ಸಾರಾಂಶ
ಹುಟ್ಟೂರಿಗೆ ಆಗಮಿಸಿದ ಯೋಧ ಕೆ.ಎಸ್. ಕರುಣಾಕರ್ ಅವರನ್ನು ತವರೂರಿನಲ್ಲಿ ಗ್ರಾಮಸ್ಥರು ಸ್ವಾಗತಿಸಿದರು. ಅವರು 2002ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೈನಿಕನಾಗಿ ಆಯ್ಕೆಯಾದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಇದೀಗ ಸೇವೆಯಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಯೋಧ ಕೆ.ಎಸ್. ಕರುಣಾಕರ್ ಅವರನ್ನು ತವರೂರಿನಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಕೋರಿದರು.ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಸಾರ್ವಜನಿಕರು ಮತ್ತು ಗ್ರಾಮಸ್ಥರು ಅದ್ಧೂರಿಯಾಗಿ ತಮ್ಮೂರಿನ ಸೈನಿಕನನ್ನು ಸ್ವಾಗತಿಸಿದರು.
ಶನಿವಾರಸಂತೆ ಸಮೀಪದ ಕಿರುಬಿಳಹ ಗ್ರಾಮದವರಾದ ಕೆ.ಎಸ್. ಕರುಣಾಕರ್ ಅವರು 2002ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೈನಿಕನಾಗಿ ಆಯ್ಕೆಯಾದರು. ದೇಶದ ವಿವಿಧ ಕಡೆಗಳಲ್ಲಿ ದೇಶಕ್ಕಾಗಿ ದುಡಿದ ಕರುಣಾಕರ್ ಜುಲೈ 31 ರಂದು ಸೇವೆಯಿಂದ ನಿವೃತ್ತಗೊಂಡರು. ಒಟ್ಟು 22 ವರ್ಷ ಸೇವೆ ಸಲ್ಲಿಸಿದ ಕರುಣಾಕರ್ ಭಾನುವಾರ ತವರೂರು ಕಿರು ಬಿಳಹ ಗ್ರಾಮಕ್ಕೆ ಆಗಮಿಸಿದರು.ಈ ಸಂದರ್ಭ ಅವರನ್ನು ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹಾಗೂ ಸಾರ್ವಜನಿಕರು, ಕಿರು ಬಿಳಹ ಗ್ರಾಮಸ್ಥರು ಮತ್ತು ಕರುಣಾಕರ್ ಕುಟುಂಬದವರು ಗುಡುಗಳಲೆ ಜಂಕ್ಷನ್‌ನಲ್ಲಿ ಸ್ವಾಗತಿಸಿ ಬರ ಮಾಡಿಕೊಂಡರು.
ನಂತರ ಅವರನ್ನು ತೆರದ ವಾಹನದಲ್ಲಿ ಮುಖ್ಯ ರಸ್ತೆ ಮೂಲಕ ಪಟ್ಟಣದ ಕೆ.ಆರ್.ಸಿಸಿ ವೃತ್ತದ ವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆ ಪ್ರಮುಖರು ಕರುಣಾಕರ್ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಯೋಧ ಕರುಣಾಕರ್, ರಾಷ್ಟ್ರ ಬಲಿಷ್ಠವಾಗಬೇಕಾದರೆ ಸೇನೆಯೂ ಬಲಿಷ್ಠರಾಗಿರಬೇಕು ಸೈನಿಕರಿಂದ ದೇಶ ಸುರಕ್ಷತೆ ಹೊಂದುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸೇನೆಗೆ ಸೇರಿಸಲು ಮನಸು ಮಾಡಬೇಕು. ಪೋಷಕರು ತಮ್ಮ ಮಕ್ಕಳಿಗೆ ದೇಶಭಕ್ತಿ, ರಾಷ್ಟ್ರ ಸುರಕ್ಷತೆ ಬಗ್ಗೆ ಹೇಳಿಕೊಡಬೇಕು ಇದರಿಂದ ರಾಷ್ಟ್ರಭಿಮಾನ ಮೂಡುತ್ತದೆ ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದ ಸೇನೆ ಬಲಿಷ್ಠವಾಗಿದೆ ಎಂದರು.
ಸೋಮವಾರಪೇಟೆ ಹಿಂದೂ ಜಾಗರಣಾ ವೇದಿಕೆಯ ಪ್ರಮುಖ ಸುಭಾಷ್, ಪ್ರಮುಖರಾದ ಪುನಿತ್ ತಾಳೂರು, ಸೋಮಶೇಖರ್ ಪೂಜಾರ್, ಬಿಳಹ ದಿನೇಶ್, ಪ್ರಜ್ವಲ್, ಸುನಿಲ್, ಎಸ್.ಎನ್. ರಘು, ಬಿ.ಎಸ್. ಅನಂತ್‍ಕುಮಾರ್ ಕರುಣಾಕರ್ ತಂದೆ ಶಂಕರಪ್ಪ, ತಾಯಿ ಪಾರ್ವತಿ, ಪತ್ನಿ ರೀನಾ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆ ವತಿಯಿಂದ ಠಾಣಾಧಿಕಾರಿ ಗೋವಿಂದ್ ರಾಜ್ ಪೊಲೀಸ್ ಇಲಾಖೆ ಪರವಾಗಿ ಕರುಣಾಕರ್ ಅವರನ್ನು ಸನ್ಮಾನಿಸಿದರು.