ಮಸೀದಿಯಲ್ಲಿ ಸೌಹಾರ್ದತೆ ಮೆರೆದ ಕಾರ್ತಿಕೋತ್ಸವ

| Published : Nov 16 2025, 02:30 AM IST

ಸಾರಾಂಶ

ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಗುರುವಾರ ಸಂಜೆ ಕಾರ್ತಿಕೋತ್ಸವ ಆಚರಿಸಿದ್ದು, ಸೌಹಾರ್ದಕ್ಕೆ ಮಾದರಿಯಾಗಿದೆ.

ಮಹೇಶ ಛಬ್ಬಿ

ಗದಗ: ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜ ಬಾಂಧವರು ಒಟ್ಟಾಗಿ ಗುರುವಾರ ಸಂಜೆ ಕಾರ್ತಿಕೋತ್ಸವ ಆಚರಿಸಿದ್ದು, ಸೌಹಾರ್ದಕ್ಕೆ ಮಾದರಿಯಾಗಿದೆ.

ಜಾತಿ, ಧರ್ಮಗಳ ನಡುವೆ ಭಿನ್ನ ವಿಭಿನ್ನ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಕಾಣುತ್ತೇವೆ. ಆದರೆ ಜಾತಿ, ಧರ್ಮದ ಹೆಸರಿನಲ್ಲಿ ಇಂದಿನ ದಿನಮಾನಗಳಲ್ಲಿ ಜಗಳ, ಕಲಹ, ತಂಟೆ-ತಕರಾರು ಸಾಮಾನ್ಯವಾಗಿದೆ. ಅದನ್ನೆಲ್ಲ ಮೀರಿ ಜಾತಿ, ಧರ್ಮ ಮರೆತು, ನಾವೆಲ್ಲ ಒಂದೇ ಎಂದು ಸಾರಿ ಹೇಳಲು ಕೆಲವೊಂದಿಷ್ಟು ಉದಾಹರಣೆಗಳು ಸಿಗುತ್ತವೆ. ಅಂತಹ ಒಂದು ವಿಶೇಷ ಕಾರ್ಯವನ್ನು ಬೆಟಗೇರಿಯ ರಜಪೂತ ಓಣಿಯ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಮಾಡಲಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಸಮಾಜದವರು ಒಟ್ಟಾಗಿ ಕಾರ್ತಿಕೋತ್ಸವ ಆಚರಿಸಿದ್ದಾರೆ. ಹಿಂದೂ ದೇವಾಲಯಗಳಲ್ಲಿ ಕಾರ್ತಿಕೋತ್ಸವದಲ್ಲಿ ನಡೆಯುವ ಎಲ್ಲ ಸಂಪ್ರದಾಯ-ಆಚರಣೆಗಳನ್ನು ಪಾಲಿಸಲಾಗಿದೆ.

ನೂರಾರು ವರ್ಷಗಳಿಂದ ಈ ಮಸೀದಿಯಲ್ಲಿ ಹಿಂದೂ-ಮುಸ್ಲಿಮರು ಸೇರಿ ಶ್ರದ್ಧಾ-ಭಕ್ತಿಯಿಂದ ಕಾರ್ತಿಕೋತ್ಸವ ಆಚರಿಸುತ್ತ ಬಂದಿದ್ದಾರೆ. ಅದರಂತೆ ಈ ವರ್ಷವೂ ಸಂಭ್ರಮದಿಂದ ಕಾರ್ಯಕ್ರಮ ನಡೆದಿದ್ದು, ನಾವೆಲ್ಲ ಒಂದೇ ಎಂಬ ಸಂದೇಶ ಸಾರಿದ್ದಾರೆ.

ಮಸೀದಿಗೆ ಅಲಂಕಾರ: ಕಾರ್ತಿಕೋತ್ಸವಕ್ಕೂ ಮುನ್ನ ಮಸೀದಿಯನ್ನು ಹಿಂದೂ-ಮುಸ್ಲಿಮರು ಸೇರಿ ಶುಚಿಗೊಳಿಸಿ, ಮಸೀದಿಯನ್ನು ಹೂವು, ತಳಿರು ತೋರಣಗಳಿಂದ ಅಲಂಕೃತಗೊಳಿಸಿದ್ದಾರೆ. ಆವರಣದಲ್ಲಿ ಮಹಿಳೆಯರು ರಂಗೋಲಿ ಹಾಕಿದ್ದಾರೆ. ಮಸೀದಿಯಲ್ಲಿ ದೀಪ ಹಚ್ಚಿ ಸಂಭ್ರಮಿಸಿದ್ದಾರೆ. ಈ ದೃಶ್ಯ ನೋಡುವುದೇ ಒಂದು ಖುಷಿ ಎಂದು ಸ್ಥಳೀಯರು ಹೇಳುತ್ತಾರೆ.

ದೂರದ ಊರುಗಳಿಂದ ಬರುವ ಭಕ್ತರು: ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಗೆ ಜಿಲ್ಲೆ, ಅಕ್ಕ-ಪಕ್ಕದ ಜಿಲ್ಲೆ, ಅಷ್ಟೇ ಅಲ್ಲದೆ ಬೇರೆ, ಬೇರೆ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ತಮ್ಮ ಇಷ್ಟಾರ್ಥ ಕೈಗೂಡಲಿ ಎಂದು ಪ್ರಾರ್ಥಿಸುತ್ತಾರೆ. ಯಾವುದೇ ಸಮಸ್ಯೆಯಿದ್ದರೂ ಇಲ್ಲಿಗೆ ಬಂದ ಆನಂತರ ಪರಿಹಾರ ಆಗುತ್ತದೆ, ಅಂತಹ ಒಂದು ಶಕ್ತಿ ಈ ಕ್ಷೇತ್ರದಲ್ಲಿದೆ ಎನ್ನುವುದು ಭಕ್ತರ ನಂಬಿಕೆ.

ಹಲವಾರು ವರ್ಷಗಳಿಂದ ಲಾಲ್ ಬಾಷಾ, ಹುಸೇನ್ ಬಾಷಾ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಸಮಾಜದವರು ಒಟ್ಟಾಗಿ ಇಲ್ಲಿ ಕಾರ್ತಿಕೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಅಷ್ಟೇ ಅಲ್ಲದೆ ಮೊಹರಂ ಸೇರಿದಂತೆ ಪ್ರತಿ ಹಬ್ಬ-ಹರಿದಿನಗಳನ್ನು ನಾವೆಲ್ಲ ಒಂದಾಗಿ ಆಚರಿಸುತ್ತೇವೆ. ಇಲ್ಲಿ ಯಾವುದೇ ಭೇದ-ಭಾವ ಇಲ್ಲದೆ ಎಲ್ಲರೂ ಒಂದಾಗಿ ಆಚರಣೆ ಮಾಡುವುದು ಖುಷಿ ನೀಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.