ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಕಾರವಾರದಿಂದ ಮಂಗಳೂರು ತನಕ ಒಬ್ಬರೇ ಕಯಾಕ್ ಮಾಡಿ ಸಾಹಸ ಮೆರೆಯಲು ಮೈಸೂರಿನ ಸರ್ಕಾರೇತರ ಸಂಸ್ಥೆ ಸ್ಪೀಸಿಸ್ ಸಂಸ್ಥಾಪಕರಲ್ಲೊಬ್ಬರಾದ ಕಾರ್ತಿಕ ಜಿ.ಕೆದಿಲಾಯ ಮುಂದಾಗಿದ್ದಾರೆ.ಎ.4ರಂದು ಬೆಳಗ್ಗೆ 7.30ಕ್ಕೆ ತಾಲೂಕಿನ ಅಮದಳ್ಳಿ ಜಟ್ಟಿಯಿಂದ ಹುಟ್ಟು ಹಾಕಲಿದ್ದಾರೆ. 18 ದಿನಗಳಲ್ಲಿ ಮಂಗಳೂರು ತಲುಪುವ ಗುರಿ ಇದ್ದು ಎ.21ರಂದು ಮಂಗಳೂರಿನಲ್ಲಿ ಕೊನೆಗೊಳ್ಳಲಿದೆ. ಅಮದಳ್ಳಿಯಿಂದ ಮಂಗಳೂರು ತನಕ 350 ಕಿ.ಮೀ. ಕಯಾಕ್ ಮಾಡಲಿದ್ದಾರೆ. ಪ್ರತಿ ದಿನ ಸೂರ್ಯೋದಯಕ್ಕಿಂತ ಅರ್ಧ ಗಂಟೆ ಮೊದಲು ಆರಂಭಿಸಿ ಮಧ್ಯಾಹ್ನ 1 ಅಥವಾ 2 ಗಂಟೆ ತನಕ ಕಯಾಕ್ ಮಾಡಲಿರುವ ಇವರು ಸೂರ್ಯಾಸ್ತದ ತರುವಾಯವೂ ಕೆಲ ಸಮಯ ಕಯಾಕ್ ನಡೆಸಲಿದ್ದಾರೆ.
ಬೋಟಿನಲ್ಲೇ ಪಾತ್ರೆ, ಪರಿಕರಗಳನ್ನು ಇಟ್ಟುಕೊಂಡು ಇಟ್ಟಿಗೆ ಒಲೆಯಲ್ಲಿ ಆಹಾರ ತಯಾರಿಸಿ ಊಟ ಮಾಡಲಿದ್ದಾರೆ. ರಾತ್ರಿ ಬೀಚಿನಲ್ಲಿ ಟೆಂಟ್ ಹಾಕಿ ಮಲಗಲಿದ್ದಾರೆ. ದೇವಾಲಯಗಳಲ್ಲಿ ಅವಕಾಶ ಇದ್ದಲ್ಲಿ ತಂಗಲಿದ್ದಾರೆ. ಕಯಾಕ್ ಗೆ ಸುಮಾರು ₹1.30 ಲಕ್ಷ ಬೇಕಾಗಲಿದ್ದು, ಎಲ್ಲ ವೆಚ್ಚವನ್ನೂ ಅವರೇ ಭರಿಸಲಿದ್ದಾರೆ. ಯಾರೇ ನೆರವು ನೀಡಿದರೂ ಸ್ವೀಕರಿಸುತ್ತೇನೆ ಎನ್ನುತ್ತಾರೆ.ಸ್ಪೀಸಿಸ್ ಸಂಸ್ಥೆ ವನ್ಯಜೀವಿ ಸಂರಕ್ಷಣೆ, ವನ್ಯಜೀವಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ, ಪರಿಸರ, ಪ್ರಕೃತಿ ಹಾಗೂ ವನ್ಯಜೀವಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಸಾಗರ ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ತಿಕ್ ಜಿ. ಕೆದಿಲಾಯ ಈ ಕಯಾಕ್ ಯಾತ್ರೆ ನಡೆಸಲಿದ್ದಾರೆ. speciesindia.com ವೆಬ್ ಸೈಟ್ ನಲ್ಲಿ ಇವರ ಚಟುವಟಿಕೆಗಳ ಕುರಿತು ಹೆಚ್ಚಿನ ವಿವರಗಳಿವೆ.
ಮೂಲತಃ ಮಲ್ಪೆ ಸಮೀಪದ ವಡ ಪಾಂಡೇಶ್ವರದವರಾದ ಕಾರ್ತಿಕ ಹುಟ್ಟಿ ಬೆಳೆದಿದ್ದೆಲ್ಲ ಶಿವಮೊಗ್ಗದಲ್ಲಿ. ಈ ಹಿಂದೆ ಮಲ್ಪೆಯಿಂದ ಒಂದು ದಿನದ ಅಂದರೆ 15-20 ಕಿ.ಮೀ. ಕಯಾಕ್ ಮಾಡುತ್ತಿದ್ದರು. ಈಗ ಈ ಸಾಹಸಕ್ಕೆ ಕೈ ಹಾಕಿದ್ದಾರೆ.ಪೋಲೆಂಡ್ ದೇಶದ ಅಲೆಕ್ಸಾಂಡರ್ ದೋಬಾ ಏಕಾಂಗಿಯಾಗಿ 4000 ಕಿ.ಮೀ. ಕಯಾಕ್ ಮಾಡಿದ್ದಾರೆ. ಮಹಾರಾಷ್ಟ್ರದ ಕೌಸ್ತುಬ್ ಖಾಡೆ 3000 ಕಿ.ಮೀ. ಕಯಾಕ್ ಮಾಡಿ ಲಿಮ್ಕಾ ರೆಕಾರ್ಡ್ ಮಾಡಿದ್ದಾರೆ. ಆದರೆ ಅವರನ್ನು ಬೋಟ್ ನಲ್ಲಿ ಕೆಲವರು ಹಿಂಬಾಲಿಸುತ್ತಿದ್ದರು. ಕಾರ್ತಿಕ ಸೋಲೋ ಆಗಿ ಕಯಾಕ್ ಮಾಡಲಿರುವುದು ವಿಶೇಷವಾಗಿದೆ.
ನಾನು ಇದೇ ಮೊದಲ ಬಾರಿಗೆ ಏಕಾಂಗಿಯಾಗಿ 320 ಕಿ.ಮೀ. ಕಯಾಕ್ ಮಾಡಲಿದ್ದು, ಕಡಲಿನ ಜೀವ ವೈವಿಧ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿದೆ ಎನ್ನುತ್ತಾರೆ ಕಾರ್ತಿಕ ಕೆದಿಲಾಯ.