ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಐತಿಹಾಸಿಕ ಹಿನ್ನೆಲೆ ಹೊಂದಿರುವ ಧಾರ್ಮಿಕ ಸುಕ್ಷೇತ್ರ ಎಂದೇ ಖ್ಯಾತಿ ಪಡೆದ ಪುಷ್ಪಗಿರಿ ಕ್ಷೇತ್ರದಲ್ಲಿ ಇದೇ ನವೆಂಬರ್ ೨೦ ಮತ್ತು ೨೧ರಂದು ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ಹಾಗೂ ಶ್ರೀ ಪಾರ್ವತಮ್ಮನವರ ಕಾರ್ತಿಕ ಜಾತ್ರಾ ಮಹೋತ್ಸವ ನಡೆಯಲಿದೆ.ಸುದ್ದಿಗಾರೊಂದಿಗೆ ಮಾತನಾಡಿದ ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಗುರು ಕರಿಬಸವ ಅಜ್ಜಯ್ಯನವರ ಲಕ್ಷ ದೀಪೋತ್ಸವದ ಅಂಗವಾಗಿ ಧಾರ್ಮಿಕ ಸಮಾರಂಭ, ಸಮಾಜ ಸೇವಾ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಆಹ್ವಾನ ನೀಡಿದ್ದಾರೆ. ೧೨೦೦ ವರ್ಷಗಳ ಭವ್ಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪುಷ್ಪಗಿರಿ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಮತ್ತು ಇಲ್ಲಿನ ಪುಷ್ಪಗಿರಿ ಮಹಾಸಂಸ್ಥಾನಕ್ಕೆ ತನ್ನದೆಯಾದ ಐತಿಹ್ಯವಿದೆ. ಇಂತಹ ತಾಣದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಅಂತಿಮ ದಿನ ನಡೆಯುವ ಜಾತ್ರಾ ಮಹೋತ್ಸವ ಮತ್ತು ಪುಷ್ಪಗಿರಿ ಮಠದಲ್ಲಿ ನಡೆಯುವ ಲಕ್ಷ ದೀಪೋತ್ಸವ ಅತ್ಯಂತ ಪ್ರಮುಖ ಆಕರ್ಷಣೆ ಕೇಂದ್ರವಾಗಿದೆ. ಅಂತೆಯೇ ಗುರುವಾರ ಸಂಜೆ ೪ ಗಂಟೆಯಿಂದಲೇ ಶ್ರೀ ಮಲ್ಲಿಕಾರ್ಜುನಸ್ವಾಮಿಗೆ ವಿವಿಧ ಅಭಿಷೇಕ, ಮಹಾಮಂಗಳಾರತಿ, ಮಗ್ಗಿನಪೂಜೆ ಮತ್ತು ಇಡೀ ರಾತ್ರಿ ವೈವಿಧ್ಯಮಯ ಉತ್ಸವಗಳು ನಡೆಯಲಿದೆ. ಅಂದೇ ಸಂಜೆ ಭಕ್ತರಿಗೆ ಸಕಲ ಸೌಭಾಗ್ಯ ಕರುಣಿಸುವ ಪುಷ್ಪಗಿರಿ ಕ್ಷೇತ್ರದ ಶ್ರೀ ಗುರು ಕರಿಬಸವ ಅಜ್ಜಯ್ಯಸ್ವಾಮಿ ಮತ್ತು ಇಲ್ಲಿನ ೧೦೮ ಶಿವಲಿಂಗಗಳಿಗೆ ಬೃಹತ್ ಲಕ್ಷ ದೀಪೋತ್ಸವ ನಡೆಯಲಿದೆ. ಬಳಿಕ ಆದಿಯೋಗಿ ಶಿವನ ವಿಗ್ರಹದ ಮುಂದೆ ವೈಶಿಷ್ಟ್ಯಪೂರ್ಣ ಗಂಗಾರತಿ ಸಂಪ್ರದಾಯಬದ್ಧವಾಗಿ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಕೆ.ಸುರೇಶ್ ವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಅಭಿನಂದನೆ ಸಲ್ಲಿಸಲಾಗುತ್ತದೆ. ಎಲ್ಲಾ ಶಾಲಾ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ರಾತ್ತಿ ಉತ್ಸವಾದಿಗಳ ನಂತರ ೨೧ನೇ ಶುಕ್ರವಾರ ಬೆಳಿಗ್ಗೆ ೬-೩೦ಕ್ಕೆ ಎಣ್ಣೇ ಶಾಲೆ ಉತ್ಸವ ನಡೆಯುತ್ತದೆ. ಬರುವ ಸಾವಿರಾರು ಭಕ್ತರಿಗೆ ಎರಡು ದಿನ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ತನು-ಮನ-ಧನ ಸಹಕಾರ ನೀಡಬೇಕು ಎಂದು ತಿಳಿಸಿದರು.*ಹೇಳಿಕೆ-1
ಹೊಯ್ಸಳ ಸಾಮ್ರಾಜ್ಯದ ರಾಜರಿಗೆ ಮಾರ್ಗದರ್ಶನ ಮಾಡುತ್ತಿದ್ದ ಪುಷ್ಪಗಿರಿ ಮಠದ ಈ ಹಿಂದಿನ ಪರಮಪೂಜ್ಯರು ಈ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಇತ್ತೀಚಿನ ೧೫ ವರ್ಷಗಳಲ್ಲಿ ಪುಷ್ಪಗಿರಿ ಶ್ರೀ ಮಠ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಕೃಷಿ, ಪರಿಸರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದೆ. ಪುಷ್ಪಗಿರಿ ಮಹಾಸಂಸ್ಥಾನ ಒಂದು ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಸರ್ವ ಜನಾಂಗದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾ ಬಂದ ಕಾರಣದಿಂದ ಪುಷ್ಪಗಿರಿ ಸುಕ್ಷೇತ್ರ ಇಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಗುರುತಿಸಿಕೊಂಡಿದೆ.- ಗ್ರಾನೈಟ್ ರಾಜಶೇಖರ್ , ಮಠದ ಕಾರ್ಯದರ್ಶಿ
;Resize=(128,128))
;Resize=(128,128))
;Resize=(128,128))