ಲಿ ಅತಿ ಹೆಚ್ಚು ಎಸ್ಸಿ, ಎಸ್ಟಿಗೆ ಪ್ರತ್ಯೇಕ ಖಾತೆ ಹೊಂದದೆ ಅನ್ಯಾಯ ಎಸಗಲಾಗುತ್ತಿದೆ. ಎಸ್ಸಿ, ಎಸ್ಟಿ ಕಾಮಗಾರಿಗಳಿಗೆ ಮೀಸಲಾದ ಅನುದಾನಕ್ಕೆ ಪ್ರತ್ಯೇಕ ಕಾಮಗಾರಿ ಕ್ರಿಯಾ ಯೋಜನೆ ರೂಪಿಸದೆ ಎಸ್ಸಿ, ಎಸ್ಟಿ ಎರಡನ್ನು ಒಟ್ಟಿಗೆ ಸೇರಿಸಿ ಒಂದು ವರ್ಗಕ್ಕೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.ಸ್ವತಃ ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿಯೇ ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಸವಲತ್ತು ಪಡೆಯಲು ಸ್ವಜಾತಿಯರು ಸಾಕು ಎಂಬಂತಾಗಿದೆ. ಕೂಡಲೇ ಎಸ್ಸಿ, ಎಸ್ಟಿಯವರಿಗೆ ಸರ್ಕಾರದ ಸವಲತ್ತು ನೀಡುವಲ್ಲಿ ತಾರತಮ್ಯ ಮಾಡುತ್ತಿರುವ, ತುಂಡು ಗುತ್ತಿಗೆ ಕಾಮಗಾರಿ ನೀಡುವಲ್ಲಿ ಅಕ್ರಮ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.ಕರ್ನಾಟಕ ವೀರ ಕೇಸರಿ ಪಡೆಯ ಅಧ್ಯಕ್ಷ ಮಧುವನ ಚಂದ್ರು, ಪದಾಧಿಕಾರಿಗಳಾದ ಮಹದೇವು, ಬಸವರಾಜು, ಕೃಷ್ಣನಾಯಕ, ರಾಮನಾಯಕ, ಪ್ರವೀಣ, ರಾಜೇಶ್ವರಿ, ಮರಿಸ್ವಾಮಿ, ಸಿದ್ದರಾಜು, ದೇವರಾಜು, ಕಲ್ಯಾಣಮ್ಮ, ಲಕ್ಷ್ಮಿ, ಮಂಚಮ್ಮ, ಗೌರಿ, ಮಂಜುಳಾ, ಪುಟ್ಟಲಕ್ಷ್ಮೀ, ಮಲ್ಲಿಗಮ್ಮ, ದೇವಮ್ಮ ಮೊದಲಾದವರು ಇದ್ದರು.