ವರ್ಷದ ಕೊನೆಯ ದಿನ ಬೇಡಿಕೊಳ್ಳುವ ಉದ್ದೇಶದಿಂದ ಶ್ರೀಮಠದಲ್ಲಿ ವರ್ಷದ ಕೊನೆಯ ದಿನ ಕಾರ್ತಿಕ ದೀಪೋತ್ಸವ ಆಚರಿಸಲಾಗುತ್ತಿದೆ

ಕುರುಗೋಡು: ಮಠ ಮಂದಿರಗಳಲ್ಲಿ ಹಚ್ಚುವ ದೀಪ ನಾವು ತಿಳಿದು ತಿಳಿಯದೇ ಮಾಡಿದ ಪಾಪ ಕರ್ಮಗಳು ನಾಶವಾಗಲಿ ಎಂಬ ಸಂಕಲ್ಪ ಹೊಂದಿರಬೇಕು. ಪ್ರತಿಯೊಬ್ಬರು ದೀಪ ಹಚ್ಚಿ ತಪ್ಪು ಬಿಡುವುದಾಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದು ನಿರಂಜನ ಪ್ರಭು ಶ್ರೀ ಹೇಳಿದರು.

ಪಟ್ಟಣದ ಕೊಟ್ಟೂರು ಸ್ವಾಮಿಗಳ ಸಂಸ್ಥಾನ ಶಾಖಾ ವಿರಕ್ತ ಮಠದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ತಿಕೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಕಳೆದ ವರ್ಷ ಮಾಡಿದ ತಪ್ಪು, ದುಶ್ಚಟಗಳು ಮೋಸದ ಕೆಲಸಗಳಿಂದ ನಮಗೆ ಮುಕ್ತಿದೊರಕಲಿ ಎಂದು ವರ್ಷದ ಕೊನೆಯ ದಿನ ಬೇಡಿಕೊಳ್ಳುವ ಉದ್ದೇಶದಿಂದ ಶ್ರೀಮಠದಲ್ಲಿ ವರ್ಷದ ಕೊನೆಯ ದಿನ ಕಾರ್ತಿಕ ದೀಪೋತ್ಸವ ಆಚರಿಸಲಾಗುತ್ತಿದೆ ಎಂದರು.

ಕಾರ್ತಿಕ ಮಾಸದಲ್ಲಿ ರೈತಾಪಿ ವರ್ಗ ಕೆಲಸ ಮುಗಿಸಿ ಹಿಂದಿರುಗಲು ವಿಳಂಬದ ಹಿನ್ನೆಲೆ ನಮ್ಮ ಹಿರಿಯರು ನಿವಾಸದ ಮುಂದೆ ಹಾದು ಹೋಗುವವರಿಗೆ ಬೆಳಕಾಗಲೆಂದು ದೀಪ ಹಚ್ಚುತ್ತಿದ್ದರು. ಪುಸ್ತುತ ಸ್ವಲ್ಪ ಕತ್ತಲಾದರೆ ಸಾಕು, ಶುಲ್ಕದ ಭೀತಿಯಲ್ಲಿ ವಿದ್ಯುತ್ ದೀಪ ಆರಿಸುತ್ತೇವೆ. ಇದು ಪೂರ್ವಜರ ಮನಸ್ಥಿತಿ ಮತ್ತು ಈಗಿರುವ ಪರಿಸ್ಥಿತಿ ತಿಳಿಸುತ್ತದೆ ಎಂದರು.

ಮನುಷ್ಯ ವೈಯಕ್ತಿಕ ಅಭಿವೃದ್ಧಿಗೆ ಶ್ರಮಿಸಿದರೆ ಯಾರು ನೆನೆಯುವುದಿಲ್ಲ. ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದಾ ಸ್ಮರಣೀಯರಾಗಿರುತ್ತಾರೆ ಎನ್ನುವುದಕ್ಕೆ ಲಿಂ.ಸಂಗನಬಸವ ಶ್ರೀ ಉತ್ತಮ ನಿರ್ದಶನ ಎಂದರು.

ಲಿಂ.ಬಸಂಗನಬಸವ ಶ್ರೀ ಶ್ರೀಮಠದಲ್ಲಿ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡುವ ಕೆಲಸ ಮಾಡಿ ಜಿಲ್ಲೆಯಲ್ಲಿ ಎಲ್ಲರ ಗಮನ ಸೆಳೆದಿದ್ದರು. ಬಸವಪುರಾಣ ಆಯೋಜಿಸುವ ಮೂಲಕ ಬಸವತತ್ವ ಪ್ರಚಾರ ಮಾಡಿದರು, ರೈತರಿಗೂ ಒಳಿತು ಮಾಡುವ ಉದ್ದೇಶದಿಂದ ರೇಷ್ಮೆ ಬೆಳೆಗಾರರ ಸಮಾವೇಶ ಮಾಡಿದ ಕೀರ್ತಿ ಲಿಂ.ಬಸಂಗನಬಸವ ಶ್ರೀಗೆ ಸಲ್ಲುತ್ತದೆ. ಕೊಟ್ಟೂರು ಸ್ವಾಮಿಗಳ ಸಂಸ್ಥಾನ ಮಠ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲ ಸಮಾಜದವರು ಒಂದು ವೇದಿಕೆಯಲ್ಲಿ ಸೇರುವ ಭಾವೈಕ್ಯಕ ಕೇಂದ್ರಗಳಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಎಲ್ಲ ಶಾಖಾ ಮಠಗಳು ನಡೆಯುತ್ತಿವೆ ಎಂದರು.

ಸೋಸಮುದ್ರ ಗ್ರಾಮದ ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತಮಠದ ಸಿದ್ಧಲಿಂಗ ಶ್ರೀ ಮಾತನಾಡಿ, ವರ್ಷದ ಕೊನೆಯ ದಿನ ಮದ್ಯೆ, ಮದಿರೆ, ಮಾನಿನಿಯರ ಮೊರೆಹೋಗಿ ಜೀವನ ಹಾಳುಮಾಡಿಕೊಳ್ಳುವ ಜನರ ಮಧ್ಯೆ ಶ್ರೀಮಠದಲ್ಲಿ ಜರುಗುವ ಧರ್ಮಸಭೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಚಿಂತನೆಗಳನ್ನುಮೈಗೂಡಿಸಿಕೊಳ್ಳಲು ಜನರು ಸೇರಿರುವುದು ಉತ್ತಮ ಬೆಳವಣಿಗೆ ಮಠದವು ಸದಾ ಜನರ ಒಳಿತನ್ನು ಬಯಸಿದೆ. ಹೀಗಾಗಿ ದುಶ್ಚಟ ಬಿಡಿಸಲು ಮನೆ ಮನೆಗೆ ತೆರಳಿ ಅರವು ಮೂಡಿಸಲಾಗಿದೆ. ಇನ್ನು ಮುಂದೆ ಯಾರಿಗೂ ಅನ್ಯಾಯ, ಮೋಸ ಮಾಡುವುದಿಲ್ಲ. ಜತೆಗೆ ಶತ್ರುವನ್ನು ಸಮಾನವಾಗಿ ಕಾಣುವುದಕ್ಕೆ ಈ ಹೊಸ ವರ್ಷಕ್ಕೆ ಸಂಕಲ್ಪ ಮಾಡಬೇಕು ಎಂದರು.

ಸಿಪಿಐ. ವಿಶ್ವನಾಥ ಕೆ. ಹಿರೇಗೌಡರ್, ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿದರು. ಅಖಿಲಭಾರತ ವೀರಶೈವ,ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅರಿವಿ ಶರಣಪ್ಪ, ದೊಡ್ಡಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಾನಾಳು ಆನಂದ, ಎಸ್.ಶಶಿಗೌಡ, ಟಿ.ಎಚ್. ಮಲ್ಲೇಶಪ್ಪ, ಉಮಾಪತಿಗೌಡ ಮತ್ತು ಸದಾಶಿವಯ್ಯ ಸ್ವಾಮಿ ಇದ್ದರು.

ಕುರುಗೋಡು ಪಟ್ಟಣದ ಕೊಟ್ಟೂರುಸ್ವಾಮಿ ಮಠದಲ್ಲಿ ಬುಧವಾರ ಜರುಗಿದ ಕಾರ್ತಿಕೋತ್ಸವದಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನ ಶಾಖಾ ವಿರಕ್ತ ಮಠದ ನಿರಂಜನ ಪ್ರಭು ಶ್ರೀ ಆಶೀರ್ವಚನ ನೀಡಿದರು.