ಸಾಹಿತ್ಯಕ್ಕೆ ಕಾರವಾರ ಪರಿಸರ ಪ್ರೇರಣೆ: ಪ್ರೇಮಾ ಟಿಎಂಆರ್‌

| Published : Nov 25 2024, 01:00 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನ ಸಾಲದು, ಸಾಮಾನ್ಯ ಜ್ಞಾನ, ಸಾಹಿತ್ಯಕ ಜ್ಞಾನ, ಸಮಾಜ ಜ್ಞಾನದ ಅಗತ್ಯ ಇದೆ.

ಕಾರವಾರ: ಕಾರವಾರದ ಮಣ್ಣಿನಲ್ಲಿ ಸಾಹಿತ್ಯದ ಸಾರವಿದೆ. ಕಾರವಾರದ ಪರಿಸರದಲ್ಲಿ ಸಾಹಿತ್ಯಕ ಪ್ರೇರಣೆ ಇದೆ. ಕಾರವಾರದಲ್ಲೇ ಬರವಣಿಗೆ ಆರಂಭಿಸಿದ ರವೀಂದ್ರನಾಥ ಠಾಗೋರ ನೊಬೆಲ್ ಪ್ರಶಸ್ತಿ ಪಡೆದಿರುವುದು, ಕಾರವಾರದ ಮಣ್ಣಿನ ಮಗ ಮಹಾಬಲೇಶ್ವರ ಸೈಲ್ ಸರಸ್ವತಿ ಸನ್ಮಾನಕ್ಕೆ ಭಾಜನರಾಗಿರುವುದನ್ನು ಉದಾಹರಿಸುತ್ತೇನೆ ಎಂದು ಸಾಹಿತಿ ಪ್ರೇಮಾ ಟಿಎಂಆರ್ ತಿಳಿಸಿದರು.

ನಗರದಲ್ಲಿ ನಡೆದ ಸಮಾರಂಭದಲ್ಲಿ ವಿ.ಪಿ. ನಾಯ್ಕ ಅವರ ಮೇದಿನಿ ಕವನ ಸಂಕಲನದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೇದಿನಿ ಕವನ ಸಂಕಲನ ಬಿಡುಗಡೆಗೊಳಿಸಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜೊರ್ಜ್ ಫರ್ನಾಂಡಿಸ್, ವಿದ್ಯಾರ್ಥಿಗಳಿಗೆ ಕೇವಲ ಪಠ್ಯದ ಜ್ಞಾನ ಸಾಲದು, ಸಾಮಾನ್ಯ ಜ್ಞಾನ, ಸಾಹಿತ್ಯಕ ಜ್ಞಾನ, ಸಮಾಜ ಜ್ಞಾನದ ಅಗತ್ಯ ಇದೆ. ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕು. ಸಾಹಿತ್ಯ ಕೃತಿಗಳನ್ನು ಓದಬೇಕು ಎಂದರು.ಮೇದಿನಿ ಪುಸ್ತಕ ಪರಿಚಯ ಮಾಡಿದ ವಿಶ್ರಾಂತ ಉಪನ್ಯಾಸಕ ಮಾಣೇಶ್ವರ ನಾಯಕ, ಕನ್ನಡ ಸಾಹಿತ್ಯ ಲೋಕದಲ್ಲಿ ವಿಕ್ರಮ ನಾಯ್ಕ ಅವರದ್ದು ದಿಟ್ಟ ಹಾಗೂ ಗಟ್ಟಿ ಹೆಜ್ಜೆ. ಷಟ್ಪದಿಯಲ್ಲಿ ಕಾವ್ಯ ರಚಿಸುವ ಮೂಲಕ ಛಂದಸ್ಸಿನ ಯಶಸ್ವಿ ಪ್ರಯೋಗ ಮಾಡಿದ್ದಾರೆ. ಮೇದಿನಿ ಸರಳವಾಗಿ ಓದಿಸಿಕೊಳ್ಳುವ, ಸಾಮಾನ್ಯರಿಗೂ ಅರ್ಥವಾಗುವ ಸಂಕಲನವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲೆ ಕಲ್ಪನಾ ಗಾಂವಕರ, ವಿ.ಪಿ. ನಾಯ್ಕರು ನಿವೃತ್ತಿ ನಂತರದ ವಿಶ್ರಾಂತಿ ಸಮಯವನ್ನು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸದುಪಯೋಗಪಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಕವಿ ವಿ.ಪಿ. ನಾಯ್ಕ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಕಾಲೇಜು ವಿದ್ಯಾರ್ಥಿಯರ ಪ್ರಾರ್ಥನೆ ವಿದ್ಯಾ ನಾಯ್ಕ ಮತ್ತು ಸಂಗಡಿಗರ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಿವಾನಂದ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಬಾಬು ಶೇಖ ವಂದಿಸಿದರು.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಿಡೀ ಹಮ್ಮಿಕೊಂಡ ಸಾಹಿತ್ಯ ಪಯಣ ಕನ್ನಡ ಕಾರ್ತಿಕ ಅಭಿಯಾನದ ಅಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕು ಘಟಕದಿಂದ ಕಾರವಾರದ ಸರ್ಕಾರಿ ಪದವಿಪೂರ್ವ ಕಾಲೇಜು ಸಹಕಾರದೊಂದಿಗೆ ವಿ.ಪಿ. ನಾಯ್ಕರ ಮೇದಿನಿ ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.