ರಾಜ್ಯಕ್ಕೆ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ ಕರ್ನಾಟಕ ಆಗಲಿದೆ - ಸಂಸದ ಬೊಮ್ಮಾಯಿ

| N/A | Published : Feb 10 2025, 01:47 AM IST / Updated: Feb 10 2025, 10:24 AM IST

ರಾಜ್ಯಕ್ಕೆ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ ಕರ್ನಾಟಕ ಆಗಲಿದೆ - ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ದೂರದೃಷ್ಟಿಯ, ಬಲಿಷ್ಠ ನಾಯಕತ್ವ ಇದೆ. ರಾಜ್ಯದಲ್ಲಿಯೂ ಅದೇ ರೀತಿಯ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ, ವೈಭವದ ಕರ್ನಾಟಕ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಾವೇರಿ: ದೇಶದಲ್ಲಿ ದೂರದೃಷ್ಟಿಯ, ಬಲಿಷ್ಠ ನಾಯಕತ್ವ ಇದೆ. ರಾಜ್ಯದಲ್ಲಿಯೂ ಅದೇ ರೀತಿಯ ದೂರದೃಷ್ಟಿಯ ನಾಯಕತ್ವ ಬಂದರೆ ವಿಕಸಿತ, ವೈಭವದ ಕರ್ನಾಟಕ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಹಾವೇರಿ ಜಿಲ್ಲೆ ರಾಣಿಬೆನ್ನೂರಿನಲ್ಲಿ ನಡೆದ ಕರ್ನಾಟಕ ವೈಭವ ವೈಚಾರಿಕ ಹಬ್ಬ-25 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕರ್ನಾಟಕ ಒಂದು ವಿಶೇಷ ನಾಡು, ಕರ್ನಾಟಕದ ರೀತಿಯಲ್ಲಿ ಇನ್ನೊಂದು ರಾಜ್ಯ ಇಲ್ಲ. ನೈಸರ್ಗಿಕವಾಗಿ, ಸಂಸ್ಕಾರದಿಂದ, ಪಾರಂಪರಿಕವಾಗಿ, ಐತಿಹಾಸಿಕವಾಗಿ ಆಧುನೀಕರಣದಲ್ಲಿ ಈ ರಾಜ್ಯಕ್ಕೆ ಇನ್ನೊಂದು ರಾಜ್ಯ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅತಿ ಹೆಚ್ಚು ವೈವಿಧ್ಯತೆ ಇರುವ ನಾಡು ಕರ್ನಾಟಕ. ಹಸಿರು ಸಂಪತ್ತು ಇರುವ ನಾಡು, ಎಲ್ಲ ರೀತಿಯ ಬೆಳೆ ಸಂಪತ್ತು ಇಲ್ಲಿ ಬೆಳೆಯತ್ತದೆ. ಇದಕ್ಕೆ ದೊಡ್ಡ ಸಂಸ್ಕೃತಿ ಇದೆ ಎಂದು ಹೇಳಿದರು.

ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ನಾಗರಿಕತೆ ಬೆಳೆದಿದೆ. ನಾಗರಿಕತೆಗೂ ಸಂಸ್ಕೃತಿಗೂ ವ್ಯತ್ಯಾಸ ಇದೆ. ಮೊದಲು ಸೈಕಲ್ ಇತ್ತು. ಬಸ್ಸು, ಕಾರು ಬಂದಿದೆ. ಮನೆಯಲ್ಲಿ ಬೀಸುಕಲ್ಲು ಇತ್ತು, ಈಗ ಮಿಕ್ಸಿ ಬಂದಿದೆ. ಇದೆಲ್ಲ ನಾಗರಿಕತೆ. ನಮ್ಮ ಹತ್ತಿರ ಏನಿದೆಯೋ ಅದು ನಾಗರಿಕತೆ, ನಾವೇನಾಗಿದ್ದೇವೆ ಅದು ಸಂಸ್ಕೃತಿ. ಈ ನೈಸರ್ಗಿಕ ಸಂಪತ್ತನ್ನು ಪಡೆದು ಏನು ಆಗಿದ್ದೇವೆ ಎನ್ನುವುದು ಚಿಂತನೆ ಮಾಡುವುದು ಕರ್ನಾಟಕ ವೈಭವ. ಕನ್ನಡಿಗರು ಯಾವುದರಲ್ಲೂ ಹಿಂದೆ ಇಲ್ಲ. ಅವಕಾಶ ಸಿಕ್ಕರೂ ಸಾಧಿಸುತ್ತಾರೆ. ಚಾಲೆಂಜಿಂಗ್ ಆದರೂ ಸಾಧಿಸುತ್ತಾರೆ. ನಾವು ನಮ್ಮ ಸಾಧನೆಯನ್ನು ವೈಭವೀಕರಿಸಿಕೊಳ್ಳುವುದಿಲ್ಲ. ಇದೇ ಐಟಿ ಬಿಟಿ, ಇದೇ ಸಂಸ್ಕೃತಿ ಬೇರೆ ರಾಜ್ಯಗಳಲ್ಲಿ ಇದ್ದಿದ್ದರೆ ಅದು ಬೇರೆಯೇ ಆಗುತ್ತಿತ್ತು. ಕರ್ನಾಟಕ ಕನ್ನಡ ಪರಂಪರೆ ಬಗ್ಗೆ ನಾವು ಹೆಮ್ಮೆ ಪಡಬೇಕು. ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 2047ಕ್ಕೆ ವಿಕಸಿತ ಭಾರತ ಆಗಬೇಕು ಎಂದು ಹೇಳಿದ್ದಾರೆ. ಅದಕ್ಕಾಗಿ ಅವರು ಈಗಿನಿಂದಲೇ ಕೆಲಸ ಮಾಡುತ್ತಿದ್ದಾರೆ. ಒಬ್ಬ ಪ್ರತಿಪಕ್ಷದ ನಾಯಕರು, ಮೋದಿಯವರೇ 2047ಕ್ಕೆ ನೀವೂ ಇರೋದಿಲ್ಲ ನಾವೂ ಇರೋದಿಲ್ಲ. ಈಗೇಕೆ ಆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ನಾನು ನನ್ನ ಭಾಷಣದಲ್ಲಿ ಹೇಳಿದೆ. ನಾವಿಲ್ಲದಿದ್ದರೂ, ಈ ದೇಶ ಇರುತ್ತದೆ. ಈ ದೇಶದ ಮುಂದಿನ ಪೀಳಿಗೆ ಇರುತ್ತದೆ ಎಂದು ಹೇಳಿದೆ. ಮುಂದೆ ಇತಿಹಾಸದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರಲ್ಲಿ ಯಾವುದರಲ್ಲಾದರೂ ನಿಮ್ಮ ಹೆಸರು ಇರುತ್ತದೆ ಎಂದು ಹೇಳಿದೆ ಎಂದರು.

ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪದ್ಮಶ್ರೀ ಮಂಜಮ್ಮ ಜೋಗತಿ, ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.