ಸಾರಾಂಶ
ಕುಂದಾ ಬೆಟ್ಟದಲ್ಲಿರುವ ಬೊಟ್ಟಪ್ಪ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆ ವಿಜೃಂಭಣೆಯಿಂದ ನಡೆಯಿತು.
ಮಡಿಕೇರಿ: ಇತಿಹಾಸ ಪ್ರಸಿದ್ಧದ ಕುಂದಾ ಬೆಟ್ಟದಲ್ಲಿರುವ ಬೊಟ್ಲಪ್ಪ ದೇವಸ್ಥಾನದಲ್ಲಿ ಕೊನೆಯ ಕಾರ್ತಿಕ ಪೂಜೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಬೊಟ್ಟಿಯತ್ ನಾಡಿನ ಕುಂದಾ ಗ್ರಾಮದಲ್ಲಿರುವ ಕುಂದಾ ಬೆಟ್ಟದ ಮೇಲಿರುವ ಬೊಟ್ಲಪ್ಪ (ಈಶ್ವರ) ದೇವಸ್ಥಾನಕ್ಕೆ ಪಾಂಡವರ ಕಾಲದ ಇತಿಹಾಸವಿದ್ದು, ಕಲ್ಲಿನಲ್ಲಿ ನಿರ್ಮಿಸಲಾದ ಇಲ್ಲಿನ ದೇವಸ್ಥಾನವನ್ನು ಈ ಹಿಂದೆ ಪಾಂಡವರು ನಿರ್ಮಿಸಿದರು ಎಂಬ ಪ್ರತೀತಿಯಿದೆ. ಇಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ವಿಶೇಷ ಪೂಜೆ ಜರುಗುತ್ತದೆ. ಕಾವೇರಿ ತೀರ್ಥೋದ್ಭವ ಮರು ದಿನ ಇಲ್ಲಿ ನಡೆಯುವ ಬೋಡ್ ನಮ್ಮೆ ಕೊಡಗಿನ ಮೊದಲ ಬೋಡ್ ನಮ್ಮೆಯಾಗಿ ಸಂಭ್ರಮದಿಂದ ಆಚರಿಸಲ್ಪಟರೆ, ನಂತರ ಕಾರ್ತಿಕ ಮಾಸದಲ್ಲಿ ನಡೆಯುವ ಕಾರ್ತಿಕ ಪೂಜೆ ಹೊರತುಪಡಿಸಿದರೆ ಇಲ್ಲಿ ನಿತ್ಯಪೂಜೆಗಳು ನಡೆಯುವುದಿಲ್ಲ.ಕಾರ್ತಿಕ ಮಾಸದಲ್ಲಿ ನಾಲ್ಕು ಕಾರ್ತಿಕ ಸೋಮವಾರ ಇಲ್ಲಿ ವಿಶೇಷ ಪೂಜೆ ವರ್ಷಂಪ್ರತಿ ನಡೆಯುತ್ತಿದ್ದು, ಕೊನೆಯ ಕಾರ್ತಿಕ ಪೂಜೆಯ ದಿನವಾದ ಸೋಮವಾರ ಬೊಟ್ಟಿಯತ್ ನಾಡಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಆಗಮಿಸಿದರು. ಮನೆಯಪಂಡ ಕುಟುಂಬದ ತಕ್ಕಾಮೆಯಲ್ಲಿ ನಡೆದ ಕಾರ್ತಿಕ ಪೂಜೆ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.