ಸಾರಾಂಶ
ಹೊನ್ನಾಳಿ: ಭಕ್ತಿ ಪರಂಪರೆಯ ಸಾಧ್ವಿ ಶ್ರೀ ಹೆಳವನಕಟ್ಟೆ ಗಿರಿಯಮ್ಮ ಪುಣ್ಯತಿಥಿ ಮತ್ತು ನಾಗರ ಪಂಚಮಿ ಪ್ರಯುಕ್ತ ಶುಕ್ರವಾರ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ಣಿಕೋತ್ಸವ ಸಹಸ್ರಾರು ಭಕ್ತರ ಸಮ್ಮುಖ ನಡೆಯಿತು. ಆಂಜನೇಯ ಸ್ವಾಮಿ ವ್ರತನಿರತ ಗಣಮಗ ಅಂಬನ್ನೇರಿ "ಶಿಖರದ ತುದಿಗೆ ಘಟಸರ್ಪ ನುಂಗೀತಲೇ ಭೂಲೋಕ ಎಚ್ಚರ " ಎನ್ನುವ ಈ ವರ್ಷದ ಕಾರಣಿಕ ನುಡಿ ನುಡಿದರು.
ಕುಂಬಳೂರಿನ ಗಣಮಗ ಬಾಣದೊಂದಿಗೆ, ಜಾನಪದ ಕಲಾಮೇಳಗಳೊಂದಿಗೆ ಗಂಗಾಪೂಜೆ ನೆರವೇರಿಸಿದರು. ತುಂಗಭದ್ರಾ ನದಿ ತೀರದಲ್ಲಿ ಹೆಳವನಕಟ್ಟೆ ಗಿರಿಯಮ್ಮನವರು ಐಕ್ಯವಾದ ಸ್ಥಳದಲ್ಲಿ ಪ್ರತಿವರ್ಷ ಕಾರಣಿಕ ಕ ನುಡಿಗಳನ್ನು ನುಡಿಯುವುದು ಸಂಪ್ರದಾಯವಾಗಿದೆ. ತಾಲೂಕಿನ 18 ಗ್ರಾಮಗಳಿಂದ ಉತ್ಸವ ಮೂರ್ತಿಗಳೊಂದಿಗೆ ಕಮ್ಮಾರಗಟ್ಟೆ ಗ್ರಾಮಕ್ಕೆ ಆಗಮಿಸಿ ಅನಂತರ ಗರುಡ ದರ್ಶನ ನೀಡಿದ ನಂತರ ಕಾರ್ಣೀಕ ನುಡಿಯುವುದು ಇಲ್ಲಿಯ ಪದ್ಧತಿ. ಈ ಬಾರಿಯ ಕಾರ್ಣೀಕದಲ್ಲಿಯೂ ಭಕ್ತರು ಪಾಲ್ಗೊಂಡು, ಭಕ್ತಿ ಮೆರೆದರು.ಕಮ್ಮಾರಗಟ್ಟೆಯಲ್ಲಿ ಶ್ರೀ ಆಂಜನೇಯ ಸ್ವಾಮಿ ಬಲಮುಖವಾಗಿರುವ ಪಶ್ಚಿಮ ದ್ವಾರದಲ್ಲಿ ಆಂಜನೇಯ ದೇವಸ್ಥಾನವಿದೆ. ಹೆಳವನಕಟ್ಟೆ ಶ್ರೀ ರಂಗನಾಥನ ಭಕ್ತಳಾದ ಗಿರಿಯಮ್ಮ ಗ್ರಾಮಗಳನ್ನ ಸಂಚರಿಸುತ್ತ ಈ ಗ್ರಾಮದಲ್ಲಿ ಐಕ್ಯವಾದ ನೆನಪಿಗಾಗಿ ಅಂದಿನಿಂದ ಇಂದಿನವರೆಗೂ ಆಕೆಯ ಪುಣ್ಯಾರಾಧನೆ ದಿನವಾದ ಶ್ರಾವಣ ಮಾಸದ ಗರುಡ ಪಂಚಮಿಯಂದು ವರ್ಷದ ಭವಿಷ್ಯವಾಗಿ ವ್ರತನಿರತ ಗಣಮಗ ಕಾರ್ಣಿಕ ನುಡಿಯುತ್ತಾರೆ.
ಈ ಉತ್ಸವಕ್ಕೆ ವಿಶೇಷವಾಗಿ ನವದಂಪತಿ ತಲೆಕೆಳಗಾಗಿರುವ ಹುಣಸೆಮರಕ್ಕೆ ಮಕ್ಕಳಾಗಲೆಂದು, ನಿರುದ್ಯೋಗಿಗಳಿಗೆ ಕೆಲಸ ಸಿಗಲೆಂದು ಮೆಣಸು, ಮಂಡಕ್ಕಿ, ಉತ್ತತ್ತಿಗಳನ್ನು ಮರದ ಸುತ್ತಲೂ ಪ್ರದಕ್ಷಿಣೆ ಹಾಕಿ, ಹುಣಸೆ ಮರಕ್ಕೆ ಎರಚುವುದು ಇಲ್ಲಿಯ ನಂಬಿಕೆ ಮತ್ತು ಆಚರಣೆಯಾಗಿದೆ.ರೈತರು, ವರ್ತಕರು ಈ ಕಾರ್ಣಿಕ ನುಡಿಯ ಆಧಾರದ ಮೇಲೆ ವರ್ಷದ ಮಳೆ, ಬೆಳೆ, ವ್ಯಾಪಾರ- ವಹಿವಾಟಗಳನ್ನು ಲೆಕ್ಕಾಚಾರ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆಯಾಗಿದೆ.
- - -