ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮನುಷ್ಯನಿಗೆ ಸನ್ಮಾನ ವಿಷವಾಗುತ್ತದೆ, ಅವಮಾನ ಅಮೃತವಾಗುತ್ತದೆ ಎಂಬ ಪ್ರಾಜ್ಞರ ಮಾತಿನಂತೆ ಇಂದಿನ ನಿಮ್ಮ ಅಭಿಮಾನದ ಸನ್ಮಾನ ನನಗೆ ಸಾಕಷ್ಟು ಮುಜುಗರ ನೀಡುವ ಜೊತೆಗೆ ನಾನು ಇನ್ನೂ ಸಾಧಿಸಬೇಕಾದದ್ದು ಬಹುದೂರದ ದಾರಿ ಇದೆ ಎಂಬುದನ್ನು ತೋರಿಸುತ್ತಿದೆ ಎಂದು ಭಾವಿಸಿದ್ದೇನೆ ಎಂದು ಬಹುಭಾಷಾ ವಿದ್ವಾಂಸ, ಋಷಿಕುಲಂ ಗುರುಕುಲದ ಮುಖ್ಯಸ್ಥ ಡಾ. ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ಹೇಳಿದರು.ಪಟ್ಟಣದ ರವೀಂದ್ರನಗರದ ಶ್ರೀ ಶಕ್ತಿಗಣಪತಿ ದೇವಸ್ಥಾನದಲ್ಲಿ ೧೨ನೇ ಕಾರ್ತಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾನು ವಿದ್ಯಾರ್ಥಿ ಜೀವನ ಮತ್ತು ಅಧ್ಯಾಪಕನಾಗಿದ್ದಾಗ ದೇಶದ ಬಹುಭಾಗಗಳಲ್ಲಿ ಪುರಸ್ಕಾರ, ಸನ್ಮಾನ ಪಡೆದಿದ್ದೇನೆ. ಆದರೆ ಇಂದು ನನ್ನ ನೆಲದಲ್ಲಿ ಸಿಕ್ಕ ಸನ್ಮಾನ ಎಂಬ ಒಂದೇ ಕಾರಣಕ್ಕೆ ಸ್ವಲ್ಪ ಸಮಾಧಾನ ಪಡುತ್ತಿದ್ದೇನೆ. ನಮಗೆ ಎಂದಾದರೂ ನಮ್ಮ ತಂದೆ-ತಾಯಿ ಹೊಗಳಿದ್ದು ಸಿಗುತ್ತದೆಯೋ? ಅದು ತೀರಾ ಅಪರೂಪ, ಆ ದೃಷ್ಟಿಯಿಂದ ನಿಮ್ಮ ಪ್ರೀತಿಗೆ ಋಣಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಇನ್ನೂ ಶ್ರೇಷ್ಠ ಕಾರ್ಯಕ್ಕೆ ಮಹಾಗಣಪತಿ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ ಅವರು, ಇಂದು ದೇಶ ರಕ್ಷಿಸುವ ಯೋಧರಾದ ಧೂಳು ಸಿಂಧೆ ಇವರನ್ನೂ ಸನ್ಮಾನಿಸಿರುವುದು ಇನ್ನೂ ಹೆಚ್ಚಿನ ಸಂತಸ ತಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಾಮಾನ್ಯ ವ್ಯಕ್ತಿಗಳಾದ ನಾವು ಜೀವಾತ್ಮರಾಗಿ ಬದುಕಿನಲ್ಲಿ ಪೂರ್ಣದಿಂದ ಪರಿಪೂರ್ಣದೆಡೆಗೆ ಸಾಗಲು ಪರಮಾತ್ಮನಲ್ಲಿ ಸೇರಲು ಆಧ್ಯಾತ್ಮದ ಪ್ರವೇಶವನ್ನು ಮಾಡುತ್ತೇವೆ. ಆಧ್ಯಾತ್ಮದಲ್ಲಿ ಪರಮಾತ್ಮನನ್ನು ಸೇರುವ ತವಕದಲ್ಲಿ ನಮಗಿರುವಂತಹ ಶಕ್ತಿ ಸಾಂಸ್ಕೃತಿಕವಾದ ವೇದಿಕೆ. ಈ ಮೂಲಕ ನಾವು ದೇವರ ಧ್ಯಾನ, ಸ್ತೋತ್ರ, ಭಗವದ್ಗೀತೆ, ಸಹಸ್ರನಾಮಗಳ ಪಠಣೆಯ ಮೂಲಕ ದಿವ್ಯವಾದ ಶಕ್ತಿಯನ್ನು ಪಡೆಯುತ್ತೇವೆ. ಅದೇ ವೇದಿಕೆಗಳ ಶಕ್ತಿ. ಅದು ಸದಾ ಜೀವಂತವಾಗಿರಬೇಕು. ನಮ್ಮ ಯುವಕರು ಇದರ ಆವರಣದೊಳಗಡೆ ಬರಬೇಕು. ಆ ನೆಲೆಯಲ್ಲಿ ಶಕ್ತಿಗಣಪತಿ ದೇವಸ್ಥಾನದಲ್ಲಿ ೧೫ ದಿನಗಳ ಕಾಲ ಸಾಂಸ್ಕೃತಿಕ ಹಬ್ಬವೇ ನಡೆದಿದೆ ಎಂದರು.
ನಿವೃತ್ತ ಯೋಧ ಧೂಳು ಸಿಂಧೆ ತಮಗಿತ್ತ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಊರಲ್ಲಿ ನಾನು ಪದವಿ ಮಾಡಿದವ ಒಬ್ಬನೇ ಆಗಿದ್ದೆ. ನಮ್ಮೂರಿನ ಮೋಹನ ತಿನೇಕರ ಅವರ ಪ್ರೇರಣೆಯಿಂದ ನಾನು ಆರ್.ಎಸ್.ಎಸ್.ನವರ ಸಹಕಾರದಲ್ಲಿ ಸೇನೆಗೆ ಸೇರ್ಪಡೆಯಾದೆ. ಇಂದು ನನ್ನ ತಮ್ಮನೂ ಸೇನೆಯಲ್ಲಿದ್ದಾನೆ. ಕನಿಷ್ಠ ಮನೆಗೆ ಒಬ್ಬನಾದರೂ ಸೇನೆಗೆ ಸೇರ್ಪಡೆಗೊಳ್ಳಬೇಕು. ದೇಶದ ರಕ್ಷಣೆಗೆ ನಾವೆಲ್ಲ ಮಹತ್ವ ನೀಡಬೇಕು ಎಂದರು.ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷ ಅನಂತ ಗಾಂವ್ಕರ, ಹಿರಿಯರಾದ ಪಿ.ಜಿ. ಹೆಗಡೆ ಕಳಚೆ, ಸುಬ್ರಾಯ ಭಟ್ಟ ಹಂಡ್ರಮನೆ, ಮಾಚಣ್ಣ ಗವೇಗುಳಿ, ಸುಬ್ರಾಯ ಭಟ್ಟ ಆನೇಜಡ್ಡಿ, ನಗರಭಾಗಿ ಮಾತೃಮಂಡಳಿ ಅಧ್ಯಕ್ಷೆ ರಮಾ ದೀಕ್ಷಿತ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಶಾಂತಲಾ ಹೆಗಡೆ ಉಪಸ್ಥಿತರಿದ್ದರು. ಮಾತೆಯರು ಭಗವದ್ಗೀತೆ ಪಠಿಸಿದರು. ಡಿ.ವಿ. ಹೆಗಡೆ ಸ್ವಾಗತಿಸಿದರು, ವಿಜಯಲಕ್ಷ್ಮೀ ಹೆಗಡೆ ನಿರ್ವಹಿಸಿದರು. ಉಷಾ ಗಾಂವ್ಕರ ಸನ್ಮಾನ ಪತ್ರ ವಾಚಿಸಿದರು. ಸಿ.ಎಸ್. ಹೆಗಡೆ ವಂದಿಸಿದರು.
;Resize=(128,128))
;Resize=(128,128))
;Resize=(128,128))