ಕನಕಪುರ: ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯನ್ನು ಕೂಡಲೇ ಬಾಡಿಗೆ ಕಟ್ಟಡದಿಂದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ಕನಕಪುರ: ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕರ್ತವ್ಯ ನಿರ್ವಹಿಸುತ್ತಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಯನ್ನು ಕೂಡಲೇ ಬಾಡಿಗೆ ಕಟ್ಟಡದಿಂದ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಚನ್ನಬಸಪ್ಪ ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಸಬ್‌ ರಿಜಿಸ್ಟ್ರಾರ್‌ ಕಚೇರಿವರೆಗೂ ಮೆರವಣಿಗೆ ನಡೆಸಿ ಉಪನೋಂದಣಾಧಿಕಾರಿ ಸುರೇಶ್‌ಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಯುವಶಕ್ತಿ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್, ಖಾಸಗಿ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕಚೇರಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಅನೇಕ ಬೇಡಿಕೆಗಳು ಮತ್ತು ವಿರೋಧಗಳು ವ್ಯಕ್ತವಾಗಿವೆ. ಸರ್ಕಾರಿ ಕಟ್ಟಡಗಳು ಖಾಲಿ ಇದ್ದರೂ ಮಾಸಿಕ ಲಕ್ಷಾಂತರ ರುಪಾಯಿ ಬಾಡಿಗೆ ನೀಡಿ ಖಾಸಗಿ ಕಟ್ಟಡದಲ್ಲಿ ನಡೆಸುತ್ತಿರುವ ಈ ಕಚೇರಿ ಜನರಿಗೆ ಅನನುಕೂಲವಾಗಿದೆ. ಕಲ್ಯಾಣ ಮಂಟಪ ವಾಗಿದ್ದ ಈ ಜಾಗವನ್ನು ಸಬ್‌ ರಿಜಿಷ್ಟ್ರಾರ್ ಕಚೇರಿಯಾಗಿ ಪರಿವರ್ತಿಸಿದ್ದು ಕಟ್ಟಡದ ಮಾಲೀಕರಿಗೆ ಅನುಕೂಲವಾಗುತ್ತದೆಯೇ ಹೊರತು ಜನರಿಗೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಚೇರಿಗೆ ಮಹಿಳೆಯರು, ವೃದ್ಧರು, ವಿಕಲಚೇತನರು ಹೋಗಿ ಬರಲು ಕಷ್ಟವಾಗಿದೆ. ಮೂಲ ಸೌಲಭ್ಯಗಳು ಕೂಡ ಇದರಲ್ಲಿ ಇಲ್ಲ. ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಅವ್ಯವಸ್ಥೆಯ ಆಗರವಾಗಿರುವ ಈ ಕಚೇರಿಯನ್ನು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ವೇದಿಕೆ ನಗರಾಧ್ಯಕ್ಷ ನವೀನ್, ಮುಖಂಡರಾದ ಮನು, ಅರುಂಧತಿ, ಕೋಡಿಹಳ್ಳಿ ಸಿದ್ದರಾಜು, ಚಂದ್ರು, ವೆಂಕಟೇಶ್, ಚಾಂದ್‌ಪಾಷ, ಸಲೀಂ, ಕೌಸರ್ ಖಾನ್, ಆದಿಲ್‌ಪಾಷ ಉಪಸ್ಥಿತರಿದ್ದರು.

ಕೆಕೆಪಿ ಸುದ್ದಿ 02:

ಕನಕಪುರದಲ್ಲಿ ಸಬ್‌ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರಕ್ಕೆ ಒತ್ತಾಯಿಸಿ ಯುವಶಕ್ತಿ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.