ಸಾರಾಂಶ
ಕಾರವಾರ: ಪಾರ್ಕಿನಲ್ಲಿ ಕುಳಿತು ಸಿಗರೇಟ್ ಸೇದುವುದನ್ನು ನೋಡಿದ್ದೀರಾ, ಯುವಕ ಯುವತಿಯರ ಸಲ್ಲಾಪವೂ ಹೊಸದಲ್ಲ, ಹರಟೆ ಹೊಡೆಯುವುದೂ ಗೊತ್ತು. ಆದರೆ, ಈ ಭಾನುವಾರದಿಂದ ನಗರಸಭೆ ಪಕ್ಕದ ಗಾಂಧಿ ಪಾರ್ಕಿನಲ್ಲಿ ಪುಸ್ತಕ ಹಿಡಿದು ಓದುವವರು ನಿಮ್ಮ ಕಣ್ಣಿಗೆ ಬೀಳಲಿದ್ದಾರೆ.
ಕಾರವಾರ ರೀಡ್ಸ್ ಎಂಬ ಈ ಯೋಚನೆ ಕಾರವಾರಿಗರಿಗೆ ಹೊಸದು. ಪ್ರತಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ 11 ಗಂಟೆ ತನಕ ಎರಡು ಗಂಟೆಗಳ ಕಾಲ ನಿಶ್ಚಿಂತೆಯಿಂದ ನಿಮ್ಮಿಷ್ಟದ ಪುಸ್ತಕ ತಂದು ಪ್ರಕೃತಿಯ ಮಡಿಲಲ್ಲಿ ಓದಬಹುದು.ಸಮಾನ ಮನಸ್ಕರೊಂದಿಗೆ ಕುಳಿತು ಓದುವುದು, ಹೆಚ್ಚು ಓದಲು ಇನ್ನಷ್ಟು ಪ್ರೇರಣೆ ನೀಡಲಿದೆ. ಇದರಿಂದ ಓದುವ ಹವ್ಯಾಸ ಬೆಳೆಯಲಿದೆ. ಜ್ಞಾನ ವೃದ್ಧಿಯಾಗಲಿದೆ. ಭಾನುವಾರ ಕಾರವಾರದಲ್ಲಿ ಸಂತೆ, ಕಾಯಿಪಲ್ಲೆಗಳ ಭರ್ಜರಿ ಮಾರಾಟ ನಡೆಯುತ್ತದೆ. ಹಾಗೆಯೇ ಓದುವ ಸಂತೆಯೂ ಶುರುವಾಗಲಿದೆ.
ಕಬನ್ ಪಾರ್ಕಿನಲ್ಲಿ ಪುಸ್ತಕಗಳನ್ನು ಹಿಡಿದು ಓದುತ್ತಿರುವುದು, ಮುಂಬಯಿಯಲ್ಲಿ ಬಾಂಬೇ ಬುಕರ್ಸ್ ನೋಡಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರಿಗೆ ಕಾರವಾರದಲ್ಲೂ ಇಂತಹ ಸಂಸ್ಕೃತಿಯನ್ನು ಹುಟ್ಟುಹಾಕುವ ಯೋಚನೆ ಬಂತು. ಆದರೆ ಅವರು ಇದನ್ನು ಎಲ್ಲೂ ಹೇಳಿಕೊಳ್ಳದೆ ಜಾರಿಗೊಳಿಸಿದ್ದಾರೆ.ಯಾವುದೇ ವಯಸ್ಸಿನ ಮಿತಿಯಿಲ್ಲದೇ, ಯಾವುದೇ ನೋಂದಣಿ ಶುಲ್ಕವಿಲ್ಲದೇ ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದ್ದು, ಕುಡಿಯುವ ನೀರು, ಕುಳಿತುಕೊಳ್ಳಲು ಮ್ಯಾಟ್ ಮತ್ತು ತಮ್ಮಿಷ್ಟದ ಪುಸ್ತಕದೊಂದಿಗೆ ಬಂದು ಪುಸ್ತಕ ಪ್ರಿಯರೊಂದಿಗೆ ಬೆರೆಯಬಹುದಾಗಿದೆ.
ಓದಿನ ಜತೆಗೆ ಒಂದಷ್ಟು ಮಾತು ಕಥೆ ಮತ್ತು ಕೊನೆಗೆ ಗ್ರೂಪ್ ಫೋಟೋ ಕೂಡಾ ತೆಗದುಕೊಳ್ಳಬಹುದು. ಕಾರವಾರದ ಪುಸ್ತಕ ಪ್ರಿಯರಿಗೆ ಇದೊಂದು ಅಚ್ಚುಮೆಚ್ಚಿನ ತಾಣವಾಗಲಿದೆ.ಕಾರವಾರದಲ್ಲಿ ಮೆಡಿಕಲ್ ಕಾಲೇಜು ಇದೆ. ಬೇರೆ ಬೇರೆ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳೂ ಇದ್ದಾರೆ. ಮನೆಯಲ್ಲಿ ಓದಲು ತೊಂದರೆ ಇದ್ದಲ್ಲಿ ಈ ಸ್ಥಳವನ್ನು ಬಳಸಿಕೊಳ್ಳಬಹುದು. ಇಲ್ಲಿ ಯಾವುದೆ ಅಡೆತಡೆಯೂ ಇರದು. ಉಳಿದಂತೆ ಪುಸ್ತಕಪ್ರಿಯರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಪ್ರಕೃತಿ ಸೌಂದರ್ಯ
ಕಾರವಾರದಲ್ಲಿ ಅಗಾಧವಾದ ಪ್ರಕೃತಿ ಸೌಂದರ್ಯ ಇದೆ. ಇಂತಹ ಪರಿಸರದಲ್ಲಿ ಓದುವ ಮೂಲಕ ಹೆಚ್ಚು ಜ್ಞಾನ ಗಳಿಸಬಹುದು. ಇದು ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಜನತೆ, ಸಂಘ ಸಂಸ್ಥೆಗಳು ಇದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ.ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ