ಕಸಾಪದಿಂದ ಸಾಹಿತ್ಯಿಕ ವಾತಾವರಣ ನಿರ್ಮಾಣ: ಶಾಸಕ ಆರ್.ವಿ. ದೇಶಪಾಂಡೆ

| Published : Jul 03 2025, 11:49 PM IST

ಕಸಾಪದಿಂದ ಸಾಹಿತ್ಯಿಕ ವಾತಾವರಣ ನಿರ್ಮಾಣ: ಶಾಸಕ ಆರ್.ವಿ. ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಸಾಪದಿಂದ ಉತ್ತಮ ಸಾಹಿತ್ಯಿಕ ವಾತಾವರಣ ನಿರ್ಮಾಣವಾಗಿದೆ.

ಹಳಿಯಾಳ: ಜಿಲ್ಲೆಯಲ್ಲಿ ಕಸಾಪದಿಂದ ಉತ್ತಮ ಸಾಹಿತ್ಯಿಕ ವಾತಾವರಣ ನಿರ್ಮಾಣವಾಗಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಅವಶ್ಯಕವಾಗಿರುವ ಪ್ರೇರಣೆ ಪ್ರೋತ್ಸಾಹ ನೀಡುವಂತಹ ಅಭಿನಂದನೀಯವಾದ ನುಡಿ ಸೇವೆಯನ್ನು ಕಸಾಪ ಮಾಡುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಬುಧವಾರ ಸಂಜೆ ಪಟ್ಟಣದ ಕಾರ್ಮೆಲ್ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ಹಳಿಯಾಳ ತಾಲೂಕ ಘಟಕದ ಆಶ್ರಯದಲ್ಲಿ ಆಯೋಜಿಸಿದ 2024-25ನ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಪಾಠ ಕಲಿಸಿದ ಶಿಕ್ಷಕರಿಗೆ ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾದರಿ ನುಡಿ ಸೇವೆ:

21ನೇ ಶತಮಾನದಲ್ಲಿ ಶೈಕ್ಷಣಿಕ ಸೌಲಭ್ಯಗಳು ಹೆಚ್ಚಾದವು. ಅದರೊಂದಿಗೆ ಪೈಪೋಟಿ ಎದುರಾದವು. ಇದರರ್ಥ ವಿದ್ಯಾರ್ಥಿಗಳು ಇನ್ನು ಮುಂದೆ ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧರಾಗಬೇಕು. ಕೌಶಲ್ಯ ಬುದ್ಧಿಮತ್ತೆ, ಜಾಣ್ಮೆ ಇದ್ದವನೇ ಈಗ ಯಶಸ್ವಿಯಾಗುತ್ತಾನೆ ಎಂದರು.

ಕನ್ನಡ ಭಾಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಹಾಗೂ ಈ ಸಾಧನೆಗೆ ಪ್ರೇರಕರಾದ ಶಿಕ್ಷಕರನ್ನು ಗೌರವಿಸುವ ಮಾದರಿ ಕಾರ್ಯಕ್ರಮವನ್ನು ಕಸಾಪ ಹಮ್ಮಿಕೊಂಡಿದೆ. ಕಸಾಪ ಕೈಗೊಳ್ಳುವ ಜನಪರ ಕಾರ್ಯಗಳಿಗೆ ಸದಾ ನನ್ನ ಬೆಂಬಲವಿರಲಿದೆ ಎಂದರು.

ನಾಲ್ಕು ವರ್ಷಗಳಿಂದ ಸಾಧಕರಿಗೆ ಸನ್ಮಾನ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುತ್ತಿದೆ. ಆರಂಭದ ವರ್ಷದಲ್ಲಿ ಸಾಧಕರ ಸಂಖ್ಯೆಯು ಸಾವಿರ ಇದ್ದದ್ದು ಈಗ 825ಕ್ಕೆ ಬಂದು ತಲುಪಿದೆ ಎಂದು ಖೇದ ವ್ಯಕ್ತಪಡಿಸಿದರು.

ಮಕ್ಕಳು ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಕೊಳ್ಳಬೇಕು. ಇಂದು ನಡೆಸಿದ ಕಾರ್ಯಕ್ರಮ ಮುಂಬರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂಬ ಸದಾಶಯದೊಂದಿಗೆ ನಾವು ಈ ಕಾರ್ಯಕ್ರಮವನ್ನು ಜಿಲ್ಲೆಯೆಲ್ಲೆಡೆ ಆಯೋಜಿಸುತ್ತಿದ್ದೆವೆ ಎಂದರು.

ನೂತನ ಡಿಡಿಪಿಐ ಡಿ.ಆರ್. ನಾಯ್ಕ್, ಬಿಇಒ ಪ್ರಮೋದ ಮಹಾಲೆ, ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೂಸುರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕಷ ಸತೀಶ ನಾಯಕ ಬಾವಿಕೇರಿ, ಕಾರ್ಮೆಲ್ ಪ್ರೌಢಶಾಲೆ ಮುಖ್ಯೋಧ್ಯಾಪಿಕೆ ಸಿಸ್ಟರ್ ಜ್ಯೋತಿ ಪಿರೇರಾ ಇದ್ದರು.

ಕಸಾಪ ತಾಲೂಕ ಅಧ್ಯಕ್ಷೆ ಸುಮಂಗಲಾ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯದರ್ಶಿ ಶಾಂತಾರಾಮ ಚಿಬುಲಕರ, ಗೌರವ ಕೋಶಾಧ್ಯಕ್ಷ ಕಾಳಿದಾಸ ಬಡಿಗೇರ, ಗೋಪಾಲ ಅರಿ, ಬಸವರಾಜನ ಇಟಗಿ, ವಿಠ್ಠಲ ಕೋರ್ವೆಕರ ಇದ್ದರು.